More

    ನವೆಂಬರ್ ಒಳಗೆ ಕೆಲಸ ಆರಂಭಿಸಿ

    ಧಾರವಾಡ: ಕರೊನಾ ಕಾರಣದಿಂದ ವಿಳಂಬವಾಗಿರುವ ವಿಶೇಷ ಘಟಕ ಯೋಜನೆ (ಎಸ್​ಸಿಪಿ) ಹಾಗೂ ಗಿರಿಜನ ಉಪ ಯೋಜನೆ (ಟಿಎಸ್​ಪಿ)ಯ ಎಲ್ಲ ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳನ್ನು ನವೆಂಬರ್​ದೊಳಗೆ ಪ್ರಾರಂಭಿಸಿ 2021ರ ಫೆಬ್ರವರಿಯೊಳಗೆ ಪೂರ್ಣಗೊಳಿಸಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2020-21ನೇ ಸಾಲಿನ ಆಗಸ್ಟ್ ಅಂತ್ಯದವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಎಸ್​ಸಿಪಿ, ಟಿಎಸ್​ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಸರ್ವಾಂಗೀಣ ವಿಕಾಸಕ್ಕೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ 105.74 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಆಗಸ್ಟ್ ಅಂತ್ಯದವರೆಗೆ 44.31 ಕೋಟಿ ರೂ. ಬಿಡುಗಡೆಯಾಗಿದೆ. 12.28 ಕೋಟಿ ರೂ. ಖರ್ಚು ಮಾಡಲಾಗಿದೆ. 40047 ಜನ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಿ ಶೇ.27.73 ರಷ್ಟು ಪ್ರಗತಿ ಸಾಧಿಸಲಾಗಿದೆ. ಟಿಎಸ್​ಪಿಯಡಿ ಪ್ರಸಕ್ತ ಸಾಲಿನಲ್ಲಿ 47.35 ಕೋಟಿ ರೂ. ಆರ್ಥಿಕ ಗುರಿ ಹಾಗೂ 46358 ಜನ ಫಲಾನುಭವಿಗಳ ಭೌತಿಕ ಗುರಿ ನಿಗದಿಪಡಿಸಲಾಗಿದೆ. ಆಗಸ್ಟ್ ಅಂತ್ಯದವರೆಗೆ 16.32 ಕೋಟಿ ರೂ. ಬಿಡುಗಡೆಯಾಗಿದ್ದು, 5.95 ಕೋಟಿ ರೂ. ಈವರೆಗೆ ಖರ್ಚು ಮಾಡಲಾಗಿದೆ. 23876 ಜನರಿಗೆ ಸೌಕರ್ಯಗಳನ್ನು ಒದಗಿಸಿ ಶೇ.36.47 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

    ಕರೊನಾ ಹಾವಳಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನ ವಿಳಂಬವಾಗಿದೆ. ಆದರೆ ನವೆಂಬರ್​ದೊಳಗೆ ಎಲ್ಲ ಇಲಾಖೆಗಳು ನಿಗದಿಪಡಿಸಿದ ಕಾಮಗಾರಿಗಳನ್ನು ಪ್ರಾರಂಭಿಸಿ, 2021ರ ಫೆಬ್ರವರಿ ಒಳಗೆ ಪೂರ್ಣವಾಗಬೇಕು. ಯೋಜನೆಗಳ ಕೆಲ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ವಾಸವಿಲ್ಲದ ಕಡೆ ಕೈಗೊಳ್ಳುತ್ತಿರುವುದಾಗಿ ದೂರು ಬರುತ್ತಿವೆ. ಅವುಗಳ ಕುರಿತು ಸಮಾಜ ಕಲ್ಯಾಣ ಜಂಟಿ ನಿರ್ದೇಶಕರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಖುದ್ದು ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

    ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಜಾಪುರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಎಸ್​ಸಿಪಿ ಹಾಗೂ ಟಿಎಸ್​ಪಿಯಡಿ ರೈತರಿಗೆ ಸಮರ್ಪಕ ಬೀಜ ವಿತರಣೆ ಮಾಡಲಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೃಷಿ ಯಂತ್ರೀಕರಣ ಚಟುವಟಿಕೆಗಳು ಹಿಂಗಾರು ಹಂಗಾಮಿನಲ್ಲಿ ನಡೆಯಲಿವೆ ಎಂದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ್ ಮುನವಳ್ಳಿ ಮಾತನಾಡಿ, ಎಸ್​ಸಿಪಿ ಯೋಜನೆಯಡಿ 4.33 ಕೋಟಿ ರೂ. ವೆಚ್ಚದಲ್ಲಿ 38 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಗುರಿ ಹೊಂದಲಾಗಿದೆ. ಈವರೆಗೆ 1.15 ಕೋಟಿ ರೂ. ಬಿಡುಗಡೆಯಾಗಿದ್ದು, 1.02 ಕೋಟಿ ರೂ. ವೆಚ್ಚದಲ್ಲಿ ನಡೆಯುವ 19 ಕಾಮಗಾರಿಗಳಿಗೆ 69 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು ಎಂದರು.

    ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ, ಪಂಚಾಯತ್​ರಾಜ್, ಸ್ವಚ್ಛ ಭಾರತ ಮಿಷನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ, ಕರ್ನಾಟಕ ವಿವಿ, ಕೃಷಿ ವಿವಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts