More

    ನಲುಗಿದ ಹಣ್ಣು, ತರಕಾರಿ ರೈತರು


    ವಾದಿರಾಜ ವ್ಯಾಸಮುದ್ರ ಕಲಬುರಗಿ: ಕರೊನಾ ವೈರಸ್ ಕರಿಛಾಯೆ ಹಣ್ಣು ಮತ್ತು ತರಕಾರಿ, ಹೂವು ಬೆಳೆಗಾರರನ್ನು ನಲುಗಿಸಿದೆ. ಲಾಕ್ಡೌನ್ನಿಂದ ವ್ಯಾಪಾರ ವಹಿವಾಟು ಬಹುತೇಕ ಸ್ತಬ್ಧವಾಗಿದ್ದು, ಹಣ್ಣು, ಹೂವು ಮತ್ತು ತರಕಾರಿಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದು ಅನ್ನದಾತರನ್ನು ಅತಂತ್ರಕ್ಕೆ ಸಿಲುಕಿಸಿದೆ.
    ಬೇಸಿಗೆಯಲ್ಲಿ ಆದಾಯ ತಂದುಕೊಡುವ ಹಣ್ಣು, ತರಕಾರಿಗಳಿಗೆ ಸಾಕಷ್ಟು ಬೇಡಿಕೆ ಇದ್ದುದ್ದರಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರು ಸಾಕಷ್ಟು ಹಣ ಹೂಡಿ ಮಾರ್ಚ , ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೈಗೆ ಬರುವಂತೆ ಕೃಷಿ ಮಾಡುತ್ತಾರೆ. ಆದರೀಗ ಕರೊನಾ ಕುತ್ತು ತಂದಿದೆ. ತರಕಾರಿ, ಹಣ್ಣು, ಹೂವು ಸಮೃದ್ಧ ಬಂದರೂ ರೈತರಿಗೆ ನೇರ ಆದಾಯ ಶೂನ್ಯವಾಗಿದೆ. ಹೀಗಾಗಿ ಆತ್ಮಹತ್ಯೆ ತುಳಿದಿದ್ದು, ಈಗಾಗಲೇ ಇಬ್ಬರು ಸಾವಿಗೆ ಶರಣಾಗಿದ್ದಾರೆ.
    ಹಣ್ಣು, ತರಕಾರಿ ಬೆಳೆದವರು ನೇರವಾಗಿ ಮಾರಲು ಮಾರುಕಟ್ಟೆಯಿಲ್ಲ. ಇನ್ನು ಇರುವ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳದ್ದೇ ದರ್ಬಾರ್. ಕಡಿಮೆ ದರದಲ್ಲಿ ಹೆಚ್ಚು ವಸ್ತು ಖರೀದಿಸುವ ಮಧ್ಯವರ್ತಿಗಳು ಒಂದಕ್ಕೆ ಮೂರರಷ್ಟು ಲಾಭ ಪಡೆಯುತ್ತಿದ್ದಾರೆ. ಅಲ್ಲಲ್ಲಿ ಇರುವ ಚೆಕ್ಪೋಸ್ಟ್, ತಪಾಸಣೆ ಸೇರಿ ನಾನಾ ಕಿರಿಕಿರಿ. ಇದೆಲ್ಲಕ್ಕೂ ಮಿಗಿಲಾಗಿ ರೈತರೇ ನೇರವಾಗಿ ಮಾರುಕಟ್ಟೆಯಲ್ಲಿ ತಮ್ಮ ವಸ್ತುಗಳನ್ನು ಮಾರಲು ದಲ್ಲಾಳಿಗಳು ಬಿಡದಿರುವುದರಿಂದ ರೈತರ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
    ಜಿಲ್ಲೆಯಲ್ಲಿ ಟೊಮ್ಯಾಟೊ, ಬದನೆ, ಭೇಂಡಿ, ಗಜ್ಜರಿ, ಪಾಲಕ್, ಮೇತಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪುದಿನಾ, ಚೌಳೇಕಾಯಿ, ಹಿರೇಕಾಯಿ, ಸೋರೆಕಾಯಿ, ಬೀನ್ಸ್, ಸೌತೆಕಾಯಿ, ಕಲ್ಲಂಗಡಿ, ಕರಬೂಜು, ಪೇರಲ, ದ್ರಾಕ್ಷಿ, ಬಾಳೆ, ಚೆಂಡು, ಸೇವಂತಿಗೆ ಹೀಗೆ ನಾನಾ ರೀತಿಯ ತರಕಾರಿ, ಹಣ್ಣು ಮತ್ತು ಹೂವು ಬೆಳೆಯಲಾಗಿದೆ. ಲಾಕ್ಡೌನ್ನಿಂದಾಗಿ ಮಾರುಕಟ್ಟೆಗೆ ತಂದು ಮಾರುವುದೇ ರೈತರಿಗೆ ಕಷ್ಟಕರವಾಗಿದೆ. ಹೂವುಗಳು ಬಾಡಿದರೆ, ಹಣ್ಣು ಮತ್ತು ತರಕಾರಿ ಕೊಳೆಯುತ್ತಿವೆ.
    ತರಕಾರಿ ಮತ್ತು ಹಣ್ಣು ಸಾಗಣಿಗೆ ಯಾವುದೇ ಅಡ್ಡಿ ಮಾಡಬೇಡಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ. ಪಾಟೀಲ್ ಕಲಬುರಗಿಗೆ ಬಂದಾಗ ಹೇಳಿದ್ದಾರೆ. ಆದರೆ ಈ ವಾಹನಗಳು ನಗರಕ್ಕೆ ಬರುವುದರೊಳಗೆ ಚೆಕ್ಪೋಸ್ಟ್ಗಳಲ್ಲಿ ತಡೆಹಿಡಿದು ಏನೆಲ್ಲ ಹಿಂಸೆ ನೀಡಲಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.
    ತಾಜಸುಲ್ತಾನಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ನೇರವಾಗಿ ಮಾರಲು ಅವಕಾಶ ಕೊಡಿ. ಮಧ್ಯವರ್ತಿಗಳು ನಮ್ಮ ಉತ್ಪನ್ನಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಮನಬಂದ ದರದಲ್ಲಿ ಮಾರುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮಗೂ ನಷ್ಟ, ಗ್ರಾಹಕರ ಜೇಬಿಗೂ ಕತ್ತರಿ ಬೀಳುವಂತಾಗಿದೆ ಎನ್ನುತ್ತಾರೆ ರೈತರು.
    ನಾವೇ ನೇರವಾಗಿ ವಸ್ತುಗಳನ್ನು ಮಾರಿದರೆ ನಮಗೂ ಮತ್ತು ಗ್ರಾಹಕರಿಗೂ ಲಾಭ ಎನ್ನುವ ರೈತರೊಬ್ಬರು, ಒಂದು ಕಲ್ಲಂಗಡಿಯನ್ನು 10-20 ರೂ.ಗೆ ಕೊಡುತ್ತೇವೆ. ಆದರೆ ಮಧ್ಯವರ್ತಿ ಗಳು 50-60 ರೂ.ಗೆ ಕೊಡುತ್ತಾರೆ ಎನ್ನುತ್ತಾರೆ. ರೈತರ ವಸ್ತುಗಳನ್ನು ಅವರೇ ನೇರವಾಗಿ ಮಾರುವ ಅವಕಾಶ ನೀಡಿದಾಗಲೇ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಇಲ್ಲವಾದರೆ ಅವರ ಗೋಳಿಗೆ ಕೇಳುವವರಾರೂ ಎಂಬ ಪ್ರಶ್ನೆಗೆ ಸಂಬಂಧಿತರೇ ಉತ್ತರಿಸುವುದು ಒಳಿತು.
    ನೇರವಾಗಿ ಮಾರಲು ಕೊಡಿ ಅವಕಾಶ
    ನಗರದಲ್ಲಿ ಕೆಲ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿ ಮಾರಲಾಗುತ್ತಿದೆ. ಆದರೆ ರೈತರೇ ನೇರವಾಗಿ ಮಾರುತ್ತಿಲ್ಲ. ನಾವು ಸಿಟಿ ಮಂದಿಗೆ ಮಾರಬೇಕು. ಮಧ್ಯವರ್ತಿಗಳೇ ವಾಹನಗಳಲ್ಲಿ ಮಾರುತ್ತಾರೆ. ವಾಹನಗಳ ಮೂಲಕ ನಮಗೇ ನೇರವಾಗಿ ಮಾರಲು ಅವಕಾಶ ಕೊಡುವ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ಆಲೋಚಿಸಲಿ ಎನ್ನುತ್ತಾರೆ ರೈತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts