More

    ನರೇಗಾ ಉದ್ಯೋಗಕ್ಕಾಗಿ ತಾಪಂ ಕಚೇರಿಗೆ ಮುತ್ತಿಗೆ

    ತಾಳಿಕೋಟೆ: ಸಂಪೂರ್ಣ ಬರಗಾಲದಿಂದ ಉದ್ಯೋಗವಿಲ್ಲದೆ ಜನರು ಪರದಾಡುವಂತಾಗಿದೆ. ಉದ್ಯೋಗ ಅರಸಿಕೊಂಡು ಬೇರೆ ಗ್ರಾಮಗಳಿಗೆ ಹೋಗುವಂತಹ ಪರಸ್ಥಿತಿ ಬಂದಿದ್ದು ಕೂಡಲೇ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಬಿಳೇಭಾವಿ ಗ್ರಾಮಸ್ಥರು ತಾಳಿಕೋಟೆ ತಾಲೂಕು ಪಂಚಾಯಿತಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಿಳೇಭಾವಿ ಗ್ರಾಮಸ್ಥರು ನಿತ್ಯ ಕೂಲಿಗಾಗಿ ಅಲೆದಾಡುವಂತಾಗಿದೆ. ಉದ್ಯೋಗ ಕೇಳಿಕೊಂಡು ಗ್ರಾಪಂಗೆ ಹೋದರೆ ಅಭಿವೃದ್ಧಿ ಅಧಿಕಾರಿ ಪ್ರಜಕ್ತಾ ತಟಗಾರ ಅವರು, ನಮ್ಮಲ್ಲಿ ಕೆಲಸವಿಲ್ಲ, ಎಲ್ಲಿಯಾದರೂ ಹೋಗಿ ಕೆಲಸ ಮಾಡಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

    ಸರ್ಕಾರ ಈ ಮೊದಲು 100 ದಿನ ಇದ್ದ ಕೆಲಸವನ್ನು 150 ದಿನಕ್ಕೆ ವಿಸ್ತರಿಸಿದೆ. ಆದರೆ ಸರ್ಕಾರದ ಆದೇಶವನ್ನು ಪಿಡಿಒ ಅವರ ಮುಂದೆ ವ್ಯಕ್ತಪಡಿಸಿದರೆ ಸರ್ಕಾರಕ್ಕೆ ಹೋಗಿ ಕೇಳಿ ನನಗೆ ಕೆಲಸ ಕೇಳಬೇಡಿ. ನೀವು ಯಾರ ಬಳಿಯಾದರೂ ಹೋಗಿ ನನಗೇನು ಹೆದರಿಕೆ ಇಲ್ಲವೆಂದು ಗ್ರಾಮಸ್ಥರಿಗೆ ದುರ್ವರ್ತನೆಯಿಂದ ಉತ್ತರಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವವರೆಗೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲವೆಂದು ಪಟ್ಟು ಹಿಡಿದು ಕುಳಿತುಕೊಂಡರು.

    ಗ್ರಾಮಸ್ಥರ ಪ್ರತಿಭಟನೆಗೆ ಪ್ರತಿಕ್ರಿಯಿಸಿ ತಾಪಂ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಅವರು ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಕೂಡಲೇ ಪಿಡಿಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜನರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಪ್ರತಿಭಟನಾ ನಿರತ ಮಹಿಳೆಯರು ಎರಡು ದಿನಗಳಲ್ಲಿ ಬಿಳೇಭಾವಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು. ಅಧಿಕಾರಿ ಸುಜಾತಾ ಯಡ್ರಾಮಿ ಅವರಿಗೆ ಮನವಿ ಸಲ್ಲಿಸಿದರು.

    ಬಿಳೇಭಾವಿ ಗ್ರಾಮದ ಮಹಿಳೆಯರಾದ ಸಾಬವ್ವ ಚಿಕ್ಕನಳ್ಳಿ, ಬಸಮ್ಮ ಪೂಜಾರಿ, ಕಲಾವತಿ ಪೂಜಾರಿ, ಯಲ್ಲಮ್ಮ ಪೂಜಾರಿ, ನೀಲಮ್ಮ ಸುರಪುರ, ಅಯ್ಯಮ್ಮ ಗೋನಾಳ, ಜಗದೇವಿ ಬಾಕಲಿ, ಶಾರದಾ ಅಮ್ಮಾಪುರ, ಪಾರ್ವತಿ ವಾಲಿಕಾರ, ಬಸಮ್ಮ ಬರದೇನಾಳ, ಯಲ್ಲಮ್ಮ ಕೆಸರಟ್ಟಿ, ಬಸಮ್ಮ ಕಡೇಕಲ್ಲ, ಶರಣಮ್ಮ ಕೇಸಾಪುರ, ಹುಲಗಮ್ಮ ಮೇಟಿ, ಬಾಗಮ್ಮ ಹೊಕ್ರಾಣಿ, ಸಿದ್ದಮ್ಮ ಬದರಕುಂದಿ, ಸಂಗಮ್ಮ ಮಿಣಜಗಿ, ಮರಲಿಂಗಮ್ಮ ಕೇಸರಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts