More

    ಮಳೆಗಾಲದಲ್ಲೂ ನೀರು ಪೂರೈಕೆ ವ್ಯತ್ಯಯ

    ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಕುಡಿಯುವ ನೀರಿನ ಮೂಲಗಳಲ್ಲಿ ಒಂದಾದ ಮಾರಿಗದ್ದೆ ಹೊಳೆಯ ಜಾಕ್​ವೆಲ್ ಬಳಿ ಹೂಳು ತುಂಬಿರುವ ಪರಿಣಾಮ ನಗರಸಭೆಯಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ನಗರದ ಶೇಕಡಾ 70ರಷ್ಟು ಸಾರ್ವಜನಿಕರಿಗೆ ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಕೊರತೆ ಕಾಡತೊಡಗಿದೆ.

    ನಗರ ಪ್ರದೇಶಕ್ಕೆ ಕುಡಿಯುವ ನೀರಿನ ಪ್ರಮುಖ ಆಕರವಾದ ಮಾರಿಗದ್ದೆ ಹೊಳೆಯ ಜಲಾನಯನ ಪ್ರದೇಶದಲ್ಲಿ ಅಬ್ಬರದ ಮಳೆಯಾದ ಕಾರಣ ಜಾಕ್​ವೆಲ್ ಬಳಿ ಹೂಳು ತುಂಬಿದೆ. ಇದರಿಂದ ನೀರೆತ್ತಲು ತೊಡಕಾಗುತ್ತಿದೆ. ಒಂದೊಮ್ಮೆ ನೀರೆತ್ತಿದರೂ ಪಂಪ್​ಸೆಟ್​ಗೆ ರಾಡಿ ನೀರು ಬರುವ ಜತೆ ಇಡೀ ಪೈಪ್​ಲೈನ್ ರಾಡಿಯಾಗುವ ಸಾಧ್ಯತೆಯಿದೆ. ಹೀಗಾಗಿ, ಸದ್ಯ ನೀರೆತ್ತುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನಗರದ ಶೇ. 70 ಭಾಗಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಮೊದಲಿನಂತೆ ನಿತ್ಯ ಪೂರೈಸುವ ಬದಲು ಎರಡ್ಮೂರು ದಿನಗಳಿಗೊಮ್ಮೆ ನೀರು ಒದಗಿಸಲಾಗುತ್ತಿದೆ. ನಗರದ ಶೇ. 30ರಷ್ಟು ಭಾಗಕ್ಕೆ ಸೀಮಿತವಾಗಿದ್ದ ಕೆಂಗ್ರೆ ಹೊಳೆ ಜಾಕ್​ವೆಲ್ ನೀರು ಇದೀಗ ಇಡೀ ನಗರ ಪ್ರದೇಶಕ್ಕೆ ಹಂಚಿಕೆಯಾಗಬೇಕಿದೆ. ಹೀಗಾಗಿ, ಕೆಂಗ್ರೆ ಜಾಕ್​ವೆಲ್​ಗೆ ಹೊರೆಯಾಗಿ ಪರಿಣಮಿಸಿದೆ.

    ನಿರ್ವಹಣೆಯ ಕೊರತೆ: ಬೇಸಿಗೆ ಸಂದರ್ಭದಲ್ಲಿ ಜಾಕ್​ವೆಲ್ ಬಳಿ ನೀರಿನ ಪ್ರಮಾಣ ಇಳಿದಾಗ ಹೂಳೆತ್ತದ ನಗರಾಡಳಿತ ಮಳೆಗಾಲದ ಸಂದರ್ಭದಲ್ಲಿ ಹೊಳೆಯೊಳಗಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಳೆಯಲ್ಲಿ ನೀರಿರುವ ವೇಳೆ ಹೂಳು ತೆಗೆಯುವ ಕ್ರಮ ಅವೈಜ್ಞಾನಿಕ ಹಾಗೂ ಸರ್ಕಾರದ ಹಣದ ಪೋಲಾಗಲು ಕಾರಣವಾಗುತ್ತಿದೆ. ಬೇಸಿಗೆಯಲ್ಲಿ ಒಡ್ಡು ನಿರ್ವಿುಸುವ ಸಂದರ್ಭದಲ್ಲಿಯೇ ಹೂಳು ತೆಗೆಯುವ ಕ್ರಮವಾದರೆ ಮಳೆಗಾಲದ ವೇಳೆ ಇಂತಹ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

    ತಾಲೂಕಿನಾದ್ಯಂತ ಉತ್ತಮ ಮಳೆಯಾದರೂ ಶಿರಸಿ ನಗರ ವ್ಯಾಪ್ತಿಯಲ್ಲಿ ಕುಡಿಯಲು ನೀರಿನ ಸಮಸ್ಯೆಯಾಗುತ್ತಿದೆ. ಮಾರಿಗದ್ದೆ ಜಾಕ್​ವೆಲ್ ಬಳಿ ಗುಂಡಿಯ ನಿರ್ವಹಣೆ ಸರಿಯಾಗಿ ಆಗದ ಕಾರಣ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಮೂರ್ನಾಲ್ಕು ದಿನಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಸಮಜಾಯಿಷಿ ನೀಡುತ್ತಾರೆ ವಿನಾ ನೀರು ಪೂರೈಕೆಯತ್ತ ಆದ್ಯತೆ ನೀಡುತ್ತಿಲ್ಲ. ತಕ್ಷಣ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಕ್ರಮವಾಗಬೇಕು. | ಎಂ.ಎನ್.ನಾಯ್ಕ ಶಿರಸಿ ನಾಗರಿಕ

    ನಗರಕ್ಕೆ ಕುಡಿಯುವ ನೀರು ಸೌಲಭ್ಯ ಒದಗಿಸುವ ಮಾರಿಗದ್ದೆ ಜಾಕ್​ವೆಲ್ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ ಹೂಳು ತುಂಬಿದೆ. ಅದನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದ್ದು, 10 ದಿನ ಬೇಕಾಗುವ ಸಾಧ್ಯತೆಯಿದೆ. ಕಾಮಗಾರಿ ಮುಗಿಯುವವರೆಗೆ ನಗರ ವ್ಯಾಪ್ತಿಯಲ್ಲಿ ಮಾರಿಗದ್ದೆಯಿಂದ ನೀರು ಸರಬರಾಜು ಮಾಡುವ ಪ್ರದೇಶದ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕಷ್ಟ. ಸಾರ್ವಜನಿಕರು ಈ ಅಡಚಣೆಗೆ ಸಹಕರಿಸಬೇಕು. | ರಮೇಶ ನಾಯಕ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts