More

    ನೂರು ದಿನ ಸಾವಿರ ಹಳ್ಳಿ ಯಶಸ್ಸಿಗೆ ಪಣ -ಮನೆಗಳಿಂದ ವಂತಿಗೆ ಸಂಗ್ರಹಕ್ಕೆ ನಿರ್ಧಾರ -ಕುರುಬ ಸಮಾಜದ ಸಭೆಯಲ್ಲಿ ಚರ್ಚೆ 

    ದಾವಣಗೆರೆ : ಕನಕ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ, 2024ರ ಜನವರಿಯಲ್ಲಿ ಹಮ್ಮಿಕೊಳ್ಳಲಿರುವ ‘ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮ ಯಶಸ್ಸಿಗೆ ಸಮಾಜದ ಪ್ರತಿ ಮನೆಯಿಂದ ವಂತಿಗೆ ಸಂಗ್ರಹಿಸಲು ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಕುರುಬ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
    ಅಲ್ಲದೇ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭೇಟಿ ನೀಡಿ, ಪ್ರವಚನ ನೀಡುವ ಹಳ್ಳಿಗಳಲ್ಲಿ ಜನರಿಂದ ಸಂಗ್ರಹಿಸುವ ಕಾಣಿಕೆ ಹಣವನ್ನು ಶಾಖಾ ಮಠದಿಂದ ನಡೆಸುವ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ನಿಶ್ಚಯಿಸಲಾಯಿತು. ಪ್ರತಿ ಹಳ್ಳಿಯ ಕಾರ್ಯಕ್ರಮಗಳಲ್ಲಿ ಸಮಾಜದ ಎಲ್ಲ ಹಂತದ ಜನರು ಭಾಗಿಯಾಗುವಂತೆ ಮನವಿ ಮಾಡಲಾಯಿತು.
    ಸಭೆಯಲ್ಲಿ ಮಾತನಾಡಿದ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ, ದಾವಣಗೆರೆ ನಗರದಲ್ಲಿ ಕುರುಬ ಸಮಾಜದ ಸಂಘಟನೆ ಜಾಗೃತವಾಗಿದೆ. ನಗರದ ಬೀರಪ್ಪನ ದೇವಸ್ಥಾದಲ್ಲಿ ಸ್ವಾಮೀಜಿ ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕಿದೆ. ಸಂಗ್ರಹವಾಗುವ ಹಣವನ್ನು ಹೊಸದುರ್ಗ ಕನಕ ಶಾಖಾ ಮಠದಲ್ಲಿ ಕನಕದಾಸರ ಏಕ ಶಿಲಾಮೂರ್ತಿ ಹಾಗೂ ಮಠದ ಅಭಿವೃದ್ಧಿಗೆ ಸ್ವಾಮೀಜಿ ಬಳಸಲಿದ್ದಾರೆ ಎಂದರು.
    ಶಿವಕುಮಾರ ಒಡೆಯರ್ ಮಾತನಾಡಿ, ಹೊಸದುರ್ಗದ ಕೆಲ್ಲೋಡ್ ಕನಕ ಶಾಖಾ ಮಠದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಶಾಲಾ-ಕಾಲೇಜು, ವಿಶ್ವದ ಅತಿ ಎತ್ತರದ ಕನಕದಾಸರ ಮೂರ್ತಿ ನಿರ್ಮಾಣ ನನೆಗುದಿಯಲ್ಲಿದೆ. ಈ ಎಲ್ಲ ಕಾರ್ಯಗಳಿಗಾಗಿ ಜನರು ಕೈಜೊಡಿಸಬೇಕು. ಹಳ್ಳಿಗಳಲ್ಲಿ ಪ್ರತಿ ಮನೆಯಿಂದ ವಂತಿಕೆ ಸಂಗ್ರಹಿಸೋಣ ಎಂದು ತಿಳಿಸಿದರು.
    ಜಿಲ್ಲೆಯಲ್ಲಿ ಕುರುಬ ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಿಂದಿದೆ. ಒಬ್ಬ ಶಾಸಕರೂ ಇಲ್ಲದ ದುಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ನಮ್ಮವರೇ ಇದ್ದರೂ ಎರಡನೇ ಹಂತದ ನಾಯಕರು ಬೆಳೆದಿಲ್ಲ. ಹೀಗಾಗಿ ಸಮಾಜದ ಏಳಿಗೆಗೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
    ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಬಿ.ಜಿ.ವಿಜಯಕುಮಾರ್ ಮಾತನಾಡಿ ಸಮಾಜವನ್ನು ಆರ್ಥಿಕವಾಗಿ ಬೆಳೆಸಬೇಕಿದೆ ಎಂದರಲ್ಲದೆ ಸಮಾಜದ ಅಭಿವೃದ್ಧಿಗೆ ಒಂದು ಲಕ್ಷ ರೂ. ನೆರವು ನೀಡುವುದಾಗಿ ವಾಗ್ದಾನ ಮಾಡಿದರು.
    ಮುಖಂಡ ಅಣಬೇರು ಶಿವಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ಮನೆಯಿಂದ ಕನಿಷ್ಠ 1 ಸಾವಿರ ರೂ. ದೇಣಿಗೆ ಸಂಗ್ರಹಿಸೋಣ ಎಂದರು. ಜಿಪಂ ಮಾಜಿ ಸದಸ್ಯ ಹದಡಿ ನಿಂಗಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನಕುಮಾರ್, ಪೈಲ್ವಾನ್ ಸಂಗಪ್ಪ, ಮುದಹದಡಿ ದಿಳ್ಳೆಪ್ಪ, ಗೌಡ್ರ ಚನ್ನಬಸಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಹಾಲುಮತ ಮಹಾಸಭಾ ಸಂಘದ ಜಿಲ್ಲಾಧ್ಯಕ್ಷ ಹಾಲೇಕಲ್ಲು ವೀರಣ್ಣ, ಮಾಯಕೊಂಡ ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts