More

    ನೀರಿಲ್ಲದೆ ಕರಟುತ್ತಿದೆ ರಾಜಾಡಿ ಕಾಂಡ್ಲಾ ವನ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ತಲ್ಲೂರು ರಾಜಾಡಿ ರಾಷ್ಟ್ರೀಯ ಹೆದ್ದಾರಿ-66 ಬಳಿಯ ಕಾಂಡ್ಲಾ ಕಾಡಿಗೆ ನೀರು ಸಿಗದೆ ಕರಟುತ್ತಿದೆ. =ಒಂದು ತಿಂಗಳಿಂದ ಹಿನ್ನೀರಿನ ಕೊರತೆ ಅನುಭವಿಸುತ್ತಿದ್ದು, ಬೇರು ಒಣಗಿ ಎಲೆಗಳು ಉದುರುತ್ತಿವೆ.
    ರಾಜಾಡಿ ಕಾಂಡ್ಲಾ ಸಸ್ಯ ವೈವಿಧ್ಯಕ್ಕೆ ಸೀಮಿತವಾಗಿರದೆ ಬೆಳ್ಳಕ್ಕಿ, ನೀರುಕಾಗೆ, ವಿದೇಶಿ ಹಕ್ಕಿಗಳಿಗೆ ತವರಿನಂತಿದೆ. ಆಮೆ, ಸೂಕ್ಷ್ಮಜೀವಿಗಳು, ಜಲಚರ, ಮೊಸಳೆಗಳಿಗೆ ಹೆರಿಗೆ ಮನೆಯಾಗಿಯೂ ಕೊಡುಗೆ ನೀಡುತ್ತದೆ. ರಾಜಾಡಿ ಸೇತುವೆ ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಹಾಗೂ ಹಿನ್ನೀರು ಹರಿದು ಬರುವ ಪ್ರದೇಶ ಬಂದ್ ಮಾಡಿದ್ದರಿಂದ ನೀರು ಇಲ್ಲಿಗೆ ಹರಿದು ಬರುತ್ತಿಲ್ಲ.
    ಕಾಂಡ್ಲಾ ವನ ಸಮುದ್ರ ಕೊರತಕ್ಕೆ ನೈಸರ್ಗಿಕ ತಡೆಗೋಡೆಯಂತಿದೆ. ಅರಣ್ಯ ಇಲಾಖೆ ಆಯಕಟ್ಟಿನ ಜಾಗದಲ್ಲಿ ಕಾಂಡ್ಲಾ ಬೆಳೆಸುವ ಮೂಲಕ ಪ್ರಾಕೃತಿಕ ಅಸಮತೋಲನ ತಪ್ಪಿಸಲು ಮುಂದಾಗಿತ್ತು. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲೂ ಅರಣ್ಯ ಇಲಾಖೆ ಪ್ರಯತ್ನಿಸಿದ್ದು, ಬದ್ಧತೆ ಕೊರತೆಯಿಂದ ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿದೆ.
    ರಾಜಾಡಿ ಪ್ರದೇಶದಲ್ಲಿ ಐದು ಎಕ್ರೆಯಷ್ಟು ಕಾಂಡ್ಲಾ ಕಾಡಿದ್ದರೂ ಸುತ್ತಮುತ್ತ ಸಿಗಡಿ ಪ್ಲಾಂಟ್‌ಗಳು ವನ ಪ್ರದೇಶವನ್ನು ಸಂಕುಚಿತ ಮಾಡಿವೆ. ಒಂದು ಕಡೆ ಸಿಗಡಿ ಕೆರೆ ನಿರ್ಮಾಣಕ್ಕೆ ವನ ಕಿರಿದಾಗುತ್ತಿದ್ದು, ಪ್ರಸಕ್ತ ಹಿನ್ನೀರು ಇಲ್ಲದೆಯೂ ಕಾಡು ನಿರ್ನಾಮದ ಹಾದಿಯಲ್ಲಿದೆ.
    ಷಟ್ಕೋನಾಕೃತಿ ಕಟ್ಟಡ ದೋಣಿ ಎಲ್ಲಿ
    ಕಾಂಡ್ಲಾ ವನದಲ್ಲಿ ದೋಣಿ ವಿಹಾರಕ್ಕಾಗಿ ಕಾಶ್ಮೀರ ಮಾದರಿ ಎರಡು ದೋಣಿಗಳನ್ನು ತಂದು ಇರಿಸಲಾಗಿತ್ತು. ಪ್ರವಾಸಿಗರು ವಿಶ್ರಮಿಸಿಕೊಳ್ಳಲು ಷಟ್ಕೋನಾಕೃತಿ ಕಟ್ಟಡ ನಿರ್ಮಿಸಲಾಗಿತ್ತು. 80 ಸಾವಿರ ರೂ. ವೆಚ್ಚ ಮಾಡಿ ಕಾಂಡ್ಲಾ ವನ ವೀಕ್ಷಣೆಗೆ ತಂದ ದೋಣಿ ಪ್ರಸಕ್ತ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಕಾಂಡ್ಲಾ ಕಾಡಂಚಿನಲ್ಲಿ ನಿರ್ಮಿಸಿದ ಷಟ್ಕೋನಾಕೃತಿ ಕಟ್ಟಡದ ಜಾಗದಲ್ಲಿ ಕಟ್ಟಡವಿತ್ತು ಎಂಬ ಕುರುಹೂ ಉಳಿದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾರ್ವಜನಿಕ ಶೌಚಗೃಹ, ವಸತಿ ವ್ಯವಸ್ಥೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದು, ಅದ್ಯಾವುದೂ ಕಾರ‌್ಯರೂಪಕ್ಕೆ ಬಂದಿಲ್ಲ. ದೋಣಿ, ಷಟ್ಕೋನಾಕೃತಿ ಕಟ್ಟಡ ಹೋದರೆ ಮತ್ತೆ ಕಟ್ಟಬಹುದು. ಕಾಂಡ್ಲ್ಲಾ ವನವೇ ಹೋದರೆ ಮತ್ತೆ ಬೆಳೆಯಲು ಶತಮಾನಗಳೇ ಕಾಯಬೇಕು. ಇಷ್ಟೆಲ್ಲ ವೈರುಧ್ಯದ ನಡುವೆ ತ್ಯಾಜ್ಯ ವಿಲೇವಾರಿ ಕೂಡ ಮುಳುವಾಗುತ್ತಿದೆ.

    ಸಿಗಡಿ ಕೆರೆ, ಒತ್ತುವರಿ, ಉರುವಲು, ಕಪ್ಪೆಚಿಪ್ಪು ಸಂಗ್ರಹಕ್ಕಾಗಿ ವನವನ್ನು ನಾಶ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವಾಗ ಕಾಂಡ್ಲಾ ವನದಿಂದ ಬೀಸುವ ತಂಪು ಗಾಳಿ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಸಿರು ಬೇರೆಯೇ ಲೋಕದ ಅನುಭವ ನೀಡುತ್ತದೆ. ಮುಂದಾಲೋಚನೆ, ಸರಿಯಾದ ಚಿಂತನೆ ಮಾಡದೆ ಆಗುವ ಅಭಿವೃದ್ಧಿಯಿಂದ ತೊಂದರೆಯಾಗುತ್ತದೆ ಎಂಬುದಕ್ಕೆ ರಾಜಾಡಿ ಕಾಂಡ್ಲಾ ವನ ಸಾಕ್ಷಿ. ಇಲ್ಲಿಗೆ ಹಿನ್ನೀರು ಹಾಯಿಸುವ ಮೂಲಕ ಕಾಡು ಉಳಿಸಿಕೊಳ್ಳಬೇಕಿದೆ.
    ಸುರೇಂದ್ರ ಪೂಜಾರಿ
    | ಆರ್‌ಟಿಐ ಕಾರ್ಯಕರ್ತ, ತೊಪ್ಲು

    ತಕ್ಷಣ ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿ ಹಿನ್ನೀರು ಏಕೆ ಬರುತ್ತಿಲ್ಲ, ಇಲ್ಲಿನ ಸಮಸ್ಯೆ ಏನು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಕಾಂಡ್ಲಾ ವನ ಹಾಳಾದರೆ ಸಾಯಂಕಾಲ ಬರುವ ತರಹೇವಾರಿ ಪಕ್ಷಿಗಳ ಆಶ್ರಯ ತಪ್ಪಲಿದೆ. ನೀರು ಬಾರದಂತೆ ತಡೆ ಮಾಡಿದ್ದರೆ ಕಾಂಡ್ಲಾ ವನಕ್ಕೆ ನೀರಿನ ಮರುಪೂರಣ ಹೇಗೆ ಎನ್ನುವುದನ್ನು ಪರಿಶೀಲಿಸಿ ಮತ್ತೆ ನೀರು ಬರುವಂತೆ ಮಾಡುವ ಮೂಲಕ ವನ ಉಳಿಸಿಕೊಳ್ಳಲಾಗುತ್ತದೆ.
    | ಪ್ರಭಾಕರ ಕುಲಾಲ್
    ವಲಯ ಅರಣ್ಯಾಧಿಕಾರಿ, ಕುಂದಾಪುರ

    ರಾಜಾಡಿ ಕಾಂಡ್ಲಾ ಕಾಡಿನ ಪ್ರಾಮುಖ್ಯತೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಸುಕುಮಾರ ಶೆಟ್ಟಿಯವರ ಗಮನಕ್ಕೆ ತರಲಾಗಿದೆ. ರಾಜಾಡಿ ಕಾಂಡ್ಲಾ ವನವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ಸಂಸದರೂ ಕೂಡ ಕಾಂಡ್ಲಾ ಕಾಡಿನ ಅಭಿವೃದ್ಧಿ ಬಗ್ಗೆ ಆಸಕ್ತರಾಗಿದ್ದಾರೆ.
    | ವೆಂಕಟೇಶ ಕಿಣಿ
    ಬೆಸುಗೆ ಫೌಂಡೇಶನ್, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts