More

    ನಾಲ್ಕೈದು ದಿನದಲ್ಲಿ ಹೆಸರು ಖರೀದಿ ಕೇಂದ್ರ ಆರಂಭ

    ನರಗುಂದ: ರೈತರ ಹೋರಾಟಕ್ಕೆ ಸ್ಪಂದಿಸಿರುವ ಗದಗ ಜಿಲ್ಲಾಡಳಿತ ನಾಲ್ಕೈದು ದಿನಗಳಲ್ಲಿ ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲಿದ್ದು, ತಾಲೂಕಿನ ಯಾವುದೇ ರೈತರು ಧೃತಿಗೆಡಬಾರದು ಎಂದು ರೈತಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

    ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ನಿರಂತರ 1869ನೇ ದಿನದ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು.

    ಪ್ರಸಕ್ತ ವರ್ಷ ಜಿಲಾದ್ಯಂತ ಒಟ್ಟು 92,877 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟೇರ್​ಗೆ 6 ಕ್ವಿಂಟಾಲ್​ನಂತೆ ಈ ಬಾರಿ 56 ಸಾವಿರ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿತ್ತು. ಅದರಂತೆ ಜಿಲ್ಲೆಯ ಎಲ್ಲ ತಾಲೂಕಿನ ರೈತರು ಈಗಾಗಲೇ ತಮ್ಮ ಹೆಸರು ಕೊಯ್ಲು ನಡೆಸುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈತಸೇನಾ ಕರ್ನಾಟಕ ಸಂಘಟನೆ ಸದಸ್ಯರು ಬೆಂಬಲಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಹಾಗೂ ಪ್ರತಿ ಕ್ವಿಂಟಾಲ್ ಹೆಸರಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ಆ. 17ರಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಆ. 23ರಂದು ವಿವಿಧ ತಾಲೂಕಿನ ರೈತರ ನಿಯೋಗ ಕೃಷಿ ಸಚಿವರನ್ನು ಭೇಟಿ ಮಾಡಿ ರೈತರ 2 ಲಕ್ಷ ರೂ ಸಾಲಮನ್ನಾ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್​ಗೆ 35 ಸಾವಿರ ರೂಪಾಯಿ ಪರಿಹಾರ ಘೊಷಿಸುವಂತೆ ಮನವಿ ಮಾಡಿದ್ದೇವು. ಆದರೆ, ಸೂಕ್ತ ಸಮಯಕ್ಕೆ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆ. 27ರಂದು ಮತ್ತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಇನ್ನೂ ನಾಲ್ಕೈದು ದಿನಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸುವುದಾಗಿ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಹಾಗೂ ಕೃಷಿ ಮಾರಾಟ ಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಹೆಸರು ಮಾರಾಟ ಮಾಡಿರುವ ರೈತರ ಹಣವನ್ನು ಕಟ್ ಬಾಕಿ ಸಾಲಕ್ಕೆ ಪಾವತಿಸಿಕೊಳ್ಳಬಾರದು ಎಂದು ಜಿಲ್ಲೆಯ ಎಲ್ಲ ಬ್ಯಾಂಕ್​ಗಳಿಗೂ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ. ಕೇವಲ ಗ್ರಾಮ ಲೆಕ್ಕಾಧಿಕಾರಿ ನೀಡುವ ದೃಢೀಕರಣ ಪತ್ರವನ್ನು ಲಗತ್ತಿಸಿದರೆ ರೈತರ ಹೆಸರು ಉತ್ಪನ್ನ ಖರೀದಿಸುವ ಭರವಸೆಯನ್ನು ನೀಡಿದ್ದು, ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ತಿಳಿಸಿದರು.

    ವೇದಿಕೆಯಲ್ಲಿ ಈರಬಸಪ್ಪ ಹೂಗಾರ, ಅರ್ಜುನ ಮಾನೆ, ಫಕೀರಪ್ಪ ಜೋಗಣ್ಣವರ, ಸುಭಾಸ ಗಿರಿಯಣ್ಣವರ, ರಾಮಣ್ಣ ಸಾಬಳೆ, ವೆಂಕಪ್ಪ ಹುಜರತ್ತಿ, ಶಿವಾನಂದ ಹಳಕಟ್ಟಿ, ರಿಯಾಜ್ ಪಠಾಣ, ಶ್ರೀಶೈಲ್ ಮೇಟಿ, ಫಕೀರಪ್ಪ ಅಣ್ಣಿಗೇರಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts