More

    ನಾಳೆಯಿಂದ ಹುಬ್ಬಳ್ಳಿಯಲ್ಲಿ ಲಾಕ್​ಡೌನ್ ಸಡಿಲ

    ಧಾರವಾಡ: ಕರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್​ಡೌನ್​ನಿಂದ ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆ ಈಗಾಗಲೇ ಪ್ರಾರಂಭವಾಗಿವೆ. ಮೇ 11ರಿಂದ ಹುಬ್ಬಳ್ಳಿಯ ಸೀಲ್​ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ವಾಣಿಜ್ಯ, ವಹಿವಾಟು ನಡೆಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಮತ್ತು ಲಾಕ್​ಡೌನ್ ಸಡಿಲಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ಪ್ರಕಾರ ಸ್ಥಾಪನೆಯಾಗಿರುವ ಎಲ್ಲ ವಸ್ತುಗಳ ಪೂರೈಕೆಯ ವಾಣಿಜ್ಯ, ವಹಿವಾಟುಗಳು ಧಾರವಾಡ, ಕಲಘಟಗಿ, ಅಳ್ನಾವರ, ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಲ್ಲಿ ಆರಂಭವಾಗಿವೆ. ಸೋಮವಾರದಿಂದ ಹುಬ್ಬಳ್ಳಿಯ ಸೀಲ್​ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಕಿರಾಣಿ ಅಂಗಡಿ, ಹೋಟೆಲ್​ಗಳಲ್ಲಿ ಪಾರ್ಸಲ್ ಸೇರಿ ವಿವಿಧ ವ್ಯಾಪಾರ ಚಟುವಟಿಕೆ ಆರಂಭಕ್ಕೆ ವಾರದ ಎಲ್ಲ ದಿನಗಳಲ್ಲೂ ಅವಕಾಶ ಕಲ್ಪಿಸಿ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಲಾಕ್​ಡೌನ್ ಸಡಿಲಿಕೆಯ ಅವಕಾಶವನ್ನು ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಕರೊನಾ ನಿಯಂತ್ರಣ ಜೊತೆಗೆ ದೇಶದ ಭವಿಷ್ಯ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ಆದ್ದರಿಂದ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಲಾಕ್​ಡೌನ್​ನಿಂದ ಕೆಲವು ಆರ್ಥಿಕ ಚಟುವಟಿಕೆಗೆ ವಿನಾಯಿತಿ ನೀಡಲಾಗುತ್ತಿದೆ. ಈ ವಿನಾಯಿತಿಯನ್ನು ಜನತೆ ಮನಬಂದಂತೆ ಬಳಸಬಾರದು. ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಅನಗತ್ಯ ತಿರುಗಾಟಕ್ಕೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸುವ ಕಾರ್ಯ ಚುರುಕುಗೊಳಿಸಬೇಕು. ದೇಶದೆಲ್ಲೆಡೆ ಇರುವಂತೆ ಇಲ್ಲಿಯೂ ಮಾಲ್, ಮಾರುಕಟ್ಟೆ ಸಂಕೀರ್ಣಗಳು, ಬಾರ್, ರೆಸ್ಟೋರೆಂಟ್, ಜಿಮ್ ಧಾರ್ವಿುಕ ಚಟುವಟಿಕೆಗಳು, ಸಭೆ, ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದರು.

    ಸೀಲ್​ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಎಲ್ಲ ಖಾಸಗಿ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಶೇ. 25ರಷ್ಟು ಕೈಗಾರಿಕಾ ಚಟುವಟಿಕೆ ಪುನರಾರಂಭವಾಗಿವೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಲಾಕ್​ಡೌನ್ ನಿರ್ಬಂಧ ಜಾರಿಯಲ್ಲಿದೆ. ಈ ಅವಧಿಯಲ್ಲಿ ಕೈಗಾರಿಕೆಗಳು ರಾತ್ರಿ ಪಾಳಿಯ ಕಾರ್ವಿುಕರ ವಿಶ್ರಾಂತಿಗೆ ತಮ್ಮ ಆವರಣದಲ್ಲಿಯೇ ಅವಕಾಶ ಕಲ್ಪಿಸಿ, ಉತ್ಪಾದನೆ ಚಟುವಟಿಕೆಯನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ವಿವಿಧ ಬಡಾವಣೆಗೆ ತರಕಾರಿ ಪೂರೈಕೆ ಮುಂದುವರಿಯಲಿ. ಇದರಿಂದ ಜನಸಂದಣಿ ನಿಯಂತ್ರಣವಾಗುತ್ತದೆ ಎಂದರು.

    ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ಸೇವೆ ನೀಡದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತನಾಡಿದಾಗ ಅವರು ಸರ್ಕಾರದೊಂದಿಗೆ ಎಲ್ಲ ಸಹಕಾರ ನೀಡಲು ಎಸ್​ಡಿಎಂ ಆಸ್ಪತ್ರೆಗೆ ನಿರ್ದೇಶನ ನೀಡಿದ್ದಾರೆ ಎಂದರು.

    ಹೊರ ರಾಜ್ಯದವರಿಗೆ ತಪಾಸಣೆ: ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಹೊರರಾಜ್ಯಗಳಿಂದ ಬರುವ ಜನರಿಗೆ ಈಗ ಅವಕಾಶ ದೊರೆತಿದೆ. ಎಲ್ಲರನ್ನೂ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಿಂದ ಬರುವ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್​ಗೆ ಒಳಪಡಿಸಲಾಗುವುದು ಎಂದರು.

    ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಶಾಸಕರಾದ ಕುಸುಮಾವತಿ ಶಿವಳ್ಳಿ, ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸದ್ಯ ಕಿಮ್್ಸ ಹೊರರೋಗಿ ವಿಭಾಗದಲ್ಲಿ 800, ಒಳರೋಗಿಗಳಾಗಿ 500 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿಯೂ ರೋಗಿಗಳಿದ್ದಾರೆ. ಕೋವಿಡ್ ಪ್ರಯೋಗಾಲಯದಲ್ಲಿ ಪ್ರತಿನಿತ್ಯ 250ಕ್ಕೂ ಹೆಚ್ಚು ವರದಿಗಳು ಸಿದ್ಧವಾಗುತ್ತಿವೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಯೋಗಿಕ ಪ್ಲಾಸ್ಮಾ ಥೆರಪಿ ಕೈಗೊಳ್ಳಲು ಐಸಿಎಂಆರ್​ನಿಂದ ಕಿಮ್ಸ್​ಗೆ ಅನುಮೋದನೆ ದೊರೆತಿದೆ.

    | ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts