More

    ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿ

    ಕೆ.ಆರ್.ಪೇಟೆ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರದ ಮನೋಭಾವದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕಾರ್ಯಾಂಗ ಮತ್ತು ಶಾಸಕಾಂಗಗಳೆರಡೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಹಾಗಾಗಿ ನಿಮ್ಮ ಸಹಕಾರ, ಸಲಹೆಗಳ ನಿರೀಕ್ಷೆಯಲ್ಲಿದ್ದೀನಿ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಇಲಾಖಾ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅದಕ್ಕೆ ನನ್ನ ಹಸ್ತಕ್ಷೇಪ ಇರಲ್ಲ. ಭ್ರಷ್ಟಾಚಾರ ಸಹಿಸಲ್ಲ. ಮುಂದಿನ ವಾರ ಕೆಡಿಪಿ ಸಭೆ ಕರೆಯುತ್ತೇನೆ.ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿದರು.
    ಸಭೆ ಮುಗಿದ ನಂತರ ತಾಪಂ ಕಚೇರಿಯಲ್ಲಿ ಶಾಸಕರ ಕೊಠಡಿಗೆ ವಾಸ್ತು ಹುಡುಕಾಟ ನಡೆಸಿದ ಶಾಸಕ ಎಚ್.ಟಿ.ಮಂಜು, ಇದು ಆಗ್ನೇಯದಲ್ಲಿದೆ ಎಂಬುದನ್ನು ಪರಿಶೀಲಿಸಿದರು. ನಂತರ ಇಒ ಕಚೇರಿಯಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
    ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳ ಪರವಾಗಿ ಶಾಸಕ ಎಚ್.ಟಿ.ಮಂಜು ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿನಿ ಮೋಕ್ಷಾ ಹಾಗೂ 615 ಅಂಕ ಪಡೆದಿರುವ ಚೌಡೇನಹಳ್ಳಿ ಗ್ರಾಮದ, ಪಟ್ಟಣದ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ರೇಣುಕಾಂಬಾ ಅವರನ್ನು ಶಾಸಕರು ಇದೇ ವೇಳೆ ಸನ್ಮಾನಿಸಿದರು.
    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಹಸೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ಸೆಸ್ಕ್ ಇಇ ವಿನುತಾ, ಎಇಇ ರಾಜಶೇಖರ್, ಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಮಧುಸೂದನ್, ನೀರಾವರಿ ಇಲಾಖೆಯ ಇಂಜಿನಿಯರ್ ಕಿಝರ್ ಅಹಮದ್, ಅಗ್ನಿ ಶಾಮಕ ಇಲಾಖೆಯ ಶಿವಣ್ಣ, ಪುರಸಭಾ ಮುಖ್ಯಾಧಿಕಾರಿ ಬಸವರಾಜು, ಭೂ ಮಾಪನಾ ಇಲಾಖೆಯ ಅಧಿಕಾರಿ ಪರಶಿವನಾಯಕ್, ಗ್ರಾಮಾಂತರ ಪೋಲೀಸ್ ಠಾಣೆಯ ನಿರೀಕ್ಷಕ ಜಗದೀಶ್, ಪಟ್ಟಣ ಠಾಣೆಯ ಪಿ.ಎಸ್.ಐ ಸುನಿಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts