More

    ಮಾಗಿ ಉಳುಮೆಗೆ ಒಲವು ಹೆಚ್ಚಲಿ

    ಚಿತ್ರದುರ್ಗ: ಜಿಲ್ಲೆಯಲ್ಲಿ 59 ವರ್ಷ ಸುರಿದ ಮಳೆಯ ಸರಾಸರಿ ಗಮನಿಸಿದರೆ, 35 ವರ್ಷಕ್ಕೂ ಅಧಿಕ ಕಾಲ ಬರ ಕಂಡಿದ್ದೇವೆ. ಹೀಗಾಗಿ ಮಧ್ಯ ಕರ್ನಾಟಕ ಭಾಗದ ಒಣವಲಯವೆಂದೇ ಗುರುತಿಸಿಕೊಂಡಿದೆ. ನೀರಿನ ಕೊರತೆ ಎದುರಿಸುತ್ತಿರುವ ಕಾರಣ ಮಾಗಿ ಉಳುಮೆಗೆ ರೈತರು ಹೆಚ್ಚು ಒಲವು ತೋರಬೇಕಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ವಿಶ್ಲೇಷಿಸಿದ್ದಾರೆ.
    ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಚಿತ್ರದುರ್ಗದ ಕಚೇರಿಯಲ್ಲಿ ಗುರುವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ವಿ-ಸಂವಾದದಲ್ಲಿ ಬರ ಎದುರಿಸುವ ಕುರಿತು ಅನಿಸಿಕೆ ಹಂಚಿಕೊಂಡರು.
    ಕೋಟೆನಾಡಿನಲ್ಲಿ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಅಸಮರ್ಪಕ ಮಳೆಯಾಗುತ್ತಿದೆ. ವಾರ್ಷಿಕ ಶೇ. 35 ರಷ್ಟು ಮಳೆ ಕೊರತೆ ಎದುರಿಸುತ್ತ ಬಂದಿದೆ. ಒಣ ಹವೆಯಿಂದ ಕೂಡಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬೆಳೆಗಳ ಇಳುವರಿಯಲ್ಲೂ ಸಮಸ್ಯೆ ಅನುಭವಿಸಲಾಗುತ್ತಿದೆ. ಆದ್ದರಿಂದ ಜಾಗರೂಕತೆಯಿಂದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಯಲ್ಲಿ ತೊಡಗಬೇಕಿದೆ ಎನ್ನುತ್ತಾರೆ ಅವರು.

    • ಸಲಹೆಗಳೇನು ?
      ಪ್ರತಿ ವರ್ಷ ದೀರ್ಘಾವಧಿ, ಅಲ್ಪಾವಧಿ ಮಳೆ ಹಂಗಾಮು ಯಾವ ರೀತಿ ಇದೆ ಎಂಬುದನ್ನು ಮೊದಲು ರೈತರು ತಿಳಿಯಬೇಕು. ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ, ಏರು ಮಡಿ ಪದ್ಧತಿಯಲ್ಲಿ ಬಿತ್ತನೆ ಕೈಗೊಳ್ಳುವುದು ಉತ್ತಮ. ಮಣ್ಣು ಶೇ. 25 ರಷ್ಟು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದ್ದು, ಒಡ್ಡುಗಳ ನಿರ್ಮಾಣ ತುಂಬ ಉಪಯುಕ್ತವಾಗಲಿದೆ. ಡಿಎಚ್ 2.56, ಟಿಎಂವಿ 2, ಕದ್ರಿ-6, ಕೆ-6, ಸಿಎಚ್-5, ಸಿಎಚ್-7 ಸೇರಿ ಸೂಕ್ತ ತಳಿಗಳ ಆಯ್ಕೆ ಅಗತ್ಯ. ಕನಿಷ್ಠ 8 ರಿಂದ 10 ಕ್ವಿಂಟಾಲ್ ಇಳುವರಿ ಪಡೆದ ನಿದರ್ಶನಗಳಿವೆ ಎಂದು ಮಾಹಿತಿ ನೀಡಿದರು.
    • ಸಮಗ್ರ ಕೃಷಿ ಅಳವಡಿಸಿಕೊಳ್ಳಿ
      ಪ್ರಕೃತಿ ಸಮತೋಲನದ ಜತೆಗೆ ಕೃಷಿ ಸಮತೋಲನ ಸಾಧಿಸಬೇಕಿದೆ. ನೀರಾವರಿ ಸೌಲಭ್ಯ ಇರುವೆಡೆ ಅಡಕೆ, ತೆಂಗು ಉಳಿದೆಡೆ ಗೋಡಂಬಿ, ನೇರಳೆ, ಸೀತಾಫಲ, ಕಿತ್ತಳೆ, ಡ್ರಾೃಗನ್ ಇನ್ನಿತರೆ ತೋಟಗಾರಿಕೆ ಬೆಳೆ ಸೂಕ್ತ. ತೇಗ, ಮಹಾಗನಿ ಬೆಳೆಗೂ ಅವಕಾಶವಿದೆ. ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡಿದರೆ ನಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ. ಆದಾಯ ಕೂಡ ಹೆಚ್ಚಾಗಲಿದೆ. ಬರ ನಮಗೆ ಹೊಸದೇನಲ್ಲ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡಲ್ಲಿ ಸಮರ್ಥವಾಗಿ ಎದುರಿಸಬಹುದು ಎಂದು ತಿಳಿಸಿದರು.
    • ಮಳೆ ನೀರು ಸಂಗ್ರಹಿಸಿ
      ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಸಬ್ಸಿಡಿ ದೊರೆಯಲಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು. ಮಳೆಗಾಲದಲ್ಲಿ ಬೀಳುವ ನೀರಿನ ಸಂಗ್ರಹಕ್ಕೆ ಮುಂದಾಗಿ. ಕೃಷಿ ಹೊಂಡ ತುಂಬಿದರೆ, ಬರಗಾಲದಲ್ಲಿ 6 ತಿಂಗಳು ಜಮೀನುಗಳಿಗೆ ನೀರುಣಿಸಬಹುದು. ಹನಿ-ತುಂತುರು ನೀರಾವರಿಗೆ ಹೆಚ್ಚು ಆದ್ಯತೆ ನೀಡಿ ಎನ್ನುತ್ತಾರೆ ಮಂಜುನಾಥ್. ಬರ, ಬೆಳೆ ವಿಮೆ ಪರಿಹಾರ: ಬರಗಾಲ ಹಿನ್ನೆಲೆಯಲ್ಲಿ ಕಳೆದ ಮುಂಗಾರು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಗರಿಷ್ಠ 2 ಸಾವಿರ ರೂ. ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿದೆ. ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರ ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಆಗಲಿದೆ. ಕಳೆದ ಮುಂಗಾರಿನಲ್ಲಿ ಜಿಲ್ಲಾದ್ಯಂತ 1.09 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಕುರಿ-ಮೇಕೆ ಸಾಕಣೆ ಅಗತ್ಯ: ಕೃಷಿ, ತೋಟಗಾರಿಕೆ ಬೆಳೆ ಜತೆ ರೈತರು ಆರ್ಥಿಕಾಭಿವೃದ್ಧಿಗೆ ಪೂರಕವಾಗಿ ಕೋಳಿಫಾರ್ಮ್, ಮೀನುಗಾರಿಕೆ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ಇನ್ನಿತರೆ ಚಟುವಟಿಕೆಗೆ ಮುಂದಾಗಬೇಕು. ಸಂಬಂಧಿಸಿದ ಇಲಾಖೆ ಕಚೇರಿಗಳಲ್ಲಿ ಸೂಕ್ತ ಮಾಹಿತಿ ಪಡೆಯಬಹುದು. ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ: ವಾಣಿಜ್ಯ, ನೀರಾವರಿ ಬೆಳೆಗಾರರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಪ್ರತಿ ವರ್ಷ ಮಾಡಿಸುವುದು ಉತ್ತಮ. ಸಾವಯವ ಕೃಷಿ ಪದ್ಧತಿ ಕೈಬಿಟ್ಟ ನಂತರ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಮಳೆ ನೀರು, ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡಬೇಕು. ಮಳೆಯಾಶ್ರಿತ ಬೆಳೆಗೆ ಮುಂದಾಗುವ ರೈತರು ಕೂಡ ಕಾಲ-ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.

    • ಸಮುದಾಯ ಕೃಷಿ ಹೊಂಡ ನಿರ್ಮಿಸಿಕೊಳ್ಳಿ
      ಜಿಲ್ಲೆಯ 6 ತಾಲೂಕಿನಲ್ಲೂ ಬರವಿದೆ. 6 ಲಕ್ಷ ಲೀಟರ್ ಸಾಮರ್ಥ್ಯದ ವೈಯಕ್ತಿಕ, ಸಮುದಾಯ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು. ತೇವಾಂಶ ಆವಿಯಾಗಿ ಹೋಗದಂತೆ ತಡೆಯಲು ಮಲ್ಚಿಂಗ್ (ಹೊದಿಕೆ) ಸಬ್ಸಿಡಿ ಪಡೆಯಬಹುದು. ಕಲ್ಲಂಗಡಿ, ಕರ್ಬೂಜ, ಅಡಕೆ, ತೆಂಗು, ನೇರಳೆ, ದಾಳಿಂಬೆ, ಸೀತಾಫಲ ಹಾಗೂ ತರಕಾರಿ ಬೆಳೆಗಳು ಜಿಲ್ಲೆಗೆ ಸೂಕ್ತವಾಗಿವೆ. ಕಡಿಮೆ ನೀರಿನಲ್ಲಿ ಬೆಳ್ಳುಳ್ಳಿ ಬೆಳೆಯಬಹುದು ಎಂದು ಸಲಹೆ ನೀಡಿದ್ದಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ.ಜಿ.ಸವಿತಾ.
      ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಕಾರಣ ಹೊಳಲ್ಕೆರೆಯಲ್ಲಿ 7.5 ಎಚ್‌ಬಿ ಸಾಮರ್ಥ್ಯದ 50 ಯುನಿಟ್ ಸೋಲಾರ್ ಪ್ಲಾಂಟೇಷನ್‌ಗೆ ವರ್ಕ್ ಆರ್ಡರ್ ನೀಡಲಾಗಿದೆ. ಪ್ರತಿ ಯುನಿಟ್‌ಗೆ ಅಂದಾಜು 5 ಲಕ್ಷ ರೂ. ವೆಚ್ಚವಾಗಲಿದ್ದು, 1.5 ಲಕ್ಷ ರೂ. ಸಬ್ಸಿಡಿ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.
    • ಮಹದೇವಪುರ ಮಾದರಿ ತೋಟಗಾರಿಕೆ ಕ್ಷೇತ್ರ
      ಜಿಲ್ಲೆಯ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 420 ಎಕರೆ ವಿಸ್ತೀರ್ಣದೊಂದಿಗೆ ಏಳು ತೋಟಗಾರಿಕೆ ಕ್ಷೇತ್ರಗಳಿವೆ. ಈ ಹಿಂದೆ ಬರಗಾಲ ಸಂದರ್ಭದಲ್ಲಿ ಕಳೆಗುಂದಿದ್ದ ಈ ಎಲ್ಲ ಕ್ಷೇತ್ರಗಳಲ್ಲಿ ಹನಿ ನೀರಾವರಿ ಅಳವಡಿಸಿ ಅಭಿವೃದ್ಧಿ ಪಡಿಸಲಾಗಿದೆ. ಚಿತ್ರದುರ್ಗ ತಾಲೂಕು ನೆಲ್ಲಿಕೆರೆ, ಮೊಳಕಾಲ್ಮೂರು-ತಮ್ಮೇನಹಳ್ಳಿ, ರಾಯಪುರ, ಚಳ್ಳಕೆರೆ-ಮಹದೇವಪುರ, ನಗರಂಗೆರೆ, ಹೊಳಲ್ಕೆರೆ-ಚಿತ್ರಹಳ್ಳಿ, ಹೊಸದುರ್ಗ ತಾಲೂಕು ಹಾಲುರಾಮೇಶ್ವರದಲ್ಲಿ ತೋಟಗಾರಿಕೆ ಕ್ಷೇತ್ರಗಳಿವೆ. ಮಹದೇವಪುರವನ್ನು 2021ರಲ್ಲಿ ರಾಜ್ಯದಲ್ಲೇ ಮಾದರಿ ತೋಟಗಾರಿಕೆ ಕ್ಷೇತ್ರವೆಂದು ಗುರುತಿಸಲಾಗಿದೆ ಎನ್ನುತ್ತಾರೆ ಅವರು.
    • ಕೋಲ್ಡ್ ಸ್ಟೋರೇಜ್
      ಹಿರಿಯೂರು ತಾಲೂಕು ಅಕ್ಷಯ ಫುಡ್ ಪಾರ್ಕ್‌ನಲ್ಲಿ ಹಾಗೂ ಚಳ್ಳಕೆರೆಯಲ್ಲಿ ಎರಡು ಖಾಸಗಿ ಕೋಲ್ಡ್ ಸ್ಟೋರೇಜ್‌ಗಳಿದ್ದು, ಚಳ್ಳಕೆರೆ ಎಪಿಎಂಸಿಯಲ್ಲಿ ಹೊಸದಾಗಿ ಮತ್ತೊಂದು ಖಾಸಗಿಯಾಗಿ ಶೀತಲೀಕರಣ ಘಟಕ ಸ್ಥಾಪನೆ ಆಗುತ್ತಿದೆ.
    • ತರಬೇತಿ
      ಹಿರಿಯೂರು ತಾಲೂಕು ಬಬ್ಬೂರು ಫಾರ್ಮ್ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಕಾಲ-ಕಾಲಕ್ಕೆ ವಿವಿಧ ತರಬೇತಿಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ತರಬೇತಿ ವಿವರಗಳನ್ನು ಆಯಾ ಸಮಯಕ್ಕೆ ಪತ್ರಿಕೆಗಳ ಮೂಲಕ ಕೊಡಲಾಗುತ್ತಿದೆ. ರೈತರು, ರೈತರ ಮಕ್ಕಳು ಹಾಗೂ ಮಹಿಳೆಯರು ತರಬೇತಿ ಪ್ರಯೋಜನ ಪಡೆಯಬಹುದು.
    • ಧೃತಿಗೆಡುವುದು ಬೇಡ
    • ಬರಗಾಲದ ಬಂದಿದೆ ಎಂದು ರೈತರು ಧೃತಿಗೆಡಬಾರದು. ಹೊಸ ಮುಂಗಾರು ಹಂಗಾಮಿನಲ್ಲಿ ಮಳೆ ಆಗಲಿದೆ ಎಂದು ಹವಾಮಾನ ವರದಿ ಇದೆ. ಹವಾಮಾನಕ್ಕೆ ಪೂರಕವಾಗಿ ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಅಂತರ ಬೆಳೆಗೆ ಒತ್ತು ಕೊಡಬೇಕಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಡಿಡಿಎ ಡಾ.ಕೆ.ಎಸ್.ಶಿವಕುಮಾರ್.
    • ಕೃಷಿ ಭಾಗ್ಯ, ಪ್ರಧಾನಮಂತ್ರಿ ಕೃಷಿ ಸಿಂಚಯಿನಿ, ಅಟಲ್ ಭೂ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿ ಇನ್ನಿತರೆ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ. ಬರ ನಿರೋಧಕ ತಳಿಗಳನ್ನು ಬೆಳೆಯಲು ಆಸಕ್ತಿವಹಿಸಿ. ಸಾವಯವ, ಸಮಗ್ರ ಕೃಷಿಯಿಂದ ವೆಚ್ಚ ಕಡಿಮೆಯಾಗಲಿದೆ. ನೀರಿನ ಸದ್ಬಳಕೆಯೊಂದಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಗಳಲ್ಲಿ ಲಭ್ಯವಿರುವ ಸಬ್ಸಿಡಿ ಸೇರಿ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
    • ತ್ಯಾಜ್ಯ ಮರುಬಳಕೆ ಅಗತ್ಯವಿದೆ
      ಅಡಕೆ ಸಿಪ್ಪೆ, ತೆಂಗಿನ ಮೊಟ್ಟೆ ಸೇರಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಮರು ಬಳಕೆಗೆ ಮುಂದಾಗಬೇಕಿದೆ. ಹೊದಿಕೆಯಾಗಿಯೂ ಬಳಸಬಹುದು. ಹಸಿರೆಲೆ ಮತ್ತು ಜೈವಿಕ ಗೊಬ್ಬರ, ಕೀಟನಾಶಕ ಕೂಡ ನೀಡಲಾಗುತ್ತಿದೆ. ಹೊಂಡಕ್ಕೆ ಪಾಲಿಥಿನ್ ಸಾಮಗ್ರಿ ಹಾಕಿದಲ್ಲಿ ನೀರು ಇಂಗುವುದಿಲ್ಲ. ಅಂತರ್ಜಲ ಮಟ್ಟ ಕುಸಿತದ ಕಾರಣ ನೀರು ಸಂರಕ್ಷಿಸಲು ರೈತರು ಮುಂದಾಗಬೇಕು. ಪೋಲಾಗುವುದನ್ನು ತಡೆದು ಹೊಲ, ತೋಟಗಳಿಗೆ ಹರಿಯುವಂತೆಯೂ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆ ಎಡಿಎ ಡಾ.ಎನ್.ಚಂದ್ರಕುಮಾರ್ ಹೇಳುತ್ತಾರೆ.
    • ಅಡಕೆಗೆ ಪರ್ಯಾಯ ಏನು?
    • ಅಡಕೆ ಬದಲು ಪರ್ಯಾಯ ಬೆಳೆ ಸಲಹೆಗೆ ರೈತರು, ಅಡಕೆಯಂತೆ ಗ್ಯಾರಂಟಿ ಆದಾಯವನ್ನು ತಂದು ಕೊಡುವ ಪರ್ಯಾಯ ಬೆಳೆ ಯಾವುದು ಇದೆ ಎಂದು ರೈತರು ಕೇಳುವುದು ಸಹಜ. ಅಡಕೆ ನಿರೀಕ್ಷಿತ ಆದಾಯ ತಂದು ಕೊಡಲಿದೆ. ಆದರೆ, ಇದರ ವಿಸ್ತೀರ್ಣ ಹೆಚ್ಚಾದರೆ, ಆಹಾರ ಬೆಳೆಗಳ ವಿಸ್ತೀರ್ಣ ಕುಗ್ಗುತ್ತದೆ ಎಂಬ ಆತಂಕ ಇದ್ದೇ ಇದೆ ಎನ್ನುತ್ತಾರೆ ಅಧಿಕಾರಿಗಳು.
    • ಗಳಿಸಿದ್ದ್ದು ಕಡಿಮೆ, ಕಳೆದುಕೊಂಡದ್ದೇ ಹೆಚ್ಚು
    • ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ ಜಿಲ್ಲೆ ರೈತರು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. 10 ವರ್ಷಗಳಿಗೆ ಲೆಕ್ಕ ಹಾಕಿದರೂ ರೈತರು ಕನಿಷ್ಠ 2-3 ವರ್ಷ ಒಂದಿಷ್ಟು ಆದಾಯ ನೋಡಿದರೆ, ಆರೇಳು ವರ್ಷ ನಷ್ಟವನ್ನೇ ಅನುಭವಿಸಿಕೊಂಡು ಬಂದಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
    • ಆ್ಯಪ್‌ಗಳನ್ನು ಬಳಸಿಕೊಳ್ಳಿ
      ಮುಂಗಾರು ಹಂಗಾಮು ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳನ್ನು ಅರಿತು ಬೆಳೆಯೋಜನೆ ರೂಪಿಸಿಕೊಳ್ಳುವ ಅಗತ್ಯವಿದೆ. ಮೇಘದೂತ, ವರುಣ ಮೊದಲಾದ ಆ್ಯಪ್‌ಗಳಿವೆ. ಮೂರು, ಐದು ದಿನಗಳ ಮಳೆ ನಿರೀಕ್ಷೆ ಕುರಿತಂತೆಯೂ ಮಾಹಿತಿ ತಿಳಿಯಬಹುದಾಗಿದೆ. ಮಳೆ ಮಾಹಿತಿ ಅರಿತು, ದೀರ್ಘಾವಧಿ, ಅಲ್ಪಾವಧಿ ಬೆಳೆಗಳ ಪ್ಲಾನ್ ಮಾಡಿಕೊಳ್ಳಲು ಸಾಧ್ಯವಿದೆ. ಹಲವು ವರ್ಷಗಳ ಕಾಲ ತೀವ್ರ ಬರವನ್ನೇ ಅನುಭವಿಸಿರುವ ಜಿಲ್ಲೆಯ ರೈತರು ಬೆಳೆ ಪ್ಲಾನ್‌ಗೆ ಮುಂದಾಗುವುದು ಉತ್ತಮ ಎನ್ನುತ್ತಾರೆ ಡಾ.ಬಿ.ಮಂಜುನಾಥ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts