More

    ನಿಯಂತ್ರಣಕ್ಕೆ ಬಂದಿದೆ ಲಂಪಿ ಸ್ಕಿನ್ ಕಾಯಿಲೆ

    ಕಾರವಾರ: ಗೋ ಪೂಜೆಯ ಸಮಯದಲ್ಲಿ ಗೋಪಾಲಕರಿಗೆ ಕೊಂಚ ನೆಮ್ಮದಿ ತರುವ ವಿಷಯವೊಂದಿದೆ. ಕಳೆದ ಮೂರು ತಿಂಗಳಿಂದ ಜಿಲ್ಲೆಯ ಜಾನುವಾರುಗಳಿಗೆ ವ್ಯಾಪಿಸಿ, ಹೈನುಗಾರರ ಆತಂಕಕ್ಕೆ ಕಾರಣವಾಗಿದ್ದ ಮಾರಕ ‘ಲಂಪಿ ಸ್ಕಿನ್’ ಎಂಬ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿದೆ.

    ಕಳೆದ ಎರಡು ವಾರಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಈಗಾಗಲೇ ಕಾಯಿಲೆಗೆ ಒಳಗಾದ ಜಾನುವಾರುಗಳೂ ಗುಣವಾಗುತ್ತಿವೆ. ಸೊಳ್ಳೆ, ಕುರುಡು ನೊಣಗಳ (ಹಸು, ಎಮ್ಮೆಗಳಿಗೆ ಕಚ್ಚುವ ದೊಡ್ಡ ನೊಣ) ಮೂಲಕ ಈ ವೈರಸ್ ರೋಗ ಹರಡುತ್ತದೆ. ಮಳೆಗಾಲದಲ್ಲಿ ಸೊಳ್ಳೆ ಕುರುಡು ನೊಣಗಳ ಕಾಟ ವಿಪರೀತವಾಗಿತ್ತು. ಈಗ ವಾತಾವರಣ ಬದಲಾವಣೆಯಿಂದ ಇವುಗಳ ಕಾಟ ಕೊಂಚ ಕಡಿಮೆಯಾಗಿದೆ. ರೋಗ ಹರಡುವುದೂ ನಿಯಂತ್ರಣಕ್ಕೆ ಬರುತ್ತಿದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ನಂದಕುಮಾರ ಪೈ.

    ವಿದೇಶದಿಂದ ಬಂದ ರೋಗ: ವಿದೇಶದಿಂದ ಹಬ್ಬಿದ ಕರೊನಾ ಮಹಾಮಾರಿ ಮಾನವ ಸಮೂಹಕ್ಕೆ ಆಘಾತ ಉಂಟು ಮಾಡಿತ್ತು. ಇದೇ ಕಾಲದಲ್ಲಿ ಆಫ್ರಿಕಾದ ದೇಶಗಳಲ್ಲಿ ಪತ್ತೆಯಾಗಿದ್ದ ಜಾನುವಾರುಗಳ ಚರ್ಮದ ಈ ಕಾಯಿಲೆಯು ನಿಧಾನವಾಗಿ ಉತ್ತರ ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ರಾಜ್ಯದ ಗಡಿ ಜಿಲ್ಲೆಗಳ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಲಗ್ಗೆ ಇಟ್ಟಿತ್ತು. ಹಳಿಯಾಳ, ಮುಂಡಗೋಡ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಅತಿ ಹೆಚ್ಚು ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದವು. ಅಂಕೋಲಾ, ಶಿರಸಿ, ಕಾರವಾರ ತಾಲೂಕುಗಳಲ್ಲೂ ಬಹು ಬೇಗನೇ ರೋಗ ವ್ಯಾಪಿಸಿ ಜಾನುವಾರುಗಳ ಮಾಲೀಕರ ನಿದ್ದೆಗೆಡಿಸಿತ್ತು. ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 6,800ಕ್ಕೂ ಅಧಿಕ ಜಾನುವಾರುಗಳು ಈಗಾಗಲೇ ಈ ಚರ್ಮ ರೋಗ ಪೀಡಿತವಾಗಿದ್ದವು.

    ಕ್ವಾರಂಟೖನ್ ಪರಿಹಾರ: ವೈರಸ್ ಸೇರಿಕೊಂಡ ಆಕಳಿನ ಮೈಮೇಲೆ ದೊಡ್ಡ ಗುಳ್ಳೆಗಳಾಗುತ್ತವೆ. ಕಾಲು ಬಾವು, ಜ್ವರ, ಆಹಾರ ಸೇವಿಸದಿರುವುದು ಇದರ ಲಕ್ಷಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಗುಳ್ಳೆಗಳು ಒಡೆದು ಹುಳಗಳಾಗುತ್ತವೆ. ಈ ಕಾಯಿಲೆ ದನಕ್ಕೆ ಮಾರಣಾಂತಿಕ ಅಲ್ಲದಿದ್ದರೂ ಅವುಗಳ ಜೀವ ಹಿಂಡುತ್ತದೆ. ಹಾಲಿನ ಉತ್ಪಾದನೆ ಕುಂಠಿತವಾಗುತ್ತದೆ. ಇನ್ನೊಂದು ವಿಪರ್ಯಾಸ ಎಂದರೆ ಲಂಪಿ ಸ್ಕಿನ್ ತಡೆಗೂ ಕರೊನಾದಂತೆ ಯಾವುದೇ ಲಸಿಕೆ ಇಲ್ಲ. ಆಡು, ಕುರಿಗಳ ಸಿಡುಬಿನ ಲಸಿಕೆಯನ್ನೇ ಸದ್ಯಕ್ಕೆ ಹಸು, ಎಮ್ಮೆಗಳಿಗೆ ನೀಡಲಾಗುತ್ತಿದೆ. ಕರೊನಾ ತಡೆಗೆ ಮನುಷ್ಯರಿಗೆ ಕ್ವಾರಂಟೈನ್ ಪರಿಹಾರವಾದರೆ ಲಂಪಿ ಸ್ಕಿನ್ ತಡೆಗೂ ಜಾನುವಾರುಗಳನ್ನು ಪ್ರತ್ಯೇಕವಾಗಿ ಇಡುವುದೇ ಪರಿಹಾರವಾಗಿದೆ.

    ಲಂಪಿ ಸ್ಕಿನ್ ತಡೆಗೆ ಪರಿಹಾರ: ಲಂಪಿ ಸ್ಕಿನ್ ಕಡಿಮೆಯಾಗಿದೆ. ಇನ್ನು ಬಾರದು ಎಂದಲ್ಲ. ಇದರಿಂದ ಜಾನುವಾರು ಮಾಲೀಕರು ಕೆಲ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಾರೆ ಪಶು ವೈದ್ಯರು. ಜ್ವರ ಕಾಣಿಸಿಕೊಂಡರೆ ಮೂರರಿಂದ ನಾಲ್ಕು ದಿನ ಚಿಕಿತ್ಸೆ ನೀಡಬೇಕು. ಮೈಮೇಲೆ ನೊಣ ಕುಳಿತುಕೊಳ್ಳದಂತೆ ಬೇವಿನ ಎಣ್ಣೆಯಂತಹ ತೈಲವನ್ನು ಹಚ್ಚಬೇಕು. ಕೊಟ್ಟಿಗೆಯ ಸುತ್ತ ನೊಣ ನಾಶಕ್ಕೆ ಔಷಧ ಸಿಂಪಡಣೆ ಮಾಡಬೇಕು. ಪರಿಸರ ಸ್ವಚ್ಛವಾಗಿಡಬೇಕು. ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಬಾರದು ಎನ್ನುತ್ತಾರೆ ಪಶು ವೈದ್ಯರು.

    ಅಕ್ಟೋಬರ್​ವರೆಗೆ ಲಂಪಿ ಸ್ಕಿನ್ ಮಾಹಿತಿ
    ತಾಲೂಕು ಗ್ರಾಮ ದನ ಎಮ್ಮೆ ಒಟ್ಟು
    ಹಳಿಯಾಳ- 159 3106 4 3110
    ಮುಂಡಗೋಡ- 57 2364 1 2365
    ಯಲ್ಲಾಪುರ- 27 1223 136 1369
    ಶಿರಸಿ- 24 25 000 25
    ಅಂಕೋಲಾ- 14 22 000 22
    ಒಟ್ಟು 281 6750 141 6891

    ಲಂಪಿ ಸ್ಕಿನ್​ಗೆ ನಿರ್ದಿಷ್ಟ ಲಸಿಕೆ ಇರಲಿಲ್ಲ. ಆದರೆ, ವಾತಾವರಣದಲ್ಲಿನ ಬದಲಾವಣೆಯಿಂದ ರೋಗ ನಿಯಂತ್ರಣಕ್ಕೆ ಬಂದಿದ್ದು, ಸಮಾಧಾನದ ಸಂಗತಿ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಜಾನುವಾರು ಮಾಲಿಕರು ಕೆಲ ಮುನ್ನೆಚ್ಚರಿಕೆ ವಹಿಸುವುದು ಒಳಿತು.
    | ಡಾ. ನಂದಕುಮಾರ ಪೈ ಉತ್ತರ ಕನ್ನಡ ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts