More

    ನಾಳೆ ‘ಕರುನಾಡ ಅರಸೊತ್ತಿಗೆಗಳು’ ಪಟ ಬಿಡುಗಡೆ- ವರ್ತಕ ಬಸವರಾಜ್ ಯಳಮಲ್ಲಿ ವಿಭಿನ್ನ ಪ್ರಯತ್ನ 

    ದಾವಣಗೆರೆ:ಏಳು ಶತಮಾನಗಳ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಐದು ಸಾವಿರಕ್ಕೂ ಹೆಚ್ಚಿನ ತೂಕ ಮತ್ತು ಅಳತೆ ಸಾಧನಗಳನ್ನು ಒಳಗೊಂಡ ‘ತುಲಾಭವನ’ ವಸ್ತು ಸಂಗ್ರಹಾಲಯವನ್ನು ದಾವಣಗೆರೆಯ ತೂಕ ಮತ್ತು ಅಳತೆ ಸಾಧನಗಳ ವರ್ತಕ ಬಸವರಾಜ್ ಯಳಮಲ್ಲಿ ಅವರು ಏಳು ವರ್ಷದ ಹಿಂದೆ ಆರಂಭಿಸಿ ಎಲ್ಲರ ಗಮನ ಸೆಳೆದದ್ದು ಇತಿಹಾಸ.
    ಇದೀಗ ‘ಕರುನಾಡ ಅರಸೊತ್ತಿಗೆಗಳು’ ಶೀರ್ಷಿಕೆಯಡಿ ಕರ್ನಾಟಕವನ್ನಾಳಿದ ರಾಜ ವಂಶಜರ ಸಂಕ್ಷಿಪ್ತ ಪರಿಚಯದ ಇತಿಹಾಸ ಅಧ್ಯಯನ ಪೂರಕವಾದ ಟೆರಿಕಾಟ್ ಬಟ್ಟೆಯ ಮೇಲಿನ ಮುದ್ರಿತ ಪಟವನ್ನು ಸಿದ್ಧಪಡಿಸಿದ್ದಾರೆ. ಅನೇಕರ ಸಹಕಾರದೊಂದಿಗೆ ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ 40-8 ಅಡಿ ವಿಸ್ತೀರ್ಣದ ಈ ಪಟ ರಚನೆಯ ವಿಭಿನ್ನ ಪ್ರಯತ್ನ ಕೈಗೂಡಿದ್ದು, ಏ.6ರಂದು ಕುವೆಂಪು ಕನ್ನಡ ಭವನದಲ್ಲಿ ಅನಾವರಣಗೊಳ್ಳಲಿದೆ.
    ಪುಸ್ತಕ ರೂಪದಲ್ಲಿ ಮಾಹಿತಿ ನೀಡುವ ಉದ್ದೇಶ ಆರಂಭದಲ್ಲಿತ್ತು. ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾದ್ದರಿಂದ ಪಟದ ರೂಪ ನೀಡಲಾಗಿದೆ ಎಂದು ತೂಕ ಮತ್ತು ಅಳತೆ ಸಾಧನಗಳ ವರ್ತಕ ಬಸವರಾಜ್ ಯಳಮಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ನಮ್ಮ ಟ್ರಸ್ಟ್‌ನ ಲೈಬ್ರರಿಯೂ ಒಳಗೊಂಡಂತೆ 65 ಪುಸ್ತಕಗಳಿಂದ ಪಡೆದ ಮಾಹಿತಿಗಳನ್ನು ಕ್ರೋಡೀಕರಿಸಿ ಕ್ರಿಸ್ತಶಕ 270ರ ಅವಧಿಯಿಂದ 1947ರ ಅವಧಿವರೆಗೆ ಸುಮಾರು 2217 ವರ್ಷಗಳ ಕಾಲಮಾನದಲ್ಲಿ ಕರ್ನಾಟಕವನ್ನು ಆಳಿದ 130 ರಾಜ ಮನೆತನಗಳ ವಿವರ ಇದರಲ್ಲಿದೆ. ಶಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ಕಳಚೂರಿಗಳು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಬಹುಮನಿ ಸುಲ್ತಾನರು, ಮೈಸೂರು ಒಡೆಯರು ಒಳಗೊಂಡು ಬ್ರಿಟಿಷರ ಅವಧಿಯವರೆಗಿನ ಮಾಹಿತಿ ಇಲ್ಲಿದೆ.
    ಆಯಾ ರಾಜವಂಶಗಳ ಆಡಳಿತಾವಧಿ, ರಾಜಧಾನಿ, ರಾಜಕೀಯ ಕುರಿತ ಅಂಶಗಳಿವೆ. ಆಕರಗ್ರಂಥಗಳ ವಿವರ ಹಾಗೂ ಅದರ ಜತೆಗೆ ಓದುವ ಕ್ರಮವನ್ನೂ ನೀಡಲಾಗಿದೆ. ಕೆಂಪು- ನೀಲಿ ಬಣ್ಣಗಳಲ್ಲಿ ಆಯಾ ಮನೆತನಗಳ ಆದಿ- ಅಂತ್ಯದ ಬಗ್ಗೆಯೂ ಸಾಂಕೇತಿಕವಾಗಿ ಮುದ್ರಿಸಲಾಗಿದೆ.
    ಇದಲ್ಲದೆ ಕರ್ನಾಟಕ ರಾಜ್ಯ ನಕ್ಷೆಯಲ್ಲಿ ರಾಜವಂಶಗಳ ರಾಜಧಾನಿ ಗುರುತಿಸಿ ರಾಜ್ಯದ ಇತಿಹಾಸವನ್ನು ಒಮ್ಮೆಗೆ ಸರಳವಾಗಿ ಅರ್ಥವಾಗುವಂತೆ ಹಾಗೂ ಪಟದ ಮೇಲೆ-ಕೆಳಭಾಗದಲ್ಲಿ ಪ್ರತಿ ಐದು ವರ್ಷಗಳ ಕಾಲಮಾನ ಗುರುತಿಸಿ, ರಾಜವಶಂಗಳ ಕಾಲಘಟ್ಟವನ್ನು ಸುಲಭವಾಗಿ ತಿಳಿಯುವಂತೆ ಮುದ್ರಿಸಲಾಗಿದೆ.
    ಇದು ಬಟ್ಟೆಯ ಪಟವಾದ್ದರಿಂದ ಚಿಕ್ಕ ಕೊಠಡಿಗಳಲ್ಲಿಯೂ ಸಹ ಮಡಿಕೆ ಮಾಡಿ ಪ್ರದರ್ಶಿಸಬಹುದು. ಶಾಲೆ, ಸಭೆ, ಸಮಾರಂಭಗಳಲ್ಲಿ ಹೊರಾಂಗಣ, ಒಳಾಂಗಣಗಳಲ್ಲಿ ಬಿತ್ತರಿಸಲೂ ಬಹುದಾಗಿದೆ. ಅಂತಾರಾಷ್ಟ್ರೀಯ ಮಾನದಂಡ ಪುಸ್ತಕ ಸಂಖ್ಯೆ (ಐಎಸ್‌ಬಿಎನ್) ಅಡಿಯಲ್ಲಿ ಈ ಪಟವು ನೋಂದಣಿಯಾಗಿದ್ದು ಕೃತಿಸ್ವಾಮ್ಯಕ್ಕಾಗಿ ಸಲ್ಲಿಸಲಾಗಿದೆ.
    ಇದನ್ನು ಬರುವ ದಿನಗಳಲ್ಲಿ ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್ ಮೂಲಕ ಪ್ರದರ್ಶಿಸುವ ಆಲೋಚನೆ ಇದೆ. ವಿವಿಧ ಜಿಲ್ಲೆಗಳಲ್ಲೂ ಈ ಪಟವನ್ನು ಬಿಡುಗಡೆಗೊಳಿಸುವ ಇರಾದೆ ಇದೆ. ಬಟ್ಟೆಯ ಮಾದರಿಯಲ್ಲಿ 100 ಪಟಗಳನ್ನು ಈಗಾಗಲೆ ಸಿದ್ಧ್ದಪಡಿಸಿದ್ದು ಆಸಕ್ತರು ಇದನ್ನು ಖರೀದಿಸಬಹುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ರಾಜವಂಶಜರ ಮಾಹಿತಿಗಳನ್ನು ಸೇರ್ಪಡೆ ಮಾಡುವ, ಸಾಫ್ಟ್‌ವೇರ್ ರೂಪದಲ್ಲಿ ಇದನ್ನು ಇತಿಹಾಸಪ್ರಿಯರಿಗೆ ನೀಡುವ ಚಿಂತನೆ ಇದೆ ಎಂದು ವಿವರಿಸಿದರು.
    ಎನ್.ಟಿ.ಮಂಜುನಾಥ, ಡಿ.ಶೇಷಾಚಲ, ನಂದೀಶ್ ಬಿ. ಮುದಹದಡಿ, ಎನ್.ಆರ್. ನವೀನ್‌ಕುಮಾರ್ ನೇರ‌್ಲಿಗಿ, ಕೆ.ಬಿ.ಮುದ್ದು ಬಸವೇಶ್ ಚಿತ್ತಾನಹಳ್ಳಿ ಮತ್ತಿತರರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಏ.6ರಂದು ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಈ ಮಾಹಿತಿ ಪಟವನ್ನು ಬಿಡುಗಡೆಗೊಳಿಸುವರು. ಎವಿಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಪಿ.ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಆರ್.ನಟರಾಜ್, ಚಂದನ್ ಪಬ್ಲಿಸಿಟಿಯ ಡಿ. ಶೇಷಾಚಲ, ಟ್ರಸ್ಟ್‌ನ ಗೌರವಾಧ್ಯಕ್ಷ ಎನ್.ಟಿ.ಮಂಜುನಾಥ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
    ಸುದ್ದಿಗೋಷ್ಠಿಯಲ್ಲಿ ಎನ್.ಟಿ.ಮಂಜುನಾಥ್, ನಂದೀಶ್ ಬದಾಮಿ, ಡಿ.ಶೇಷಾಚಲ, ದಿಳ್ಯೆಪ್ಪ, ಸುರೇಶ್, ಡಿ.ಆರ್.ನಟರಾಜ್, ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts