More

    ನಾಗನೂರ ಕೆರೆ ಕಲುಷಿತ

    ಶಿಗ್ಗಾಂವಿ: 199 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿರುವ ನಾಗನೂರ ಕೆರೆ ಪಟ್ಟಣದ ಜನತೆಗೆ ಜೀವಜಲ ಒದಗಿಸುವ ಪ್ರಮುಖ ಮೂಲ. ಇಲ್ಲಿಂದಲೇ ನೀರನ್ನು ಶುದ್ಧೀಕರಿಸಿ ಪಟ್ಟಣವಾಸಿಗಳಿಗೆ ಸರಬರಾಜು ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ಕೆರೆಯನ್ನು ಕಿಡಿಗೇಡಿಗಳು ಕಲುಷಿತಗೊಳಿಸುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆಯನ್ನು ಕಂಡೂ ಕಾಣದಂತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾತ್ರಿಯಾಯಿತೆಂದರೆ ಸಾಕು ಕೆರೆ ದಂಡೆ ಹಾಗೂ ಸುತ್ತಮುತ್ತಲಲ್ಲಿ ಕುಡುಕರ ಆಟಾಟೋಪ ಮಿತಿಮೀರುತ್ತದೆ. ಮದ್ಯವ್ಯಸನಿಗಳು ಮದ್ಯದ ಪ್ಯಾಕೆಟ್, ಬಾಟಲಿಗಳು, ಕುರುಕಲು ತಿಂಡಿಗಳ ಪ್ಯಾಕೆಟ್, ಬೀಡಿ, ಸಿಗರೇಟ್​ಗಳ ಪ್ಯಾಕೆಟ್​ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ.

    ಕೆರೆಯ ನೀರನ್ನು ಕುಡಿಯಲು ಬಳಸುತ್ತಾರೆ ಎಂಬುದು ಗೊತ್ತಿದ್ದರೂ ಕೆರೆ ದಂಡೆಯ ಮೇಲೆ ಹುಟ್ಟು ಹಬ್ಬದ ಪಾರ್ಟಿ, ಮಾಂಸದೂಟ ಮಾಡುತ್ತಾರೆ. ತ್ಯಾಜ್ಯವನ್ನೆಲ್ಲ ಅಲ್ಲಿಯೇ ಬಿಸಾಕಿ ಹೋಗುತ್ತಾರೆ. ಸ್ವಚ್ಛತೆ ಎಂಬುದು ಗಗನಕುಸುಮವಾಗಿದೆ. ರಾತ್ರಿಯಾದರೆ ಕುಡುಕರ ಅಟ್ಟಹಾಸ, ಬೆಳಗ್ಗೆಯಾದರೆ ಮಹಿಳೆಯರು ತಮ್ಮ ಬಟ್ಟೆ, ಹಾಸಿಗೆ ತೊಳೆಯಲು ಕೆರೆಗೆ ಬರುತ್ತಾರೆ. ಇದರಿಂದಲೂ ಕೆರೆ ನೀರು ಮಲೀನವಾಗುತ್ತಿದೆ. ಪುರಸಭೆ ಅಧಿಕಾರಿಗಳು ಕೂಡಲೆ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರತಿದಿನವೂ ಬೆಳಗ್ಗಿನ ಸಮಯದಲ್ಲಿ ಕೆರೆ ಸುತ್ತ ನೂರಾರು ವಾಯು ವಿಹಾರಿಗಳು ಆಗಮಿಸುತ್ತಾರೆ. ಆದರೆ, ಇಲ್ಲಿಯ ಹದಗೆಟ್ಟ ವಾತಾವರಣ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೆ, ಕೆರೆ ಪರಿಸರ ಸ್ವಚ್ಛತೆ ಹಾಗೂ ಅಂದಗೆಡುತ್ತಿರುವುದನ್ನು ತಪ್ಪಿಸಬೇಕು. ಕುಡುಕರ ಆಟಾಟೋಪ ನಿಯಂತ್ರಿಸಲು ರಾತ್ರಿ ವೇಳೆ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

    ನೀರು ಹರಿಸಿದ್ದ ಬೊಮ್ಮಾಯಿ

    ಬರಗಾಲದಲ್ಲೂ ಈ ಕೆರೆ ಸರ್ವರಿಗೂ ನೀರೊದಗಿಸಿದ ಜೀವದಾಯಿಯಾಗಿದೆ. ಇಂಥ ಐತಿಹಾಸಿಕ ಕೆರೆಗೆ ವರದಾ ನದಿಯಿಂದ ಪೈಪ್​ಲೈನ್ ಮೂಲಕ ನೀರು ಹರಿಸಲು 232 ಕೋಟಿ ರೂಪಾಯಿಗಳ ಅನುದಾನ ತಂದ ಕೀರ್ತಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಅವರು ಈ ಭಾಗದ ರೈತರು ಹಾಗೂ ಜನರಿಗೆ ನೀರಿನ ದಾಹ ಇಂಗಿಸಲು ಕ್ರಮ ಕೈಗೊಂಡು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಅಂಥದ್ದರಲ್ಲಿ ಇದೀಗ ಮದ್ಯವ್ಯಸನಿಗಳ ಕುಚೇಷ್ಟೆಯಿಂದ ಕೆರೆ ಸುತ್ತಲಿನ ಪರಿಸರ ಹಾಗೂ ಅಂದವನ್ನು ಹಾಳು ಮಾಡುತ್ತಿರುವುದು ವಿಪರ್ಯಾಸ.

    ಕೆರೆ ರಕ್ಷಣೆ ನಮ್ಮ ಹೊಣೆ. ಈ ಕುರಿತು ಮಾಹಿತಿ ಬಂದಿದೆ. ಪೊಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ. ರಾತ್ರಿ ವೇಳೆ ಬಿಟ್ ವ್ಯವಸ್ಥೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಲ್ಲದೆ, ಕೆರೆಯ ಅಂದ, ಪರಿಸರ ಹಾಗೂ ನೀರನ್ನು ಕಲುಷಿತಗೊಳಿಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

    | ಮಲ್ಲಯ್ಯ ಹಿರೇಮಠ

    ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts