More

    ನವೆಂಬರ್ ಬಳಿಕ ಮಂಗನ ಕಾಯಿಲೆ ಸಾಧ್ಯತೆ: ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ಆರೇಳು ದಶಕಗಳಿಂದ ಮಲೆನಾಡನ್ನು ಕಾಡುತ್ತಿರುವ ಮಂಗನ ಕಾಯಿಲೆ ಸಾಧಾರಣವಾಗಿ ನವೆಂಬರ್ ತಿಂಗಳ ನಂತರದಲ್ಲಿ ತಾಲೂಕಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸೋಂಕು ಕಾಣಿಸಿಕೊಂಡಲ್ಲಿ ರೋಗ ಉಲ್ಬಣಗೊಳ್ಳುವವರೆಗೆ ಕಾಯದೆ ಕೂಡಲೆ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಪಟ್ಟಣದ ಗುತ್ತಿಗೆದಾರ ದಿ. ಶೇಷಗಿರಿಯಪ್ಪ ಅವರ ಪತ್ನಿ ಅನುಸೂಯಾ ಅವರು ತಮ್ಮ ಪತಿಯ ನೆನಪಿಗಾಗಿ ಜಯಚಾಮರಾಜೇಂದ್ರ ಆಸ್ಪತ್ರೆ ಲ್ಯಾಬಿಗೆ ನೀಡಿದ 5 ಲಕ್ಷ ರೂ. ಮೌಲ್ಯದ ಆಧುನಿಕ ರಕ್ತ ತಪಾಸಣಾ ಯಂತ್ರವನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿ, ಕೆಎಫ್‌ಡಿ ಸೋಂಕಿನ ಚಿಕಿತ್ಸೆಗಾಗಿ ಬೇರೆಲ್ಲೂ ಹೋಗಬೇಕಾದ ಅಗತ್ಯವಿಲ್ಲ. ಮಂಗನ ಕಾಯಿಲೆ ಚಿಕಿತ್ಸೆ ಸಲುವಾಗಿ ವೈದ್ಯಕೀಯ ಹಾಗೂ ಸಿಬ್ಬಂದಿ ಸೇವೆ ಸೇರಿದಂತೆ 16 ಬೆಡ್‌ಗಳ ಸುಸಜ್ಜಿತವಾದ ವಾರ್ಡ್‌ನ್ನು ಜೆಸಿ ಆಸ್ಪತ್ರೆಯಲ್ಲಿ ಸಿದ್ಧಪಡಿಸಲಾಗಿದೆ. ಅಗತ್ಯವಿರುವ ಔಷಧ ಮತ್ತು ಉತ್ತಮವಾದ ವೈದ್ಯಕೀಯ ಹಾಗೂ ಸಿಬ್ಬಂದಿ ಸೇವೆ ಈ ಆಸ್ಪತ್ರೆಯಲ್ಲಿಯೇ ದೊರೆಯುತ್ತದೆ ಎಂದೂ ಹೇಳಿದರು.
    ಬಡರೋಗಿಗಳು ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಎಲ್ಲ ವೈದ್ಯಕೀಯ ಸವಲತ್ತುಗಳನ್ನು ಒಳಗೊಂಡಿರುವ ತೀರ್ಥಹಳ್ಳಿ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ ಬೆಳವಣಿಗೆಯಲ್ಲಿ ದಾನಿಗಳ ಪಾತ್ರವೂ ಸ್ಮರಣೀಯವಾಗಿದೆ. ದಾನಿಗಳು ನೀಡುವ ಕೊಡುಗೆಯ ಮೌಲ್ಯವನ್ನು ಅಳೆಯಲಾಗದು. ಕೊಡುಗೆಯ ಮೂಲಕ ದಾನಿಗಳು ಜನರ ಮನಸ್ಸಿನಲ್ಲಿ ಶಾಶ್ವತರಾಗಿರುತ್ತಾರೆ ಎಂದರು.
    ಜೆಸಿ ಆಸ್ಪತ್ರೆ ಸುಸಜ್ಜಿತ ಡಯಾಲಿಸಿಸ್ ಯಂತ್ರ, ಕಣ್ಣಿನ ಚಿಕಿತ್ಸಾ ಯಂತ್ರ ಹಾಗೂ ಶವಾಗಾರಕ್ಕೆ ಫ್ರೀಜರ್ ನೀಡಿರುವ ಡಾ ಜಿ.ಶಂಕರ್ ಕೊಡುಗೆಯನ್ನು ಸ್ಮರಿಸಿದ ಸಚಿವರು, ಹೃದಯ ಶ್ರೀಮಂತಿಕೆಯ ದಾನಿಗಳಿಂದಾಗಿಯೇ ಈ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆ ನೀಡುವುದು ಸಾಧ್ಯವಾಗಿದೆ. ಹೊಸದಾಗಿ ಆಕ್ಸಿಜನ್ ಪ್ಲಾಂಟ್ ಕೂಡ ಕಾರ್ಯಾರಂಭ ಮಾಡಿದೆ ಎಂದರು.
    ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಗಣೇಶ್ ಭಟ್, ತಾಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಮಧುಮೇಹ ಮತ್ತು ಬಿಪಿ ರೋಗಿಗಳಿದ್ದು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ದಿನವೊಂದಕ್ಕೆ ಸರಿಸುಮಾರು 30 ರಿಂದ 40 ರೋಗಿಗಳ ರಕ್ತ ತಪಾಸಣೆ ನಡೆಸಿ ತುರ್ತಾಗಿ ರಿಪೋರ್ಟ್ ಕೊಡಬೇಕಾಗುತ್ತದೆ. ದಾನಿಗಳು ನೀಡಿರುವ ಈ ರಕ್ತ ತಪಾಸಣೆಯ ಆಧುನಿಕವಾದ ಈ ಯಂತ್ರದಿಂದ ಹೆಚ್ಚು ಉಪಯುಕ್ತವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts