More

    ನಿರಂತರ ಯೋಗದಿಂದ ಆರೋಗ್ಯ ಭಾಗ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಭಿಮತ, ಜಿಲ್ಲಾಮಟ್ಟದ ಯೋಗ ಶಿಬಿರ

    ಬೆಂಗಳೂರು ಗ್ರಾಮಾಂತರ: ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಯೋಗವನ್ನು ನಿರಂತರವಾಗಿ ಮುಂದುವರಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ದೇವನಹಳ್ಳಿ ಪುರಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಯೋಗ ಹಾಗೂ ಪ್ರಾಣಾಯಾಮ ಶಿಬಿರದಲ್ಲಿ ಮಾತನಾಡಿದರು.

    ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಆರೋಗ್ಯ ವೃದ್ಧಿ ಯೋಗ ಹಾಗೂ ಪ್ರಾಣಾಯಾಮ ಏರ್ಪಡಿಸಲಾಗಿದೆ. ಯೋಗದಿಂದ ಹಲವು ಉಪಯೋಗಗಳಿದ್ದು, ಯೋಗಾಭ್ಯಾಸದಿಂದ ಅಧಿಕಾರಿಗಳು ಕ್ರೀಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

    ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಮುಖ್ಯವಾಗಿದೆ. ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಕರೊನಾ ವಾರಿಯರ್ಸ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಉತ್ಸಾಹ ತುಂಬಲು ಯೋಗ ಹಾಗೂ ಪ್ರಾಣಾಯಾಮ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

    ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು ಹಾಗೂ ಶಾಲಾ ಕಾಲೇಜುಗಳಲ್ಲಿಯೂ ಯೋಗ ಹಾಗೂ ಪ್ರಾಣಾಯಾಮ ಮಾಡಿಸುವಂತೆ ತಿಳಿಸಲಾಗುವುದು ಎಂದು ಹೇಳಿದರು.

    ಸೂರಪನೇನಿ ವಿದ್ಯಾ ಸಾಗರ್ ಫೌಂಡೇಷನ್ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಪ್ರಾಣಾಯಾಮ ಎಂದರೆ ಉಸಿರಾಟದ ಪ್ರಯಾಣ ಎಂದರ್ಥ.ಪ್ರಾಣಾಯಾಮದಿಂದ ಶ್ವಾಸಕೋಶ ಹಾಗೂ ಕಂಠದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಕೋವಿಡ್ ತಡೆಯಲು ಅನುಕೂಲವಾಗುತ್ತದೆ. ದೀರ್ಘವಾಗಿ ಉಸಿರಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಸರಬರಾಜಾಗುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಲಿದೆ, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

    ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಸದಸ್ಯರಾದ ರವೀಂದ್ರ, ಸುರೇಶ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಅಕ್ಕಿಮ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ತಹಸೀಲ್ದಾರ್ ಅನಿಲ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರಾಜು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts