More

    ನಾಲ್ಕೇ ಮೀಟರ್ ಭೂಸ್ವಾಧೀನ

    ವಿಜಯವಾಣಿ ವಿಶೇಷ ಹಾವೇರಿ

    ಸಿಎಂ ತವರು ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುಗಣಿ-ತಾಳಗುಂದ-ಹೊಸೂರ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ರಟ್ಟಿಹಳ್ಳಿ ತಾಲೂಕಿನ ರೈತರು ನಡೆಸಿದ್ದ ಉಪವಾಸ ಸತ್ಯಾಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. 10 ಮೀಟರ್ ಭೂಸ್ವಾಧೀನದ ಬದಲು 4 ಮೀಟರ್ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ.

    ಯೋಜನೆಗೆ ರಟ್ಟಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿನ ರೈತರ ಜಮೀನಿನಲ್ಲಿ ಜಾಕ್​ವೆಲ್ ಪೈಪ್​ಲೈನ್ ಅಳವಡಿಸಲು ಹಾಗೂ ಅದರ ದುರಸ್ತಿ ಉದ್ದೇಶದಿಂದ ರಸ್ತೆಗಾಗಿ 10 ಮೀಟರ್​ನಷ್ಟು ಜಮೀನನ್ನು ಸ್ವಾಧೀನಕ್ಕೆ ಯೋಜನೆಯಲ್ಲಿ ಅನು ಮೋದನೆ ನೀಡಲಾಗಿತ್ತು. ಇದನ್ನು ವಿರೋಧಿಸಿ ರಟ್ಟಿಹಳ್ಳಿಯಲ್ಲಿ ಉಭಯ ತಾಲೂಕಿನ ರೈತರು ನ್ಯಾಯವಾದಿ ಬಿ.ಡಿ. ಹಿರೇಮಠ ನೇತೃತ್ವದಲ್ಲಿ 14 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟನಿರತ ರೈತರೊಂದಿಗೆ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂಬ ಭರವಸೆ ನೀಡಿದ್ದರು.

    ಅದರಂತೆ ಬೆಂಗಳೂರಿನಲ್ಲಿ ಡಿ. 21ರಂದು ಕೃಷಿ ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ ಸಮ್ಮುಖದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಹೋರಾಟ ನಿರತ ರೈತರ ಪ್ರಮುಖ ಬೇಡಿಕೆಗಳಾದ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸಲು ಸೂಚಿಸಿದರು. ಶಿಕಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್​ವೆಲ್ ಅನ್ನು ಈಗಾಗಲೇ ನಿರ್ವಿುಸಲಾಗಿದೆ. 3 ಕಿಮೀ ಉದ್ದದ ರೈಸಿಂಗ್ ಮೇನ್ ಪೈಪ್​ಲೈನ್ ಹಾಕಲಾಗಿದೆ. ಪೂರ್ಣ ಪ್ರಮಾಣದಲ್ಲಿ ಯೋಜನೆಯ ಬದಲಾವಣೆ ತಾಂತ್ರಿಕವಾಗಿ ಕಷ್ಟಕರವಾಗಿದೆ. ಆದರೂ ರೈತರ ಬೇಡಿಕೆಯಂತೆ ಕಾಮಗಾರಿಯ ಪುನರ್ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು.

    ಪರ್ಯಾಯವಾಗಿ ಪೈಪ್​ಲೈನ್ ಮಾರ್ಗದ ಕುರಿತು ಇಐ ಟೆಕ್ನಾಲಜಿ ಪ್ರೖೆವೇಟ್ ಲಿಮಿಟೆಡ್​ನಿಂದ ಪರ್ಯಾಯ ಪೈಪ್​ಲೈನ್ ಅಳವಡಿಕೆಯ ಮಾರ್ಗದ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

    ಮಾಹಿತಿ ಲಭ್ಯ..
    ಇಐ ಟೆಕ್ನಾಲಜಿಯ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಯೋಜನೆಯ ಪರ್ಯಾಯ ಮಾರ್ಗದ ಕುರಿತು ತಾಂತ್ರಿಕ ವರದಿಯನ್ನು ಸಲ್ಲಿಸಿರುವ ಮಾಹಿತಿ ‘ವಿಜಯವಾಣಿ’ಗೆ ಲಭ್ಯವಾಗಿದೆ. ಶಿಕಾರಿಪುರ ನೀರಾವರಿ ಯೋಜನೆಗೆ ನೀರಾವರಿ ನಿಗಮವು ಜಾಕ್​ವೆಲ್ ನಿರ್ವಿುಸಿ, 3 ಕಿಮೀ ಉದ್ದದ ರೈಸಿಂಗ್​ವೆುೕನ್ ಹಾಕಿದೆ. ಇದರಲ್ಲಿ ಪೂರ್ಣ ಪ್ರಮಾಣದ ಯೋಜನೆಯ ಬದಲಾವಣೆಯೂ ತಾಂತ್ರಿಕವಾಗಿ ಕಷ್ಟಸಾಧ್ಯವಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪೈಪ್​ಲೈನ್ ಅಳವಡಿಸಲು 10 ಮೀಟರ್ ಅಗಲದ ಬದಲಾಗಿ 4 ಮೀಟರ್ ಅಗಲಕ್ಕೆ ಭೂಸ್ವಾಧೀನಗೊಳಿಸಿ ಪೈಪ್​ಲೈನ್ ಹಾಕುವುದು. ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಪೈಪ್​ಲೈನ್ ಅನ್ನು ರೈತರ ಜಮೀನಿನಲ್ಲಿ 1.3 ಮೀ ಆಳದಲ್ಲಿ ಅಳವಡಿಸಬೇಕು. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ, ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ವರದಿ ನೀಡಿದೆ.

    ಉಪವಾಸ ಸತ್ಯಾಗ್ರಹ ಕೈಬಿಡುವ ಸಮಯದಲ್ಲಿ ಯೋಜನೆಯನ್ನು ರೈತರ ಜಮೀನಿನ ಬದಲು ಪರ್ಯಾಯ ಮಾರ್ಗದಲ್ಲಿ ಅಂದರೆ ರಸ್ತೆ ಬದಿಯಲ್ಲಿ ನಿರ್ವಿುಸುವಂತೆ ಬೇಡಿಕೆ ಸಲ್ಲಿಸಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರು ಅದರ ಕುರಿತು ತಾಂತ್ರಿಕವಾಗಿ ರ್ಚಚಿಸಲು ನಮ್ಮನ್ನು ಆಹ್ವಾನಿಸುವ ಭರವಸೆ ನೀಡಿದ್ದರು. ಈವರೆಗೂ ನಮಗೆ ಕರೆ ಬಂದಿಲ್ಲ. ಇನ್ನೂ ಸ್ವಲ್ಪ ದಿನ ಕಾಯ್ದು ನೋಡುತ್ತೇವೆ. ನಮ್ಮ ಬೇಡಿಕೆಗೆ ಪೂರ್ಣ ಸ್ಪಂದನೆ ಸಿಗದೇ ಇದ್ದರೆ ಮತ್ತೆ ಹೋರಾಟ ಅನಿವಾರ್ಯ.
    | ಉಜನೆಪ್ಪ ಕೋಡಿಹಳ್ಳಿ ಹೋರಾಟಗಾರ ರೈತ

    ಯುಟಿಪಿ ಭೂಸ್ವಾಧೀನಕ್ಕೂ ಪರಿಹಾರ
    ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆಯೂ ಸರ್ಕಾರ ತೀರ್ಮಾನ ಕೈಗೊಂಡಿದೆ. ಯುಟಿಪಿ ಭೂಸ್ವಾಧೀನದಲ್ಲಿ ಪರಿಹಾರ ಬಾಕಿಯಿರುವ 233 ಪ್ರಕರಣಗಳಿಗೆ 154.80 ಲಕ್ಷ ರೂ.ಗಳನ್ನು ಕೂಡಲೆ ಬಿಡುಗಡೆಗೊಳಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts