More

    ನಷ್ಟ ಕಡಿಮೆ ಮಾಡಿ ಲಾಭದತ್ತ ಚಿತ್ತ ಹರಿಸಿ

    ಹಾವೇರಿ: ಲಾಕ್​ಡೌನ್ ಸಡಿಲಿಕೆ ನಂತರ ತ್ರೖೆಮಾಸಿಕ ಯೋಜನೆಗಳನ್ನು ರೂಪಿಸಿ, ಸಾರಿಗೆ ನಷ್ಟವನ್ನು ಸರಿದೂಗಿಸಿಕೊಂಡು ಲಾಭ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಮೂರು ತಿಂಗಳಿಗೊಮ್ಮೆ ಕ್ರಿಯಾ ಯೋಜನೆಗಳನ್ನು ಸಿದ್ಧ ಮಾಡಿಕೊಳ್ಳಬೇಕು. ಉತ್ತಮ ಸೇವೆ ಜೊತೆಗೆ ಸಾರಿಗೆ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಜಿಲ್ಲೆಯಲ್ಲಿ ಯಾವ ಯಾವ ಮಾರ್ಗದಲ್ಲಿ ಸಾರಿಗೆ ಬಸ್​ಗಳು ಓಡಾಡುತ್ತಿವೆ. ಅದರಲ್ಲಿ ಯಾವ ರೂಟ್​ಗಳು ಲಾಭದಾಯಕ, ಯಾವ ಮಾರ್ಗಗಳಲ್ಲಿ ನಷ್ಟ ಉಂಟಾಗುತ್ತಿದೆ, ಯಾವ ಮಾರ್ಗದಲ್ಲಿ ಹೆಚ್ಚುವರಿ ಬಸ್​ಗಳು ಓಡಾಡುತ್ತವೆ ಎಂಬುದನ್ನು ವಿಭಾಗವಾರು ಅಧಿಕಾರಿಗಳೊಂದಿಗೆ ರ್ಚಚಿಸಿ ಈ ಮಾರ್ಗಗಳಲ್ಲಿ ಲಾಭ ತರುವ ನಿಟ್ಟಿನಲ್ಲಿ ಯೋಜನೆ ತಯಾರಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪ್ಲಾನ್ ಮಾಡಿ ಸ್ಥಳೀಯ ಅಧಿಕಾರಿ, ಜನಪ್ರತಿನಿಧಿಗಳೊಂದಿಗೆ ರ್ಚಚಿಸಿ ಕ್ರಮ ವಹಿಸಿ ಎಂದರು.

    ನಷ್ಟದಲ್ಲಿರುವ ಮಾರ್ಗಗಳು ಯಾವ ಕಾರಣಕ್ಕೆ ಆದಾಯ ಬರುವುದಿಲ್ಲ ಎಂಬುದನ್ನು ತಿಳಿದು ನೀವೇ ಯೋಜನೆ ರೂಪಿಸಿ ಲಾಭ ತರುವ ಮಾರ್ಗಗಳಾಗಿ ಪರಿವರ್ತಿಸಬೇಕು. ನಿರ್ವಹಣೆ, ಸವಕಳಿ ವೆಚ್ಚವನ್ನು ಕಡಿಮೆ ಮಾಡಿ ಆದಾಯ ಸೋರಿಕೆ ತಡೆಯಬೇಕು. ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ವಾಹನ ಓಡಿಸುವ ಕೆಲಸ ಮಾಡಿ ಎಂದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜಿಲ್ಲೆಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನಿಷ್ಠ 100ರಿಂದ 150 ಹೊಸ ಬಸ್​ಗಳನ್ನು ಏಕಕಾಲದಲ್ಲಿ ನೀಡಬೇಕು. ಜಿಲ್ಲೆಯಲ್ಲಿ ಅವಶ್ಯವಿರುವ ಬಸ್ ನಿಲ್ದಾಣ, ಸಾರಿಗೆ ಡಿಪೋಗಳ ಉನ್ನತೀಕರಣ ಕಾಮಗಾರಿ, ನವೀಕರಣಗೊಳಿಸಬೇಕು’ ಎಂದರು.

    ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಮಾತನಾಡಿ, ತಮ್ಮ ಕ್ಷೇತ್ರದ ರಸ್ತೆ ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಸಲ್ಲಿಸಿದರು.

    ರಾಣೆಬೆನ್ನೂರ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಬೇಕು. ಸವಣೂರ, ಗುತ್ತಲ ಬಸ್ ನಿಲ್ದಾಣ ನವೀಕರಣ, ಹಾವೇರಿ ಬಸ್ ನಿಲ್ದಾಣದ ವಿಸ್ತರಣೆ ಹಾಗೂ ಕದರಮಂಡಲಗಿಗೆ ಹೊಸ ಬಸ್ ನಿಲ್ದಾಣ, ಸವಣೂರ ಹೊಸ ಬಸ್ ಡಿಪೋ, ಹಾವೇರಿ ಕೇಂದ್ರೀಯ ವಿದ್ಯಾಲಯ ಸೇರಿ ಜಿಲ್ಲೆಯ ಸಾರಿಗೆ ಸಂಪರ್ಕವಿಲ್ಲದ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಲಾಕ್​ಡೌನ್ ಮುಗಿಯುವವರೆಗೂ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಟೋಲ್ ಫೀ ಸಂಗ್ರಹಿಸಬಾರದು ಎಂದು ಸಾರಿಗೆ ಸಚಿವರ ಗಮನಕ್ಕೆ ತಂದರು.

    ಸಚಿವ ಸವದಿ ಮಾತನಾಡಿ, ‘ಆಯಾ ಕ್ಷೇತ್ರದ ಶಾಸಕರ ಬೇಡಿಕೆ ಹಾಗೂ ಸಚಿವರೊಂದಿಗೆ ರ್ಚಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಹೊಸ ಕಟ್ಟಡ ಮತ್ತು ನವೀಕರಣಕ್ಕೆ ಕ್ರಿಯಾಯೋಜನೆ ರೂಪಿಸಿ. ಈ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

    ಜಿಲ್ಲಾ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಕ ವಿ.ಎಸ್. ಜಗದೀಶ ಮಾತನಾಡಿ, ‘ಜಿಲ್ಲೆಯಲ್ಲಿ 544 ಬಸ್​ಗಳಿವೆ. ನಿತ್ಯ 503 ರೂಟ್​ಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತದೆ. ವಾಹನಗಳು ಪ್ರತಿದಿನ 1.82 ಲಕ್ಷ ಕಿ.ಮೀ. ಕ್ರಮಿಸುತ್ತವೆ. ನಿತ್ಯ 52.30 ಲಕ್ಷ ರೂ. ಆದಾಯ ಬರುತ್ತದೆ. 2,312 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2019-20ನೇ ಸಾಲಿನಲ್ಲಿ 52 ಹೊಸ ಬಸ್​ಗಳು ಬಂದಿವೆ. 39 ಹಳೆಯ ಬಸ್​ಗಳನ್ನು ತೆಗೆದುಹಾಕಲಾಗಿದೆ. ಲಾಕ್​ಡೌನ್ ಅವಧಿಯಲ್ಲಿ ಮೇ 4ರಿಂದ 18ರವರೆಗೆ ಬಸ್ ಸಂಚಾರ ಆರಂಭಿಸಿ 61 ರೂಟ್​ಗಳನ್ನು ಮಾತ್ರ ಕಾರ್ಯಾಚರಣೆ ಮಾಡಲಾಗಿದೆ. ಈ ಅವಧಿಯಲ್ಲಿ 5.91 ಲಕ್ಷ ರೂ. ಗಳಿಕೆಯಾಗಿದೆ. ಪರಸ್ಪರ ಅಂತರ ಕಾಯ್ದುಕೊಂಡು ಬಸ್ ಸಂಚಾರ ಆರಂಭಿಸಿದ ಕಾರಣ ಪ್ರತಿ ಕಿಮೀ 20.62 ರೂ. ಬಂದಿದೆ. ವಾಸ್ತವದಲ್ಲಿ ಪ್ರತಿ ಕಿಮೀಗೆ 46 ರೂ. ವೆಚ್ಚವಾಗುತ್ತದೆ. ಈ ಅವಧಿಯಲ್ಲಿ ಪ್ರತಿ ಕಿಮೀಗೆ 35.28 ರೂ. ನಷ್ಟ ಉಂಟಾಗಿದೆ. ಈವರೆಗೆ 41.15 ಕೋಟಿ ರೂ. ಸಾರಿಗೆ ಆದಾಯ ಗಳಿಕೆ ಕಡಿಮೆಯಾಗಿದೆ’ ಎಂದರು.

    ಪರವಾನಗಿ ಇಲ್ಲದ ವಾಹನಗಳ ಲೈಸನ್ಸ್ ರದ್ದು

    ಸಾರಿಗೆ ಬಸ್ ನಿಲ್ದಾಣದ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಇಳಿಸುವುದು ಹಾಗೂ ಸಾಮರ್ಥ್ಯಕ್ಕೆ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವುದು, ಪರವಾನಗಿ ಪಡೆಯದೆ ಬಸ್, ಟ್ರಾ್ಯಕ್ಸ್, ಟೆಂಪೊ ಟ್ರಾವೆಲ್ಸ್ ಓಡಾಟಕ್ಕೆ ಕಡಿವಾಣ ಹಾಕಬೇಕು. ಇಂತಹ ವಾಹನಗಳ ಪರವಾನಗಿ ರದ್ದು ಮಾಡಿ ಮೊಕದ್ದಮೆ ದಾಖಲಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಾಯವ್ಯ ಸಾರಿಗೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಇವುಗಳಿಗೆ ಕಡಿವಾಣ ಹಾಕಿದರೆ ನಷ್ಟ ಕಡಿಮೆ ಮಾಡಬಹುದು ಎಂದರು.

    ಸಭೆಯಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಬಿ. ಪಾಟೀಲ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts