More

    ನಿರಂತರ ನೀರು ಕಾಮಗಾರಿ ಕಳಪೆ

    ರಾಣೆಬೆನ್ನೂರ: ನಗರದಲ್ಲಿ 24/7 ಕುಡಿಯುವ ನೀರು (ನಿರಂತರ ನೀರು) ಸರಬರಾಜು ಕಾಮಗಾರಿ ಕಳಪೆಯಾಗಿದೆ. ನಗರಸಭೆ ಸದಸ್ಯರು, ಸಾರ್ವಜನಿಕರು ಗುತ್ತಿಗೆದಾರರಿಗೆ ಕಾಮಗಾರಿ ಮಾಡದಂತೆ ತಡೆ ಹಿಡಿದಿದ್ದಾರೆ.

    ಕೇಂದ್ರ ಸರ್ಕಾರದ ಅಮೃತ ಸಿಟಿ ಯೋಜನೆಯಡಿ 118.60 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಂದಿನ ಶಾಸಕ ಕೆ.ಬಿ. ಕೋಳಿವಾಡ ಅವರು ಚಾಲನೆ ನೀಡಿದ್ದರು. ಈಗಾಗಲೇ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಪೈಪ್​ಲೈನ್ ಅಳವಡಿಕೆ ಬಾಕಿಯಿದೆ.

    ಕಾಮಗಾರಿ ಮುಗಿದ ಕೆಲವೆಡೆ ಈಗಾಗಲೇ ಪೈಪ್​ಗಳು ನೆಲದಿಂದ ಮೇಲೆದ್ದಿವೆ. ಕೆಲ ಭಾಗದಲ್ಲಿ ಚರಂಡಿಗಳಿಗೆ ಅಡ್ಡಲಾಗಿ ಪೈಪ್​ಲೈನ್ ಅಳವಡಿಸಲಾಗಿದೆ. ಮತ್ತೊಂದೆಡೆ ನೆಲದಿಂದ ಕೇವಲ 2 ಇಂಚಿನಷ್ಟು ಅಳದಲ್ಲಿ ಪೈಪ್​ಲೈನ್ ಹಾಕಲಾಗಿದೆ. ಮಳೆಯಿಂದಾಗಿ ಸಂಪೂರ್ಣ ಪೈಪ್​ಗಳು ಹೊರಗಡೆ ಕಾಣಿಸುತ್ತಿದ್ದು, ಅವುಗಳನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಹೇಳಿದರೆ, ‘ಅದು ಅಷ್ಟೇ, ಏನೂ ಆಗಲ್ಲ’ ಎಂದು ಉಡಾಫೆಯಾಗಿ ಉತ್ತರಿಸುತ್ತಾರಂತೆ. ಹೀಗಾಗಿ, ಬಹುತೇಕ ವಾರ್ಡ್​ಗಳಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ಕಳೆದ ಎರಡ್ಮೂರು ತಿಂಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

    ಈ ನಡುವೆ ಗುತ್ತಿಗೆದಾರರು ರಾತ್ರೋರಾತ್ರಿ ಬಂದು ಕೆಲಸ ಮಾಡಲು ಮುಂದಾದ ಘಟನೆಯೂ ನಡೆದಿದೆ. ಈ ವೇಳೆ ಸದಸ್ಯರು, ‘ಮೊದಲು ಕಳಪೆ ಕಾಮಗಾರಿ ಆಗಿರುವುದನ್ನು ಸರಿಪಡಿಸಬೇಕು. ನಂತರ ಇನ್ನುಳಿದ ಕಾಮಗಾರಿ ನಡೆಸಬೇಕು’ ಎಂದು ತಾಕೀತು ಮಾಡಿದ್ದಾರೆ. ಹೀಗಾಗಿ ಸದ್ಯ ಕಾಮಗಾರಿ ಸ್ಥಗಿತಗೊಂಡಿದೆ.

    2020ರಲ್ಲಿ ಡೌಟು? : 2017ರಲ್ಲಿ ಅರಂಭಗೊಂಡಿರುವ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಬೇಕು. ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಇನ್ನೂ 3 ತಿಂಗಳು ಬಾಕಿಯಿದೆ. ಆದರೆ, ಶೇ. 25ರಷ್ಟು ಹೊಸ ಕಾಮಗಾರಿ ಬಾಕಿಯಿದೆ. ಅಲ್ಲದೆ, ಈಗಾಗಲೇ ಮಾಡಿರುವ ಕಾಮಗಾರಿಯಲ್ಲೂ ಕಳಪೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೊದಲು ಅದನ್ನು ಸರಿಪಡಿಸಬೇಕಿದೆ. ಮುದೇನೂರ ಬಳಿಯ ಜಾಕ್​ವೆಲ್ ಕಾಮಗಾರಿ ಸಹ ಕುಂಟುತ್ತ ಸಾಗಿದೆ. ಹೀಗಾಗಿ, 2020ರೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.

    ಒಳಚರಂಡಿ ಪೈಪ್​ಲೈನ್ ಬಂದಲ್ಲಿ 24/7 ಕುಡಿಯುವ ನೀರಿನ ಪೈಪ್​ಲೈನ್ ಮೇಲೆದ್ದಿವೆ. ಈ ಬಗ್ಗೆ ಕೆಲ ವಾರ್ಡ್ ಸದಸ್ಯರು ದೂರು ನೀಡಿದ್ದರಿಂದ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಹಳೇ ಕಾಮಗಾರಿ ಸರಿಪಡಿಸುವವರೆಗೆ ಹೊಸ ಕಾಮಗಾರಿ ಮಾಡದಂತೆ ತಾಕೀತು ಮಾಡಲಾಗಿದೆ. | ಶೇಖರ ಹಾದಿಮನಿ, ಸಹಾಯಕ ಇಂಜಿನಿಯರ್

    ನಗರದ 24/7 ಕುಡಿಯುವ ನೀರಿನ ಕಾಮಗಾರಿಯಲ್ಲಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಅಮೃತ ಸಿಟಿ ಯೋಜನೆ ನಿರ್ದೇಶಕರಿಗೆ ದೂರು ನೀಡಲಾಗಿದೆ. ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸಬೇಕು. ಕಾಮಗಾರಿಯನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ಯಾವುದೇ ರೀತಿ ಹೊಸ ಕಾಮಗಾರಿ ಅವಕಾಶ ನೀಡುವುದಿಲ್ಲ. | ನಿಂಗರಾಜ ಕೋಡಿಹಳ್ಳಿ, 34ನೇ ವಾರ್ಡ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts