More

    ನಾಪತ್ತೆಯಾಗಿದ್ದ ಸೋಂಕಿತ ರಾಣೆಬೆನ್ನೂರಲ್ಲಿ ಪತ್ತೆ

    ರಾಣೆಬೆನ್ನೂರ: ಕರೊನಾ ಸೋಂಕು ಇರುವುದು ದೃಢಪಟ್ಟ ಕೂಡಲೇ ನಾಪತ್ತೆಯಾಗಿದ್ದ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಸೋಂಕಿತ ವ್ಯಕ್ತಿ ಸೋಮವಾರ ರಾಣೆಬೆನ್ನೂರಲ್ಲಿ ಪತ್ತೆಯಾಗಿದ್ದಾನೆ.

    29 ವರ್ಷದ ಪುರಷನಿಗೆ ಜು. 5ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಜಿಲ್ಲಾಸ್ಪತ್ರೆ ಸಿಬ್ಬಂದಿ ಆತನನ್ನು ಕರೆತರಲು ಮನೆ ಬಳಿ ಹೋಗುತ್ತಿದ್ದಂತೆ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಸೋಮವಾರ ಬೆಳಗ್ಗೆ ಆತ ರಾಣೆಬೆನ್ನೂರ ನಗರದಲ್ಲಿ ಓಡಾಡುತ್ತಿರುವುದನ್ನು ನೋಡಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶಹರ ಠಾಣೆ ಪೊಲೀಸರು ಆತನನ್ನು ನಗರದ ಹಲಗೇರಿ ಕ್ರಾಸ್ ಬಳಿ ಪತ್ತೆ ಮಾಡಿ, ರಟ್ಟಿಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದೂರದಿಂದಲೇ ಮಾತನಾಡಿಸಿದಾಗ, ತನಗೆ ಕರೊನಾ ಪಾಸಿಟಿವ್ ಬಂದಿರುವ ಬಗ್ಗೆ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ನಂತರ ಅಲ್ಲಿಂದ ಪೊಲೀಸರು ಆತನನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿಂದ ಆಂಬುಲೆನ್ಸ್​ನಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

    ಪರ್ವತಸಿದ್ಗೇರಿಯಿಂದ ತಪ್ಪಿಸಿಕೊಂಡ ಸೋಂಕಿತ ರಟ್ಟಿಹಳ್ಳಿಗೆ ಬಂದು ಸಾರಿಗೆ ಸಂಸ್ಥೆ ಬಸ್ ಹತ್ತಿ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮಕ್ಕೆ ಬಂದಿದ್ದಾನೆ. ಗ್ರಾಮದ ಹೋಟೆಲ್​ವೊಂದರಲ್ಲಿ ಚಹಾ ಕುಡಿದು ರಾತ್ರಿ ಕಳೆದಿದ್ದಾನೆ. ಬೆಳಗ್ಗೆ ಮತ್ತೆ ಸಾರಿಗೆ ಸಂಸ್ಥೆ ಬಸ್ ಹತ್ತಿ ರಾಣೆಬೆನ್ನೂರಿಗೆ ಬಂದಿದ್ದಾನೆ. ಹೀಗಾಗಿ ಸಾರಿಗೆ ಸಂಸ್ಥೆ ಬಸ್, ಹಲಗೇರಿ ಗ್ರಾಮ ಹಾಗೂ ನಗರದಲ್ಲಿ ಓಡಾಡಿದ್ದರಿಂದ ಪ್ರಯಾಣಿಕರಿಗೆ ಹಾಗೂ ನಗರದ ಜನತೆಗೆ ಢವ ಢವ ಶುರುವಾಗಿದೆ. ಪೊಲೀಸರು ವೈದ್ಯರ ಮೂಲಕ ಆತ ಓಡಾಡಿದ ಸ್ಥಳಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಹುಚ್ಚಾಟ ಮೆರೆದಿದ್ದಕ್ಕೆ ಶಿಕ್ಷೆಯಾಗಲಿ: ಸೋಂಕಿತ ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಬಂದಿದ್ದ. ಜು. 2ರಂದು ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಜು. 5ರಂದು ಪಾಸಿಟಿವ್ ಬಂದಿದೆ. ಸರ್ಕಾರ ಕರೊನಾ ನಿಯಂತ್ರಿಸಲು ಹರಸಾಹಸಪಡುತ್ತಿದೆ. ಆದರೆ, ಈತ ಸೋಂಕು ಇರುವುದು ದೃಢಪಟ್ಟಿದ್ದು ತಿಳಿದರೂ ಸಾರ್ವಜನಿಕರ ನಡುವೆ ಓಡಾಡಿ ಹುಚ್ಚಾಟ ಮೆರೆದಿದ್ದಾನೆ. ಇಂಥವನಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಮೂರು ತಾಸು ತಡವಾಗಿ ಬಂದ ಆಂಬುಲೆನ್ಸ್

    ಪೊಲೀಸರು ಮಧ್ಯಾಹ್ನ 2 ಗಂಟೆಗೆ ಸೋಂಕಿತನನ್ನು ಹಿಡಿದು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬಂದಿದ್ದು ಮಾತ್ರ ಸಂಜೆ 5 ಗಂಟೆಗೆ. ಅಷ್ಟರಲ್ಲಿ ಸೋಂಕಿತ ಆಸ್ಪತ್ರೆಯ ಮುಂಭಾಗ ಕಟ್ಟೆ, ಅಕ್ಕಪಕ್ಕದ ಸುತ್ತಾಡ ತೊಡಗಿದ್ದ. ಪೊಲೀಸರು ಬೈಯ್ದ ನಂತರ ಒಂದೆಡೆ ಕುಳಿತುಕೊಂಡಿದ್ದ. ಆದರೆ, ಸೋಂಕಿತನನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಾದ ಆಂಬುಲೆನ್ಸ್ ತಡವಾಗಿ ಬಂದಿದ್ದು ವಿಪರ್ಯಾಸವೇ ಸರಿ. ಹೀಗಾಗಿ ಪೊಲೀಸರು ಆತನನ್ನು ಕಾಯುತ್ತ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts