More

    ನುಗ್ಗೆಕಾಯಿ ಬೆಳೆ ನಾಶ ಮಾಡಿದ ರೈತರು

    ನರೇಗಲ್ಲ: ಕರೊನಾ ಲಾಕ್​ಡೌನ್​ನಿಂದ ಮಾರುಕಟ್ಟೆಯಿಲ್ಲದೆ ಮನನೊಂದ ರೈತರು ನುಗ್ಗೆಕಾಯಿ ಬೆಳೆ ನಾಶಪಡಿಸಿದ ಘಟನೆ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಅಬ್ಬಿಗೇರಿ ಗ್ರಾಮದ ರೈತರಾದ ವೀರಯ್ಯ ಪೂಜಾರ ತಮ್ಮ 3.28 ಎಕರೆ ಹಾಗೂ ಪ್ರಕಾಶ ನಾಯ್ಕರ ತಮ್ಮ 3.20 ಎಕರೆ ನೀರಾವರಿ ಪ್ರದೇಶದಲ್ಲಿ ನುಗ್ಗೆಕಾಯಿ ಬೆಳೆಸಿದ್ದರು. ನುಗ್ಗೆಕಾಯಿ ಸಮೃದ್ಧವಾಗಿಯೂ ಬೆಳೆದಿದ್ದವು. ಈ ರೈತರು ಪ್ರತಿವರ್ಷ ನುಗ್ಗೆಕಾಯಿಯನ್ನು ಗದಗ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿಗೆ ಮಾರಾಟಕ್ಕೆ ಕಳುಹಿಸುತ್ತಿದ್ದರು. ಆದರೆ, ಈಗ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಯಾವುದೇ ಮಾರುಕಟ್ಟೆಯಲ್ಲಿ ಖರೀದಿಸುವವರಿಲ್ಲ. ಸ್ಥಳೀಯವಾಗಿಯೂ ಖರೀದಿಸುವವರಿಲ್ಲ. ತಲಾ 2-3 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿದ್ದ ಈ ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ನುಗ್ಗೆಕಾಯಿಗಳು ಗಿಡದಲ್ಲಿ ಒಣಗುತ್ತಿದ್ದವು. ಇದರಿಂದ ಮನನೊಂದ ರೈತರು ಸಮೃದ್ಧವಾಗಿ ಬೆಳೆದಿದ್ದ ನುಗ್ಗೆಕಾಯಿ ಗಿಡಗಳನ್ನು ಕಡಿದು ಹಾಕಿದ್ದಾರೆ.

    ನೀರಾವರಿ ಭೂಮಿಯಲ್ಲಿ ವಿನೂತನ ಪ್ರಯೋಗ ಮಾಡುವ ಉದ್ದೇಶದಿಂದ ನುಗ್ಗೆ ಬೆಳೆಯಲಾಗಿತ್ತು. ಗಿಡಗಳು ಸಮೃದ್ಧವಾಗಿ ಬೆಳೆದು ಸಾಕಷ್ಟು ಕಾಯಿಗಳನ್ನು ಹಿಡಿದಿದ್ದವು. ಆದರೆ, 20 ದಿನಗಳಿಂದ ನುಗ್ಗೆ ಕಾಯಿಯನ್ನು ಕೇಳುವವರಿಲ್ಲ. ಯಾವೊಬ್ಬ ಖರೀದಿದಾರರೂ ನುಗ್ಗೆಕಾಯಿ ಖರೀದಿಗೆ ಮುಂದಾಗಿಲ್ಲ. ಇದರಿಂದಾಗಿ ನುಗ್ಗೆಕಾಯಿಗಳು ಗಿಡದಲ್ಲಿ ಒಣಗುತ್ತಿವೆ. ಮಗುವಿನಂತೆ ಬೆಳೆಸಿದ್ದ ಗಿಡಗಳನ್ನು ನಮ್ಮ ಕೈಯಾರೆ ಕಡಿದು ಹಾಕಿದ್ದೇವೆ. ಜಿಲ್ಲಾಡಳಿತ, ತಾಲೂಕಾಡಳಿತ ಇತ್ತ ಗಮನಹರಿಸಿ ಪರಿಹಾರ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.

    | ವೀರಯ್ಯ ಪೂಜಾರ, ಪ್ರಕಾಶ ನಾಯ್ಕರ

    ನುಗ್ಗೆ ನಾಶಪಡಿಸಿದ ರೈತರು

    ರೋಣ, ಗಜೇಂದ್ರಗಡ ತಾಲೂಕಿನ ತೋಟಗಾರಿಕೆ ಬೆಳೆಗಳನ್ನು ರೈತರಿಂದ ಖರೀದಿ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಜಿಗಳೂರು, ಹೊಸಳ್ಳಿ ಗ್ರಾಮದ ಕೆಲವು ರೈತರು ನುಗ್ಗೆಕಾಯಿ ಬೆಳೆದಿದ್ದಾರೆ. ಅವರಿಂದ ನುಗ್ಗೆಕಾಯಿ ಖರೀದಿಸಲಾಗುತ್ತಿದೆ. ಅಬ್ಬಿಗೇರಿಯ ರೈತರು ನುಗ್ಗೆಕಾಯಿ ಬೆಳೆದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರನ್ನು ಸಂರ್ಪಸಿ ಸಮಸ್ಯೆ ಪರಿಹರಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ತೋಟಗಾರಿಕೆ ಬೆಳೆಗಳನ್ನು ನಾಶ ಮಾಡಬಾರದು.

    | ಎಂ.ಎಂ. ತಾಂಬೋಟಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts