More

    ನಾಗರಿಕರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಿ – ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ

    ಬೆಳಗಾವಿ: ದಂಡು ಮಂಡಳಿ ಪ್ರದೇಶ (ಕ್ಯಾಂಟೋನ್ಮೆಂಟ್​) ಸೇರಿದಂತೆ ನಗರದ ಯಾವುದೇ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ವಿದ್ಯುತ್​ ವ್ಯತ್ಯಯ ಸೇರಿದಂತೆ ಯಾವುದೇ ಸಮಸ್ಯೆಗಳು ಕಂಡುಬಂದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಸೂಚಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾನಗರ ಪಾಲಿಕೆ, ದಂಡು ಮಂಡಳಿ ಮತ್ತಿತರ ಇಲಾಖೆಗಳ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

    ನಗರದಲ್ಲಿ ಕುಡಿಯುವ ನೀರು ಪೂರೈಕೆ, ವಿದ್ಯುತ್​ ವ್ಯತ್ಯಯ, ಪಾರ್ಕಿಂಗ್​, ಕಾಮಗಾರಿಗಳ ವಿಳಂಬದಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

    ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ನಗರದಲ್ಲಿ ನಿರಂತರ ನೀರು (24*7) ಪೂರೈಕೆ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿದೆ ಎಂಬ ದೂರು ಬರುತ್ತಿವೆ. ಆದ್ದರಿಂದ, ಪಾಲಿಕೆ, ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ದಂಡು ಮಂಡಳಿಯ ಅಧಿಕಾರಿಗಳು ಮತ್ತು ಯೋಜನೆ ನಿರ್ವಹಿಸುತ್ತಿರುವ ಎಲ್​ ಆ್ಯಂಡ್​ ಟಿ ಕಂಪನಿಯವರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

    ಮಳೆ&ಗಾಳಿಯಿಂದ ಗಿಡಮರಗಳು ಬಿದ್ದು ವಿದ್ಯುತ್​ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಣ ಗಿಡಗಳನ್ನು ತೆರವುಗೊಳಿಸಬೇಕು. ಹೆಸ್ಕಾಂ ಅಧಿಕಾರಿಗಳು ವಿದ್ಯುತ್​ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಡಾ.ಪಾಟೀಲ ಸಲಹೆ ನೀಡಿದರು.

    ದಂಡು ಮಂಡಳಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆನಂದ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸೇರಿದಂತೆ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ದಂಡು ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts