More

    ನಿರಂತರ ವಿದ್ಯುತ್​ಗೆ ರಾಜಕೀಯ ಕಾವು ಗಜೇಂದ್ರಗಡ ಬಂದ್ ಇಂದು


    ಶಿವಕುಮಾರ ಶಶಿಮಠ ಗಜೇಂದ್ರಗಡ
    ನಿರಂತರ ವಿದ್ಯುತ್​ಗೆ ಒತ್ತಾಯಿಸಿ ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 23ರ ಉಣಚಗೇರಿ ಸರಹದ್ದಿನ ರೈತರ ಧರಣಿಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಶುಕ್ರವಾರ ಗಜೇಂದ್ರಗಡ ಬಂದ್​ಗೆ ಕರೆ ನೀಡಿವೆ. ಆದರೆ, ಈ ಹೋರಾಟ ರಾಜಕೀಯ ಬಣ್ಣ ಪಡೆದುಕೊಳ್ಳುವ ಎಲ್ಲ ಮುನ್ಸೂಚನೆಗಳು ಕಂಡುಬರುತ್ತಿವೆ.
    ವಾರ್ಡ್ ನಂ. 23ರ ಸದಸ್ಯ ವೀರಪ್ಪ ಪಟ್ಟಣಶೆಟ್ಟಿ ಸದ್ಯ ಪುರಸಭೆ ಅಧ್ಯಕ್ಷರಾಗಿದ್ದು, ಅವರ ಸರಹದ್ದಿನ ಜಮೀನಿನ ರೈತರೇ ಪ್ರತಿಭಟನೆ ನಡೆಸುತ್ತಿದ್ದಾರೆ. 4 ದಿನಗಳಿಂದ ಆ ಭಾಗದ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅಧ್ಯಕ್ಷರು ಪ್ರತಿಭಟನಾಕಾರರನ್ನು ಭೇಟಿ ಮಾಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬಿಜೆಪಿಗೆ ಮತ ನೀಡಿ ತಪ್ಪು ಮಾಡಿದೆವು ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
    ಏನಿದು ಘಟನೆ:
    ಉಣಚಗೇರಿಯು ಗಜೇಂದ್ರಗಡ ಪುರಸಭೆಯ 23ನೇ ವಾರ್ಡ್ ಆಗಿದೆ. ಈ ವಾರ್ಡ್​ನ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಕಂದಾಯ ಇಲಾಖೆಯ ಪ್ರಕಾರ ಉಣಚಗೇರಿ ಸರಹದ್ದಿನ ರೈತರ ಜಮೀನಿನ ಪಂಪ್​ಸೆಟ್​ಗಳಿಗೆ ಸರ್ಕಾರದ ಆದೇಶದಂತೆ ಕಳೆದ ಒಂದು ವಾರದಿಂದ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ.
    ಹೆಸ್ಕಾಂ ಅಧಿಕಾರಿಗಳು ಸರ್ಕಾರದ ಸೂಚನೆ ಮೇರೆಗೆ 2022ರ ಫೆ. 12ರಂದು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ರೈತರ ಜಮೀನಿನ ಪಂಪ್​ಸೆಟ್​ಗಳಿಗೆ 7 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುವುದು ಎಂದು ಪ್ರಕಟಣೆ ನೀಡಿ ರೈತರಿಗೆ ತಿಳಿಸಿದ್ದರು. ಕಾರಣಾಂತರಗಳಿಂದ ಅದನ್ನು ಮುಂದೂಡಿ ಜೂನ್ ತಿಂಗಳಿನಿಂದ ಕಡಿತಗೊಳಿಸುತ್ತೇವೆ ಎಂದು ಮತ್ತೆ ಇಲಾಖೆ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ ಹಿನ್ನೆಲೆಯಲ್ಲಿ ಸರಹದ್ದಿನ ರೈತರು ಪ್ರತಿಭಟನೆಗೆ ಮುಂದಾಗಿದ್ದರು.
    ಪ್ರತಿಭಟನೆಗೆ ಹಲವಾರು ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದವು. ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಣಚಗೇರಿ ಭಾಗದ ರೈತರು ಜಮೀನಿನಲ್ಲಿ ಬೆಳೆ ಹಾಕಿದ್ದೇವೆ, ವಿದ್ಯುತ್ ಕಡಿತ ಮಾಡಿದರೆ ಬೆಳೆಗಳು ಒಣಗಿ, ನಾವು ಸಂಕಷ್ಟ ಪಡುವಂತಾಗುತ್ತದೆ. ಹೀಗಾಗಿ ಬೆಳೆ ಬರುವವರೆಗೆ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದರು. ಅದಕ್ಕೆ ಸ್ಥಳೀಯ ಹಂತದ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೂರು ತಿಂಗಳ ಮಟ್ಟಿಗೆ ನಿರಂತರ ವಿದ್ಯುತ್ ನೀಡಿದ್ದರು. ಆದರೆ, ಆ. 10ರಿಂದ ಹೆಸ್ಕಾಂ ಅಧಿಕಾರಿಗಳು ಯಾವುದೇ ಪ್ರಕಟಣೆ ನೀಡದೇ ದಿಢೀರ್ ಆಗಿ ನಿರಂತರ ವಿದ್ಯುತ್ ಕಡಿತಗೊಳಿಸಿ 7 ಗಂಟೆ ವಿದ್ಯುತ್ ನೀಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ಪ್ರತಿಭಟನೆ ನಡೆಸಿ ಐದನೇ ದಿನವಾದ ಆ. 26ರಂದು ಗಜೇಂದ್ರಗಡ ಬಂದ್​ಗೆ ಕರೆ ಕೊಟ್ಟಿದ್ದಾರೆ.


    ಗ್ರಾಮೀಣ, ಹಾಗೂ ಪಟ್ಟಣದ ಜಮೀನಿನ ರೈತರ ಪಂಪ್​ಸೆಟ್​ಗಳಿಗೆ ಸರ್ಕಾರದ ನಿರ್ದೇಶನದಂತೆ ಏಳು ಗಂಟೆ ಮಾತ್ರ ವಿದ್ಯುತ್ ನೀಡಲಾಗುವುದು. ಮೇಲಾಧಿಕಾರಿಗಳು ಹಾಗೂ ಸರ್ಕಾರದ ಆದೇಶ ಪಾಲಿಸುವುದು ಮಾತ್ರ ನಮ್ಮ ಕರ್ತವ್ಯ. ಹೀಗಾಗಿ ರೈತರು ಸಹಕರಿಸಬೇಕು.
    | ವಿರೇಶ ರಾಜೂರ, ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಗಜೇಂದ್ರಗಡ


    ರೈತರ ಪಂಪ್​ಸೆಟ್​ಗಳಿಗೆ 7 ತಾಸು ವಿದ್ಯುತ್ ನೀಡುವುದು ಅಂದಾಜು 14 ವರ್ಷಗಳ ಹಿಂದಿನದು. ಅಂದು ವಿದ್ಯುತ್ ಉತ್ಪಾದನೆ ಕಡಿಮೆ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ಪಾದನೆಯಾಗುತ್ತಿದೆ. ಆದರೆ, ಅಂದಿನಿಂದ ಉಣಚಗೇರಿ ಸರಹದ್ದಿನ ರೈತರು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಈಗ ಹಠಾತ್ ವಿದ್ಯುತ್ ಕಡಿತಗೊಳಿಸಿದರೆ ಅವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಸ್ಥಳೀಯ ಶಾಸಕರು ರೈತರು 4 ದಿನ ಪ್ರತಿಭಟನೆ ನಡೆಸಿದರೂ ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಕೇಳದಿರುವುದು ಖಂಡನೀಯ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಉಣಚಗೇರಿ ರೈತರಿಗೆ ಮೊದಲಿನಂತೆ ನಿರಂತರ ವಿದ್ಯುತ್ ನೀಡಬೇಕು.
    | ಜಿ.ಎಸ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ


    ಆಡಳಿತಕ್ಕೆ ಬಿಸಿ ಮುಟ್ಟಿಸುವ ಉದ್ದೇಶ: ಉಣಚಗೇರಿ ಸರಹದ್ದಿನ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಆ. 26ರಂದು ಗಜೇಂದ್ರಗಡ ಪಟ್ಟಣ ಬಂದ್​ಗೆ ರೈತರು ಕರೆ ನೀಡಿದ್ದಾರೆ. ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿರುವ ಆಡಳಿತಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಗಜೇಂದ್ರಗಡ ಬಂದ್​ಗೆ ಕರೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಬೆಂಬಲ ಸೂಚಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಉಣಚಗೇರಿ ಸರಹದ್ದಿನ ರೈತರು ಮನವಿ ಮಾಡಿದ್ದಾರೆ.
    ಪ್ರತಿಭಟನಾ ಮೆರವಣಿಗೆ: ನಿರಂತರ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ರೈತರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸ್ಥಳೀಯ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಲಕಾಲೇಶ್ವರ ವೃತ್ತದ ವರೆಗೆ ಮೆರವಣಿಗೆ ಸಾಗಿ ನಂತರ ಸಭೆ ನಡೆಸಲಾಯಿತು.
    ಪ್ರಗತಿಪರ, ದಲಿತಪರ, ಕನ್ನಡಪರ ಸಂಘಟನೆಗಳು ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ಪುರಸಭೆ ವಿಪಕ್ಷ ನಾಯಕ ಮುರ್ತಜಾ ಡಾಲಾಯತ, ವಕೀಲರಾದ ಎಂ.ಎಸ್. ಹಡಪದ, ಬಾಲು ರಾಠೋಡ, ರೈತ ಒಕ್ಕೂಟ ಸಮಿತಿ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ, ಬಸವರಾಜ ಶೀಲವಂತರ, ಶರಣು ಪೂಜಾರ, ಬಸವರಾಜ ಪಲ್ಲೇದ, ಇಸ್ಮಾಯಿಲ್ ಗೊಲಗೇರಿ, ಸಿದ್ದು ಗೊಂಗಡಶೆಟ್ಟಿಮಠ, ವಿಜಯಕುಮಾರ ಜಾಧವ, ಕಳಕನಗೌಡ ಗೌಡ್ರ, ಬಸವರಾಜ ಮ್ಯಾಗೇರಿ, ಶಿವಪ್ಪ ಕುಂಬಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts