More

    ನೆಚ್ಚಿನ ಶಿಕ್ಷಕರಿಗಾಗಿ ಕಣ್ಣೀರಿಟ್ಟ ಮಕ್ಕಳು, ಸೋಂಪುರ ಸರ್ಕಾರಿ ಶಾಲೆ ಚಿಣ್ಣರ ಮನಕಲಕುವ ದೃಶ್ಯ, ಬೇರೆ ಶಾಲೆಗೆ ಹೋಗದಂತೆ ಪಟ್ಟು

    ದಾಬಸ್‌ಪೇಟೆ: ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು. ಆದರೆ ಇವರ ವರ್ಗಾವಣೆ ಸುದ್ದಿ ಕೇಳಿದ 100ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರ ಕಾಲು ಹಿಡಿದು ಎಲ್ಲೂ ಹೋಗದಂತೆ ಕಣ್ಣೀರು ಹಾಕಿರುವ ಘಟನೆ ಲಕ್ಕೂರಿನಲ್ಲಿ ನಡೆದಿದೆ.

    ಸೋಂಪುರ ಹೋಬಳಿ ಅಗಳಕುಪ್ಪೆ ಗ್ರಾಪಂನ ಸೋಂಪುರ ಕ್ಲಸ್ಟರ್‌ನ ಲಕ್ಕೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ವರ್ಷಗಳಿಂದ ಶಿಕ್ಷಕರಾಗಿದ್ದ ಸಿ.ಗಂಗಮಲ್ಲಯ್ಯ ಎಂಬುವವರು ಮಕ್ಕಳಿಗೆ ಮನದಟ್ಟಾಗುವ ರೀತಿ ಪಾಠ ಮಾಡುವ ಜತೆಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು. ಮಕ್ಕಳಿಗೆ ಪಾಠದ ಜತೆಗೆ ಆಟವನ್ನೂ ಹೇಳಿಕೊಡುತ್ತಿದ್ದರು. ಇದರಿಂದಾಗಿ ಅವರು ಎಂದರೆ 125 ವಿದ್ಯಾರ್ಥಿಗಳಿಗೂ ತುಂಬಾ ಇಷ್ಟ. ಆದರೆ, ವಯಸ್ಸಾದ ಪಾಲಕರ ಆರೈಕೆ ದೃಷ್ಟಿಯಿಂದ ಸ್ವಗ್ರಾಮ ದಾಸೇನಹಳ್ಳಿ ಪಕ್ಕದ ಬೆಣವನಹಳ್ಳಿ ಶಾಲೆಗೆ ವರ್ಗಾವಣೆ ಪಡೆದುಕೊಂಡಿದ್ದಾರೆ. ಡಿ.1ರಂದು ಅವರಿಗೆ ವರ್ಗಾವಣೆ ಆದೇಶ ತಲುಪಿ, ಬಿಡುಗಡೆಯನ್ನೂ ಪಡೆದುಕೊಂಡಿದ್ದಾರೆ.
    ವಿಷಯ ತಿಳಿಯುತ್ತಲೇ ಬೇಸರಗೊಂಡ ಮಕ್ಕಳು, ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಿದ ಕ್ರಮಕ್ಕೆ ಆಕ್ಷೇಪಿಸಿದರು. ಅಲ್ಲದೆ, ಗಂಗಮಲ್ಲಯ್ಯ ಮೇಷ್ಟ್ರು ತಮ್ಮ ಶಾಲೆಯಲ್ಲೇ ಉಳಿಯಬೇಕು. ಅವರು ತಕ್ಷಣವೇ ಶಾಲೆಗೆ ಬರಬೇಕು, ಅವರು ಬರುವವರೆಗೂ ಊಟ, ನೀರು ಸೇವಿಸುವುದಿಲ್ಲ ಎಂದು ಹಠ ಹಿಡಿದಿದ್ದರು.

    ಮಕ್ಕಳ ಮಾತಿಗೆ ಸೋತು ಶಾಲೆಗೆ ಬಂದ ಗಂಗಮಲ್ಲಯ್ಯ ಅವರು, ಪಾಲಕರ ಬಗ್ಗೆ ಮಾಹಿತಿ ನೀಡಿ, ಲಕ್ಕೂರಿನಿಂದ ತಮ್ಮ ಊರಿಗೆ 15 ಕಿ.ಮೀ. ದೂರವಾಗುತ್ತದೆ. ಅದೇ ಬೆಣವನಹಳ್ಳಿಗೆ 1 ಕಿ.ಮೀ. ಆಗುತ್ತದೆ. ಹಾಗಾಗಿ, ಅಲ್ಲಿಗೆ ವರ್ಗಾವಣೆ ಪಡೆದುಕೊಂಡಿದ್ದೇನೆ. ದಯವಿಟ್ಟು ಹೋಗಲು ಅವಕಾಶ ಮಾಡಿಕೊಡುವಂತೆ ಮಕ್ಕಳಲ್ಲಿ ಮನವಿ ಮಾಡಿಕೊಂಡರು. ಮಕ್ಕಳು ಇದಕ್ಕೆ ಸಮ್ಮತಿಸಿದರು ಎನ್ನಲಾಗಿದೆ.

    ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದೇನೆ. ಗಂಗಮಲ್ಲಯ್ಯ ಮೇಷ್ಟ್ರು ನಮ್ಮೊಂದಿಗೆ ಮಕ್ಕಳಂತೆ ಬೆರೆತು, ಪಾಠದ ಜತೆಗೆ ಆಟವನ್ನೂ ಹೇಳಿಕೊಡುತ್ತಿದ್ದರು. ಇಂಥ ಶಿಕ್ಷಕರು ಸರ್ಕಾರಿ ಶಾಲೆಗಳಿಗೆ ತುಂಬಾ ಅಗತ್ಯವಾಗಿದ್ದಾರೆ. ಇವರ ಸ್ಥಾನಕ್ಕೆ ಬರುವವರೂ ಇವರಂತೆ ಮಕ್ಕಳೊಂದಿಗೆ ಬೆರೆಯಲಿ.
    ಲಿಖಿತಾ, ಶಾಲೆಯ ಹಳೇ ವಿದ್ಯಾರ್ಥಿನಿ

    ಶಿಕ್ಷಕ ವೃತ್ತಿಯಲ್ಲಿ ಮಕ್ಕಳೊಂದಿಗೆ ಇಂಥ ಒಡನಾಟ ಸಹಜ. ಇಲ್ಲವಾದರೆ ಶಿಕ್ಷಕ ವೃತ್ತಿಗೆ ಬೆಲೆಯೇ ಇರುವುದಿಲ್ಲ. ಗಂಗಮಲ್ಲಯ್ಯ ಅವರ ಜತೆ ಮಕ್ಕಳು ಅವಿನಾಭಾವ ಹೊಂದಿದ್ದರು. ಅವರಿಂದ ಪಾಠ ಹೇಳಿಸಿಕೊಂಡ ಎಷ್ಟೋ ಮಕ್ಕಳು ಇಂದು ಇಂಜಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ವರ್ಗಾವಣೆ ಬೇಸರ ತಂದಿದೆ.
    ಕೆ.ರಮೇಶ್ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts