More

    ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ


    ಚಿತ್ರದುರ್ಗ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಂತೆ ಜಿಲ್ಲಾದ್ಯಂತ ಕನ್ನಡದ ವ್ಯಾಪಕ ಬಳಕೆ ಹಾಗೂ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60 ಕನ್ನಡದ ಬರಹವಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
    ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರದರ್ಶಿಸುವ ಕುರಿತಂತೆ ನಗರದ ಡಿಸಿ ಕಚೇರಿ ಈಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ಕನ್ನಡದ ಅನುಷ್ಠಾನಕ್ಕಾಗಿ ಯುದ್ಧೋಪಾದಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಕಟ್ಟಪ್ಪಣೆ ಮಾಡಿದರು.
    ವಿವಿಧ ಇಲಾಖೆಗಳು, ಉದ್ಯಮಗಳು ಅಥವಾ ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರು ಮತ್ತು ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ಪ್ರಮುಖವಾಗಿ ಶೇ.60 ಕನ್ನಡದಲ್ಲಿ ಇರಬೇಕು ಎಂದರು.
    ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರು ಸೇರಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳಲ್ಲಿಯ ವಿವರಗಳು ಪ್ರಮುಖವಾಗಿ ಕನ್ನಡದಲ್ಲಿ ಇರಬೇಕು ಎಂದು ತಿಳಿಸಿದರು.
    ಕರ್ನಾಟಕದಲ್ಲಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಪ್ರಕಟಣೆಗಾಗಿ ಹೊರಡಿಸಿದ ಎಲ್ಲ ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆಗಳು ಕನ್ನಡದಲ್ಲಿ ಇರಬೇಕು. ಕಾರ್ಯಕ್ರಮಗಳ ಕುರಿತ ಕರಪತ್ರ, ಬ್ಯಾನರ್, ಪ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿಗಳು, ನೋಟೀಸ್‌ಗಳು ಕನ್ನಡದಲ್ಲಿ ಇರಬೇಕು ಎಂದರು.
    ಸರ್ಕಾರವು ಕೈಗೊಂಡಂತಹ, ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಬಿಲ್ಲು, ನೋಟಿಸುಗಳು ಕನ್ನಡದಲ್ಲಿ ಇರಬೇಕು ಎಂದು ಹೇಳಿದರು.
    ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡದಲ್ಲಿ ಪ್ರದರ್ಶಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಿದರು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತೀಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts