More

    ನಾಲೆ ಆಧುನೀಕರಣದಲ್ಲಿ 500 ಕೋಟಿ ರೂ. ಅಕ್ರಮ

    ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರ ಸ್ವಕ್ಷೇತ್ರ ಕೆ.ಆರ್.ಪೇಟೆ ತಾಲೂಕಿನಲ್ಲಿ ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ. ಮುಖ್ಯಮಂತ್ರಿ, ಸಚಿವ ನಾರಾಯಣಗೌಡ ಸೇರಿದಂತೆ ಹಲವರಿಗೆ ಮನವಿ ನೀಡಿದ್ದರೂ ಕ್ರಮಕ್ಕೆ ನಿರ್ಲಕ್ಷೃ ವಹಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ರೈತ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್.ಜಯರಾಂ ಮತ್ತು ರಾಜೇಗೌಡ ಅವರು, ಮೂರೂವರೆ ವರ್ಷದಿಂದ ಈ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಇದು ಕದ್ದುಮುಚ್ಚಿ ನಡೆದಿರುವ ಹಗರಣವಲ್ಲ. ಸ್ಥಳಕ್ಕೆ ಹೋದರೂ ಅವ್ಯವಹಾರ ಏನೆಂದು ಕಣ್ಣಿಗೆ ಕಾಣುತ್ತದೆ. ಲೋಕಾಯುಕ್ತ, ಎಸಿಬಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಪುಟಗಳ ದಾಖಲೆ ಕಲೆಹಾಕಿ ಕೊಡಲಾಗಿದೆ. ಆದರೂ, ತನಿಖೆ ಮಾಡಲು ಏನು ಸಮಸ್ಯೆ? ಬಹುಶಃ ಎಲ್ಲರಿಗೂ ಕಿಕ್‌ಬ್ಯಾಕ್ ಹೋಗಿರಬಹುದು ಎಂದು ಆರೋಪಿಸಿದರು.


    ಪ್ರಕರಣದ ಆರೋಪಗಳಿವು: ಮುಖ್ಯ ನಾಲೆಯ ಸರಪಳಿ 72.260 ರಿಂದ 214.300 ಕಿ.ಮೀ.ವರೆಗೆ ನಡೆದಿರುವ 817.73 ಕೋಟಿ ರೂ. ಮೊತ್ತದ ಆಧುನೀಕರಣ ಕಾಮಗಾರಿ ಗುತ್ತಿಗೆಯನ್ನು ವಿಜಯಪುರ ಮೂಲದ ಎಂ.ವೈ.ಕಟ್ಟಿಮನಿ ಎಂಬುವರಿಗೆ ವಹಿಸಲಾಗಿದೆ. ಕಾಮಗಾರಿಯನ್ನು 2018ರಲ್ಲಿ ಪ್ರಾರಂಭಿಸಿ 15 ತಿಂಗಳೊಳಗೆ ಪೂರೈಸಬೇಕಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಸಾವಿರ ಕೋಟಿ ರೂ.ಗೂ ಅಧಿಕ ಬಿಲ್ ಪಾವತಿಸಿ ಭ್ರಷ್ಟಾಚಾರವೆಸಗಲಾಗಿದೆ ಎಂದು ಆರೋಪಿಸಿದರು.

    ಕಾಮಗಾರಿಗೆ ಅಗತ್ಯವಿರುವ 2.4 ಲಕ್ಷ ಕ್ಯೂಬಿಕ್ ಮೀಟರ್ ಮರಳನ್ನು ಮೈಸೂರು ಜಿಲ್ಲೆಯ ತಿ.ನರಸೀಪುರ ಕಾವೇರಿ ನದಿ ಪಾತ್ರದಿಂದ ಖರೀದಿಸಲಾಗಿದೆ ಎಂದು ಬಿಲ್ ಸೃಷ್ಟಿಸಿ 2.85 ಕೋಟಿ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ. ನಿಷೇಧಿತ ಪ್ರದೇಶವಾಗಿರುವ ಕಾವೇರಿ ನದಿ ಪಾತ್ರದಿಂದ ಈ ಪ್ರಮಾಣದ ಮರಳನ್ನು ಎತ್ತುವಳಿ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಿಖಿತ ದಾಖಲೆ ನೀಡಿದ್ದಾರೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಚೌಡಹಳ್ಳಿ ಎಂಬ ಹೆಸರಿನಲ್ಲಿ ನಕಲಿ ಗ್ರಾಮ ಸೃಷ್ಟಿಸಿಕೊಂಡು ಕಾಮಗಾರಿಗೆ ಬೇಕಾದ ಗ್ರಾವೆಲ್ ಮಣ್ಣನ್ನು ಖರೀದಿಸಲಾಗಿದೆ ಎಂದು 248 ಕೋಟಿ ರೂ. ಅವ್ಯವಹಾರ ನಡೆಸಲಾಗಿದೆ. ಇನ್ನು ಆಧುನೀಕರಣ ಯೋಜನೆಯಲ್ಲಿ ಈಗಾಗಲೇ ಬಹುತೇಕ ಕಡೆ ನಾಲೆ ಅಲ್ಲಲ್ಲಿ ಕುಸಿಯುತ್ತಿದ್ದು, ಕಳಪೆ ಕಾಮಗಾರಿ ಇದಕ್ಕೆ ಕಾರಣ. ಈ ಅಕ್ರಮವನ್ನು ಮುಚ್ಚಿಹಾಕಲು ಇಲಾಖೆ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ದೂರಿದರು.

    ಕೊಲೆ ಬೆದರಿಕೆ: ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕೊಲೆ ಬೆದರಿಕೆ ಹಾಕಲಾಗಿದೆ. ಆದರೂ ಹಿಂದೆ ಸರಿದಿಲ್ಲ. ಇನ್ನು ಅವ್ಯವಹಾರ ಕುರಿತಂತೆ ಲೋಕಾಯಕ್ತ ನೇಮಿಸಿದ್ದ ನೀರಾವರಿ ತಾಂತ್ರಿಕ ಸಮಿತಿ ಭೇಟಿ ನೀಡಿದ್ದ ವೇಳೆ ಅವರಿಗೆ ಪಾರದರ್ಶಕವಾಗಿ ವರದಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾದರು. ಇತ್ತ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹರಿಹಾಯ್ದರು.

    ಅವ್ಯವಹಾರ ತನಿಖೆಗೆ ಮುಂದಾಗದಿರುವ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ 6 ದಿನ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಎಸ್.ಅಶ್ವಥಿ ಭೇಟಿ ನೀಡಿ 15 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಾಲೂಕಿಗೆ ಆಗಮಿಸಿದ್ದ ವೇಳೆ ಅವರಿಗೂ ಮನವಿ ಸಲ್ಲಿಸಿದ್ದೆವು. ನಂತರ ಸಿಎಂ ಭೇಟಿ ಮಾಡಿದಾಗ ವಿಕಾಸಸೌಧದಲ್ಲಿ ವಿಚಾರಿಸಿ ಎಂದು ಹೇಳುತ್ತಾರೆ. ಅಲ್ಲಿ ಹೋಗಿ ನೋಡಿದರೆ ಸಂಬಂಧಪಟ್ಟ ಕಡತ ನಾಪತ್ತೆಯಾಗಿದೆ. ಇದೆಲ್ಲವನ್ನು ಗಮನಿಸಿದರೆ ಈ ಅವ್ಯವಹಾರದಲ್ಲಿ ಸಚಿವರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ನಾಗೇಗೌಡ, ಧನಂಜಯ, ಶ್ರೀಕಾಂತ್ ಹಾಜರಿದ್ದರು.


    ದಾಖಲೆ ಕೊಡ್ತೀವಿ, ತನಿಖೆ ಮಾಡ್ತೀರಾ?: ರೈತ ಸಂಘದ ಮುಖಂಡ ಪ್ರಸನ್ನ ಎನ್.ಗೌಡ ಮಾತನಾಡಿ, ಗುತ್ತಿಗೆ ಅವ್ಯಹಾರದಲ್ಲಿ ಶೇ.40ರಷ್ಟು ಕಮಿಷನ್‌ಗೆ ಸಂಬಂಧಿಸಿದಂತೆ ಕೆಂಪಣ್ಣ ಅವರ ಆರೋಪಕ್ಕೆ ದಾಖಲೆ ನೀಡಿ ಎಂದು ಸಿಎಂ ಸೇರಿದಂತೆ ಬಿಜೆಪಿ ನಾಯಕರು, ಸಚಿವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ, ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೀರಾ ಎಂದು ಸವಾಲು ಹಾಕಿದರು.ಸಚಿವರು ಹಾಗೂ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜನತಾ ನ್ಯಾಯಾಲಯದ ಮಾದರಿಯಲ್ಲಿ ವಾದ-ವಿವಾದ ನಡೆದರೂ ಸ್ಥಳ ಪರಿಶೀಲನೆಗೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ ಅವರು, ಸ್ಥಳಕ್ಕೆ ಬಂದರೆ ಇವರ ಬಂಡವಾಳ ತಿಳಿಯುತ್ತದೆ ಎಂದು ಬರುತ್ತಿಲ್ಲ. ಸಚಿವರಿಗೆ ನೈತಿಕತೆ ಇದ್ದರೆ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಿಲ್ಲುವುದಿಲ್ಲ. ಅವ್ಯವಹಾರದ ದಾಖಲೆ ಕೊಟ್ಟರೂ ದೂರು ದಾಖಲಾಗುವುದಿಲ್ಲ ಎಂದರೆ ನಾವು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎನ್ನುವುದನ್ನು ಯೋಚಿಸಬೇಕಿದೆ. ಆದ್ದರಿಂದ ಹೋರಾಟ ಅನಿವಾರ್ಯವಾಗಿದ್ದು, ಇದಕ್ಕಾಗಿ ಮುಂದಿನ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗುವುದು ಎಂದರು.

    ಪ್ರಜಾಪ್ರಭುತ್ವದ ದುರಂತ: ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಆಧುನೀಕರಣದ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಗ್ರ ದಾಖಲೆ ನೀಡಿದರೂ ಸರ್ಕಾರ ಹಾಗೂ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ? ಹಗರಣದ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆಯಾಗಿದ್ದರೂ ಯಾವುದೇ ಪ್ರಗತಿ ಕಾಣದಿರುವುದು ಪ್ರಜಾಪ್ರಭುತ್ವದ ದುರಂತವಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.ಯೋಜನೆಯಡಿ ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕು ವ್ಯಾಪ್ತಿಯ ನಾಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, 65 ಗೇಟ್‌ಗಳನ್ನು ಬದಲಾಯಿಸಲಾಗಿದೆ ಎಂದು ಹಣ ಗುಳುಂ ಮಾಡಲಾಗಿದೆ. ಗಟ್ಟಿ ಕಲ್ಲುಗಳನ್ನು ತೆಗೆಯಲು 53 ಕೋಟಿ ರೂ. ವ್ಯಯಿಸಿರುವ ಬಗ್ಗೆ ದಾಖಲೆ ನೀಡಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಈ ಕಲ್ಲುಗಳನ್ನು ಕೇವಲ 43.89 ಲಕ್ಷ ರೂ. ಗಳಿಗೆ ಹರಾಜು ಹಾಕಿರುವ ಹುನ್ನಾರವೇನೆಂದು ಪ್ರಶ್ನಿಸಿದ ಅವರು, ಅವ್ಯವಹಾರವನ್ನು ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ತನಿಖೆ ಮಾಡಿಸುವ ಭರವಸೆ ನೀಡಿದ್ದ ಕೆ.ಸಿ.ನಾರಾಯಣಗೌಡ ಅವರು ಜಾಣ ಮೌನವಹಿಸಿರುವುದರ ಹಿಂದಿನ ಉದ್ದೇಶವೇನು? ಕಮಿಷನ್ ದಂಧೆಯಲ್ಲಿ ಸಚಿವರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದರು.

    ಸಂಸದೆಗೆ ಮನವಿ: ಹಲವರಿಗೆ ಮನವಿ ಕೊಟ್ಟರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಮಿಷನ್ ದಂಧೆ ಬಗ್ಗೆ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅವರಿಗೂ ದಾಖಲೆಯೊಂದಿಗೆ ದೂರು ಕೊಡಲಾಗುವುದು. ಅವರು ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts