More

    ನರೇಗಲ್ಲ ಪಪಂ ಪಟ್ಟಕ್ಕೆ ಪೈಪೋಟಿ

    ನರೇಗಲ್ಲ: ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಮೂರನೇ ಮೀಸಲಾತಿ ಪಟ್ಟಿಯಾಗಿದೆ. ಚುನಾಯಿತ ಸದಸ್ಯರ ಅಜ್ಞಾತವಾಸಕ್ಕೆ ಮುಕ್ತಿ ಸಿಗುವ ಆಸೆಯಲ್ಲಿ ಸದಸ್ಯರು ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ.

    ನರೇಗಲ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಎಸ್​ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 17 ಸದಸ್ಯರ ಬಲದಲ್ಲಿ 12 ಬಿಜೆಪಿ, ಇಬ್ಬರು ಪಕ್ಷೇತರ, ಮೂವರು ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. 2018ರ ಸೆ. 3ರಂದು ಪಪಂ ಫಲಿತಾಂಶ ಪ್ರಕಟವಾಗಿದೆ. ಈಗ ಸರ್ಕಾರ ಮೂರನೇ ಬಾರಿಗೆ ಮೀಸಲಾತಿ ಪ್ರಕಟಿಸಿದ್ದು, ಇದುವೇ ಅಂತಿಮ ಪಟ್ಟಿಯಾಗಿದೆ.

    ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಬಿಜೆಪಿಯ ಪರಿಶಿಷ್ಟ ಜಾತಿಯ ಇಬ್ಬರು ಸದಸ್ಯೆಯರಾದ 16ನೇ ವಾರ್ಡ್​ನ ಅಕ್ಕಮ್ಮ ಮಣೊಡ್ಡರ ಹಾಗೂ 6ನೇ ವಾರ್ಡ್​ನ ವಿಜಯಲಕ್ಷ್ಮೀ ಚಲವಾದಿ ಇಬ್ಬರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯ ಪುರುಷ ಮತ್ತು ಮಹಿಳಾ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಪ್ರಮುಖವಾಗಿ ಶ್ರೀಶೈಲಪ್ಪ ಬಂಡಿಹಾಳ, ಕುಮಾರಸ್ವಾಮಿ ಕೋರಧಾನ್ಯಮಠ, ಮಲ್ಲಿಕಾರ್ಜುನ ಬೂಮನಗೌಡ್ರ, ಮಲೀಕ್​ಸಾಬ್ ರೋಣದ, ಫಕೀರಪ್ಪ ಮಳ್ಳಿ, ಫಕೀರಪ್ಪ ಬಂಬಲಾಪೂರ, ಜ್ಯೋತಿ ಪಾಯಪ್ಪಗೌಡ್ರ, ಸುಮಿತ್ರಾ ಕಮಲಾಪೂರ ಆಕಾಂಕ್ಷಿಗಳಾಗಿದ್ದಾರೆ.

    ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಇಬ್ಬರು ಸದಸ್ಯೆಯರಿಗೆ ಅರ್ಧ ಅವಧಿಗೆ ಒಬ್ಬರಂತೆ ಹಂಚಿಕೆ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇರುವುದು ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ. ಶಾಸಕ ಕಳಕಪ್ಪ ಬಂಡಿ ಅವರ ನಿರ್ಧಾರವೇ ಅಂತಿಮವಾಗಲಿದೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಸ್ಥಳೀಯ ಬಿಜೆಪಿ ಮುಖಂಡರ ಮೂಲಕ ಶಾಸಕರ ಮೇಲೆ ಒತ್ತಡ ಹೇರುವ ತಂತ್ರ ಶುರುವಾಗಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.

    ನರೇಗಲ್ಲ ಪಪಂ ಮೀಸಲಾತಿ : 2018ರ ಸೆ. 3ರಂದು ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡನೇ ಬಾರಿಗೆ 2019ರ ಆಗಸ್ಟ್​ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಈಗ ಮೂರನೇ ಬಾರಿಗೆ 2020 ಅ. 8ರ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts