More

    ನಾಳೆಯಿಂದ ಹತ್ತು ದಿನ ಲಾಕ್​ಡೌನ್

    ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕರೊನಾ ಹರಡುವಿಕೆ ತಡೆಗೆ ಜು. 15ರ ಬೆಳಗ್ಗೆ 10 ಗಂಟೆಯಿಂದ ಜು. 24ರ ರಾತ್ರಿ 8 ಗಂಟೆವರೆಗೆ ಜಿಲ್ಲೆಯಾದ್ಯಂತ ಲಾಕ್​ಡೌನ್ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರಕಟಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್​ಡೌನ್ ಮಾಡಬೇಕು ಎಂಬುದು ಬಹುಪಾಲು ಜನರ ಅಭಿಪ್ರಾಯವಾಗಿತ್ತು. ಮುಖ್ಯಮಂತ್ರಿಯವರೊಂದಿಗಿನ ವಿಡಿಯೋ ಕಾನ್ಪರೆನ್ಸ್​ನಲ್ಲಿ ಲಾಕ್​ಡೌನ್ ಅವಶ್ಯಕತೆಯನ್ನು ತಿಳಿಸಲಾಗಿದೆ. ಅವರು ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಈ ಬಗ್ಗೆ ರ್ಚಚಿಸಿದ್ದು, ಲಾಕ್​ಡೌನ್ ಘೊಷಿಸಲಾಗಿದೆ ಎಂದರು.

    ಲಾಕ್​ಡೌನ್​ಗೆ ಜನಸಾಮಾನ್ಯರು ಸಹಕರಿಸಿ ಯಶಸ್ವಿಗೊಳಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದನ್ನು ಪಾಲಿಸಬೇಕು. ಅಗತ್ಯ ಬಂದೋಬಸ್ತ್ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

    ನಿರ್ಮಾಣ ಕಾಮಗಾರಿ, ಕೈಗಾರಿಕೆ ಚಟುವಟಿಕೆ, ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ನೀಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತದಿಂದ ವಿಸõತ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಶೆಟ್ಟರ್ ತಿಳಿಸಿದರು.

    ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸ್​ಪಿ ವರ್ತಿಕಾ ಕಟಿಯಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಮಾರ್ಗಸೂಚಿ ಇಂದು

    10 ದಿನಗಳ ಲಾಕ್​ಡೌನ್​ಗೆ ಸಂಬಂಧಿಸಿ ಜಿಲ್ಲಾ ದಂಡಾಧಿಕಾರಿಯವರು ಜು. 14ರಂದು ಅಧಿಕೃತ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಸಾವಿರ ದಾಟಿ ಅಪಾಯದ ಗಂಟೆ ಬಾರಿಸಿರುವುದರಿಂದ, ವೈರಾಣು ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಈ ಬಾರಿಯ ಲಾಕ್​ಡೌನ್ ಆದೇಶ ಅತ್ಯಂತ ಕಠಿಣವಾಗಿ ಇರುವ ನಿರೀಕ್ಷೆ ಇದೆ. ಆದಾಗ್ಯೂ, ಜೀವನಾವಶ್ಯಕ ವಸ್ತುಗಳ ಪೂರೈಕೆ, ತುರ್ತು ಸೇವೆಗಳ ವಿಷಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನಿಯಮಗಳು ಜಾರಿಯಾಗಲಿವೆ.

    ಬಟ್ಟೆ, ಸ್ಟೀಲ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ಸ್, ಪಾದರಕ್ಷೆ, ಅಲಂಕಾರಿಕ ವಸ್ತುಗಳು, ಸಲೂನ್, ಹೋಟೆಲ್, ಬಾರ್​ಗಳು; ಸಾರಿಗೆ ಬಸ್, ಖಾಸಗಿ ವಾಹನಗಳ ಸಂಚಾರ ಬಂದ್ ಇರುವುದು ನಿರೀಕ್ಷಿತವಾಗಿದೆ. ಮದುವೆಯಂಥ ಸಮಾರಂಭಗಳಿಗೆ ಅನುಮತಿ ನಿರಾಕರಿಸಲಾಗುತ್ತದೆ, ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅತ್ಯಂತ ಸೀಮಿತ ಸಂಖ್ಯೆಯ ಬಂಧುಗಳಷ್ಟೇ ಸೇರಲು ಅವಕಾಶ ನೀಡಲಾಗುತ್ತದೆ; ದೇವಾಲಯ, ಪ್ರಾರ್ಥನಾ ಮಂದಿಗಳಲ್ಲಿ ಜನ ಸೇರುವುದನ್ನು ಪೂರ್ತಿಯಾಗಿ ನಿರ್ಬಂಧಿಸಲಾಗುತ್ತದೆ ಎಂದು ತಿಳಿದುಬಂದಿದೆ.

    ಈ ಹಿಂದಿನ ಲಾಕ್​ಡೌನ್ ವೇಳೆ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಅನೇಕರು ಲಾಕ್​ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಲ ಜಿಲ್ಲೆ ಹೆಚ್ಚು ಅಪಾಯ ಎದುರಿಸುತ್ತಿರುವುದರಿಂದ ಸ್ಥಗಿತತೆ ಆದೇಶ ಜಾರಿಗೆ ಪೊಲೀಸ್ ಇಲಾಖೆ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts