More

    ನಿರಂತರ ಕುಡಿಯುವ ನೀರಿನ ಯೋಜನೆಗೆ ಶೀಘ್ರ ಟೆಂಡರ್

    ಸಿಂದಗಿ: ಪಟ್ಟಣದ ನಿವಾಸಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿದ್ದ ಹಿಂದಿನ ಸರ್ಕಾರ 15 ಕೋಟಿ ರೂ. ನೀಡಿತ್ತು. ಸದ್ಯ ಹೆಚ್ಚುವರಿಯಾಗಿ ಸಿಎಂ ಸಿದ್ದರಾಮಯ್ಯನವರು ನಿರಂತರ ಕುಡಿಯುವ ನೀರಿನ ಯೋಜನೆಗಾಗಿ 25 ಕೋಟಿ ರೂ. ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

    ಪಟ್ಟಣದ ಎಚ್.ಜಿ. ಕಾಲೇಜಿನ ಸಭಾಭವನದಲ್ಲಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಮಹಿಳಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಉದ್ಘಾಟನೆ ಹಾಗೂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ನಗರದಲ್ಲಿ 51ಸಾವಿರಕ್ಕೂ ಹೆಚ್ಚು ನಿವಾಸಿಗಳಿದ್ದು, ಅವರಿಗೆ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯದ ಯೋಜನೆಗಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲಾಗುತ್ತಿದೆ. ತಮ್ಮ ಸಂಸ್ಥೆಯ ವತಿಯಿಂದ ನೂತನ ಮಹಿಳಾ ಕಾಲೇಜು ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ವಸತಿ ನಿಲಯದ ಜತೆಗೆ ಕರಕುಶಲ ಕೌಶಲ ಕಲಿಸುವ ಗುರಿ ಹೊಂದಲಾಗಿದೆ ಎಂದರು.

    ಮುಖ್ಯ ಅತಿಥಿ ಡಾ. ಚನ್ನಪ್ಪ ಕಟ್ಟಿ ಅವರು ಮಾತನಾಡಿ, ಮಹಿಳೆಗೆ ದೊರಕುವ ಯೋಗ್ಯ ಶಿಕ್ಷಣ ರಾಷ್ಟ್ರದ ಸಮೃದ್ಧತೆಗೆ ಸಾಕ್ಷಿಯಾಗಿದೆ. ಮಹಿಳೆ ಜಗದ ಬಹುದೊಡ್ಡ ಶಕ್ತಿ ಆಗಿದ್ದಾಳೆ. ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪನವರ ರಂಗ ಮಂದಿರಕ್ಕೆ ಸರ್ಕಾರದಿಂದ ಅನುದಾನ ಬಂದಿದೆ. ಆದರೆ ಕೆಲಸ ಆರಂಭಗೊಂಡಿಲ್ಲ. ಶೀಘ್ರವಾಗಿ ನಿರ್ಮಿಸುವ ಮೂಲಕ ಶಾಸಕರು ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಗಳಿಗೆ ಪುಷ್ಟಿ ತುಂಬಬೇಕು ಎಂದು ಮನವಿ ಮಾಡಿದರು.

    ಸಾನ್ನಿಧ್ಯ ವಹಿಸಿದ್ದ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಅಧಕ್ಷತೆ ವಹಿಸಿದ್ದ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿದರು. ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಪ್ರಾಸ್ತಾವಿಕ ಮಾತನಾಡಿದರು.

    ಈ ವೇಳೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ ಶಾಸಕ ಅಶೋಕ ಮನಗೂಳಿ ಮತ್ತು ಅವರ ಧರ್ಮಪತ್ನಿ ನಾಗರತ್ನ ಮನಗೂಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

    ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಪಾಟೀಲ ಬಿಂಜಲಬಾವಿ, ನಿರ್ದೇಶಕ ಬಸನಗೌಡ ಪಾಟೀಲ ಡಂಬಳ, ಬಿ.ಜಿ. ನೆಲ್ಲಗಿ, ವಿಶ್ವನಾಥಗೌಡ ಪಾಟೀಲ, ಶಂಕರಗೌಡ ಬಿರಾದಾರ, ವಿಠೋಬಾ ಮಾಗಣಗೇರಿ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ, ನಿವೃತ್ತ ಶಿಕ್ಷಕರ ಬಳಗ, ವಿದ್ಯಾರ್ಥಿಗಳು ಇದ್ದರು.
    ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ ಸ್ವಾಗತಿಸಿದರು. ಡಾ. ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಆರ್.ವೈ. ಪರೀಟ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts