More

    ನುಡಿದಂತೆ ನಡೆದ ಸಿಎಂ ಎಚ್‌ಡಿಕೆ

    ನೆಲಮಂಗಲ
    ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ ಎಂದು ಮುಖಂಡ ಭವಾನಿಶಂಕರ್ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
    ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದರು.
    ರಾಜ್ಯದಲ್ಲಿ ಲಾಟರಿ ನಿಷೇಧ ಹಾಗೂ ಸಾರಾಯಿ ನಿಷೇಧದಂತಹ ಮಹತ್ವದ ನಿರ್ಣಯ ತೆಗೆದುಕೊಂಡ ಎಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯುವ ಏಕೈಕ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆ ಮಾಡಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪಂಚರತ್ನ ಯೋಜನೆಗಳು ರಾಜ್ಯದ ಎಲ್ಲ ಸಮಸ್ಯೆಗಳಿಗೆ ಸಂಜೀವಿನಿಯಾಗುವ ಜತೆಗೆ ಜನರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದರು.
    ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ. ಜೆಡಿಎಸ್ ಹಾಲಿನ ದರ ಹೆಚ್ಚಳ ಮಾಡುವ ಭರವಸೆ ನೀಡಿದೆ. ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರುವ ಗ್ರಾಮೀಣ ರೈತರ ಬದುಕು ಹಸನಾಗಲಿದೆ. ಆದ್ದರಿಂದ ಜೆಡಿಎಸ್ ಗೆಲ್ಲಿಸಲು ಶ್ರಮಿಸಬೇಕಿದೆ ಎಂದರು.
    ಹಣದ ಆಮಿಷ, ಕುಕ್ಕರ್, ದೋಸೆ ಹೆಂಚು ಕೊಟ್ಟ ಮಾತ್ರಕ್ಕೆ ಮತಹಾಕುವ ಜನ ಕ್ಷೇತ್ರದವರಲ್ಲ. ಚುನಾವಣಾ ಸಂದರ್ಭದಲ್ಲಿ ಕಳಪೆ ಕುಕ್ಕರ್ ಪಡೆದುಕೊಂಡು ಜೀವನ ಕಳೆದುಕೊಳ್ಳಬೇಡಿ. ಸ್ಥಳೀಯರಲ್ಲದ ಅಭ್ಯರ್ಥಿಗಳಿಗೆ ತಕ್ಕಪಾಠ ಕಲಿಸಬೇಕು ಎಂದರು.
    ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಕೋಮುಗಲಭೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ಪಕ್ಷಾತೀತ, ಜಾತ್ಯತೀತವಾಗಿ ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ. ಕುಮಾರಸ್ವಾಮಿ ಅವರು 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದರು ಎಂದರು.
    ಎಚ್‌ಡಿಕೆ, ಕ್ಷೇತ್ರದ ಅಭಿವೃದ್ಧಿಗೆ 360 ಕೋಟಿ ರೂ. ಅನುದಾನ ನೀಡಿದರು. ನೆಲಮಂಗಲ ನಗರಕ್ಕೆ ಒಳಚರಂಡಿ, ಮೆಟ್ರೋ, ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಅವಶ್ಯವಿರುವ ಮೂಲ ಸೌಕರ್ಯಗಳ ಕುರಿತಾಗಿ ಚರ್ಚೆ ಮಾಡಿದ್ದು, ಸಹಕಾರ ನೀಡುವುದಾಗಿ ತಿಳಿಸಿದ್ದರು. ದುರದೃಷ್ಟವಶಾತ್ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬಂತು, ಹೆಚ್ಚಿನ ಅನುದಾನವನ್ನು ನೀಡದ ಕಾರಣ ಕ್ಷೇತ್ರದ ಕೆಲವೆಡೆ ಅಭಿವೃದ್ಧಿ ಕಾರ್ಯ ಸಾಧ್ಯವಾಗಿಲ್ಲ. ಬೇಸರ ಮಾಡಿಕೊಳ್ಳಬೇಡಿ, ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದು ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಮುಕ್ತಿ, ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
    ವಿವಿಧೆಡೆ ಮತಯಾಚನೆ: ಸೋಲದೇವನಹಳ್ಳಿ ಗ್ರಾಪಂನ ಮಂಟನಕುರ್ಚಿ, ಬಾಣಸವಾಡಿ, ಗೊರವನಹಳ್ಳಿ, ಸೋಲದೇವನಹಳ್ಳಿ, ಅವಲಕುಪ್ಪೆ, ಚೌಡಸಂದ್ರ, ಧರ್ಮನಾಯಕನ ತಾಂಡಾ, ಗೊರಿನಬೆಲೆ, ಗುರುವನಹಳ್ಳಿ ಸೇರಿ 35 ಗ್ರಾಮಗಳಲ್ಲಿ ಮತಯಾಚಿಸಲಾಯಿತು.
    ಪಾನಕ, ಮಜ್ಜಿಗೆ ವಿತರಣೆ: ವಿವಿಧ ಗ್ರಾಮಗಳ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬಿಸಿಲಿನಲ್ಲಿ ಮತಯಾಚನೆ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಗ್ರಾಮದ ಜನ ಪಾನಕ, ಮಜ್ಜಿಗೆ ನೀಡಿ ದಣಿವಾರಿಸಿದರು.
    ಗ್ರಾಮ ಪಂಚಾಯಿತಿ ಸದಸ್ಯರಾದ ಸಂದೀಪ್, ಕೃಷ್ಣಪ್ಪ, ಮುನೇಶ್‌ನಾಯಕ್, ಮಹದೇವಮ್ಮಕೃಷ್ಣಪ್ಪ, ರಾಮಕೃಷ್ಣಪ್ಪ, ಮಂಜುನಾಥ್, ಶ್ರೀನಿವಾಸ್, ಮಾಜಿ ಸದಸ್ಯರಾದ ರುದ್ರಪ್ಪ, ಸುನಂದಮ್ಮ, ಮುಖಂಡರಾದ ವೆಂಕಟೇಗೌಡ, ಜಿ.ಎಚ್.ಗೌಡ, ಲಕ್ಷ್ಮಣ್, ಅವಲಕುಪ್ಪೆಕಿಟ್ಟಿ, ಗಣೇಶ್, ನಾಗರಾಜು, ವೇಣುಗೋಪಾಲ್, ಲೋಕೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts