More

    ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಎಸ್ಪಿ ಡಾ. ಸಂಜೀವ

    ಬೆಳಗಾವಿ: ಜಿಲ್ಲೆಯಲ್ಲಿ ಕಾನೂನು ಸುವವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಆರಂಭಿಸಿರುವ ಫೋನ್‌ಇನ್ ಕಾರ್ಯಕ್ರಮ ನಾಗರಿಕ ಸ್ನೇಹಿಯಾಗುತ್ತಿದೆ.
    ಶನಿವಾರ ಆಯೋಜಿಸಿದ್ದ ಪೋನ್ ಇನ್‌ನಲ್ಲಿ ಎಸ್ಪಿ ಡಾ. ಸಂಜೀವ ಪಾಟೀಲ ಅವರು ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ಹಲವು ಜನರ ದೂರು ಆಲಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆದ ಫೋನ್ ಇನ್‌ನಲ್ಲಿ ಒಟ್ಟು 53 ಕರೆಗಳನ್ನು ಸ್ವೀಕರಿಸಿ, ನಾಗರಿಕರ ದೂರುಗಳಿಗೆ ತಕ್ಷಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

    ಅಕ್ರಮ ಮದ್ಯ ಮಾರಾಟ, ಕೌಟುಂಬಿಕ ಕಲಹ, ಅರ್ಜಿ ವಿಲೇವಾರಿಯಲ್ಲಿನ ವಿಳಂಬ, ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಾರಾಟ, ಅಕ್ರಮ ಮರಳು ಸಾಗಣೆ, ಆಸ್ತಿ ವಿವಾದ, ಮಟ್ಕಾ-ಜೂಜು ದಂಧೆ, ಕಾರ್ಮಿಕರಿಗೆ ಸರಿಯಾದ ವೇತನ ಪಾವತಿಸದ ಬಗ್ಗೆ, ಶಬ್ದ ಮಾಲಿನ್ಯ ತಡೆಗಟ್ಟುವುದು, ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದು, ಯೂಟ್ಯೂಬ್ ಪತ್ರಕರ್ತರ ಹಾವಳಿ ತಡೆಯುವುದು, ಆಟೋಗಳಿಗೆ ಮೀಟರ್ ಅಳವಡಿಸುವುದು ಸೇರಿ ಹಲವಾರು ಕರೆಗಳು ಬಂದವು. ಎಲ್ಲ ಕರೆಗಳನ್ನು ಆಲಿಸಿದರು. ಕೆಲ ದೂರುಗಳಿಗೆ 24 ಗಂಟೆಗಳ ಅವಧಿಯ ಗಡುವಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೆ, ಕೆಲವು ದೂರುಗಳಿಗೆ 48 ಗಂಟೆ ಹಾಗೂ ಒಂದು ವಾರದಲ್ಲಿ ಕ್ರಮ ಕೈಗೊಂಡು, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಎಸ್ಪಿ ಅವರು ತಿಳಿಸಿದರು.

    ಎಸ್ಪಿ ಕಚೇರಿ ವ್ಯಾಪ್ತಿಗೆ ಬಾರದ ಕೆಲವು ಕರೆಗಳನ್ನು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಮನದಟ್ಟು ಮಾಡುವುದಾಗಿ ಹೇಳಿದರು. ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಹೆಚ್ಚಿನ ಕರೆಗಳು ಬಂದವು. ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳಬಟ್ಟಿ ಮಾಡಲಾಗುತ್ತಿದೆ. ಇದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇಲ್ಲದೆ ವಿದ್ಯುತ್ ಕಂಬಗಳ ದುರಸ್ತಿ, ಸಂಚಾರ ದಟ್ಟನೆ, ಬ್ಯಾರಿಕೇಡ್ ಅಳವಡಿಕೆ, ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯದ ಕೊರತೆ ಬಗ್ಗೆ ಕರೆಗಳು ಬಂದವು. ಈ ಕರೆಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಎಸ್ಪಿ ಅವರು ತಿಳಿಸಿದರು.

    ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವೇಣುಗೋಪಾಲ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ನಾಗನಗೌಡ ಕಟ್ಟಿಮನಿಗೌಡ್ರ, ಬಾಳಪ್ಪ ತಳವಾರ, ರಮೇಶ ಇದ್ದರು.

    ನಿಲ್ಲದ ಅಕ್ರಮ ಮದ್ಯ ಮಾರಾಟ

    ಬೆಳಗಾವಿ ಜಿಲ್ಲೆಯ ಹಿರೇಬೂದನೂರ, ಬೋರಗಲ್ಲ, ಹೊನ್ನರಗಿ, ನಂದೇಶ್ವರ, ದುರದುಂಡಿ, ಕಾಡಾಪುರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಸುಳಿವು ನೀಡಿದರು. ಕಳೆದ ಫೋನ್ ಇನ್ ಕಾರ್ಯಕ್ರಮದಲ್ಲೂ ಗೋಕಾಕ ತಾಲೂಕಿನ ದುರದುಂಡಿ, ಬೈಲಹೊಂಗಲ ತಾಲೂಕಿನ ಮೂಗಬಸವ, ಬೆಳಗಾವಿ ತಾಲೂಕಿನ ಬಸ್ತವಾಡ, ಚಿಕ್ಕೋಡಿ ತಾಲೂಕಿನ ನಂದೇಶ್ವರ ಸೇರಿ ಇತರ ಅಕ್ರಮ ಮದ್ಯ ಮಾರಾಟ ತಡೆದು ಕ್ರಮ ಕೈಗೊಳ್ಳುವಂತೆ ನಾಗರಿಕರು ಕರೆ ಮಾಡಿದ್ದರು. ಕೆಲವರು ಪುನಃ ಕರೆ ಮಾಡಿ ಅಕ್ರಮ ಮದ್ಯ ಮಾರಾಟ ಹಾವಳಿ ನಿಂತಿಲ್ಲ ಎಂದು ಅಲವತ್ತುಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಅಕ್ರಮ ಮದ್ಯ ಮಾರಾಟ ಮಾಡುತ್ತಾರೆಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈಗಾಗಲೇ 2-3 ಬಾರಿ ಎಚ್ಚರಿಕೆ ನೀಡಿದ ಮೇಲೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ. ಈಗಾಗಲೇ ಈ ಪ್ರಕ್ರಿಯೆ ನಡೆದಿದೆ ಎಂದರು.

    ಯೂಟ್ಯೂಬ್ ಪತ್ರಕರ್ತರ ಹಾವಳಿ

    ಅಥಣಿ ತಾಲೂಕಿನಲ್ಲಿ ಯೂಟ್ಯೂಬ್ ಪತ್ರಕರ್ತರ ಹಾವಳಿ ಹೆಚ್ಚಿದೆ. ಪತ್ರಕರ್ತ ಎಂದು ಹೇಳಿಕೊಂಡು ಲೋಗೋ ಹಿಡಿದುಕೊಂಡು ಇಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದು, ಹಣ ಕೊಡುವಂತೆ ಪೀಡಿಸುತ್ತಿದ್ದಾರೆೆ. ಅವನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವ್ಯಕ್ತಿಯೋರ್ವ ದೂರಿದರು. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts