More

    ನರಗುಂದದ ಮಣ್ಣಿನಲ್ಲಿದೆ ಹೋರಾಟದ ಶಕ್ತಿ

    ನರಗುಂದ: ಪಟ್ಟಣದಲ್ಲಿ ವಿವಿಧ ರೈತ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ 41ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ರಾಜ್ಯದ ನೂರಾರು ರೈತರು ಪಾಲ್ಗೊಂಡು ಸರ್ಕಾರಕ್ಕೆ ವಿವಿಧ ಹಕ್ಕೊತ್ತಾಯ ಮಂಡಿಸಿದರು.
    ಸಂಯುಕ್ತ ಕಿಸಾನ್ ಮೋರ್ಚಾ ರೈತ ನಾಯಕ ದೀಪಕ್ ಲಾಂಬಾ ಮಾತನಾಡಿ, ನರಗುಂದದ ಮಣ್ಣಿನಲ್ಲಿ ಹೋರಾಟದ ಶಕ್ತಿಯಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆಗಳ ತಿದ್ದುಪಡಿಗೆ ಆಗ್ರಹಿಸಿ ದೆಹಲಿಯಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಸರ್ಕಾರ ಕಾಯ್ದೆ ತಿದ್ದುಪಡಿಗೆ ತಡಮಾಡಿದಷ್ಟೂ ಹೋರಾಟ ಮತ್ತಷ್ಟು ಗಟ್ಟಿಗೊಳ್ಳುತ್ತದೆ. 102 ರೈತರ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸಲಾಗಿದೆ. ಹೀಗಾಗಿ, ದೆಹಲಿ ಸಂಸತ್ತ ಭವನದ ಮುಂದೆ ಜು.22ರಿಂದ ಆ.13ರವರೆಗೆ ಮತ್ತೆ ಹೋರಾಟ ಹಮ್ಮಿಕೊಂಡಿದ್ದೇವೆ. ಮೂರೂ ಕೃಷಿ ಕಾಯ್ದೆ ರದ್ದತಿಗೆ ಸದನದಲ್ಲಿ ಆಗ್ರಹಿಸುವಂತೆ ಎಲ್ಲ ಸಂಸದರಿಗೂ ತಿಳಿಸಲಾಗಿದೆ ಎಂದರು.
    ಹರಿಯಾಣದ ರೈತ ಮುಖಂಡ ಹರನೀರ್​ಸಿಂಗ್ ಮಾತನಾಡಿ, ಪಂಜಾಬ್​ನಿಂದ ಆರಂಭವಾದ ರೈತರ ಹೋರಾಟ ದೆಹಲಿವರೆಗೂ ವಿಸ್ತರಿಸಿದೆ. ದೇಶದ ರೈತರೆಲ್ಲರೂ ಈಗ ಒಂದಾಗುತ್ತಿದ್ದಾರೆ. ಇದರಿಂದ ಪ್ರಧಾನಿಗೆ ನಡುಕ ಶುರುವಾಗಿದೆ ಎಂದರು.
    ಫಸಲ್ ಬಿಮಾ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಮುಂದಿನ ದಿನಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕು. ಭೂಸುಧಾರಣೆ, ವಿದ್ಯುತ್, ಎಪಿಎಂಸಿ ಕಾಯ್ದೆಗಳು ರದ್ದಾಗಬೇಕು. ಇಲ್ಲದಿದ್ದರೆ ಹೋರಾಟ ನಿರಂತರವಾಗಿರಲಿದೆ. ಇದಕ್ಕಾಗಿ ಕರ್ನಾಟಕದ ರೈತರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
    ಎಸ್.ಆರ್. ಹಿರೇಮಠ, ಬಡಗಲಪುರ ನಾಗೇಂದ್ರ, ಬಿ.ಎನ್. ಜಗದೀಶ, ಮಂಜುಳಾ ಅಕ್ಕಿ, ವಿಠ್ಠಲ ಜಾಧವ, ವೀರೇಶ ಸೊಬರದಮಠ, ಚಾಮರಸ ಮಾಲಿಪಾಟೀಲ, ಶಂಕರಪ್ಪ ಅಂಬಲಿ, ಶಶಿಕಾಂತ ಪಡಸಲಗಿ, ಮಧುಸೂದನ ತಿವಾರಿ, ಶಂಕರಗೌಡ ಪಾಟೀಲ ಮಾತನಾಡಿದರು. ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮೂಲಕ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ವರೆಗೆ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
    ರಾಜ್ಯ ರೈತ ಸಂಘ ಸಹಯೋಗದಲ್ಲಿ ಮಹದಾಯಿಗಾಗಿ ಮಹಾವೇದಿಕೆ, ಕರ್ನಾಟಕ ರೈತ ಸೇನೆ, ರೈತ ಸೇನಾ ಕರ್ನಾಟಕ, ಪ್ರಾಂತ ರೈತ ಸಂಘ, ಉತ್ತರ ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಮುಖಂಡರು,

    • ಹಕ್ಕೊತ್ತಾಯಗಳು
    • ಕೇಂದ್ರದ ಮೂರು ಕೃಷಿ ಕಾನೂನು, ವಿದ್ಯುತ್, ಎಪಿಎಂಸಿ, ಕಾರ್ವಿುಕ ಕಾಯ್ದೆ ರದ್ದುಪಡಿಸಬೇಕು.
    • ರೈತರ ಮೇಲಿನ ಎಲ್ಲ ಕೇಸ್​ಗಳನ್ನು ರದ್ದುಪಡಿಸಬೇಕು. ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು ಯೋಜನೆ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳಬೇಕು.
      ಆ.15 ರೊಳಗಾಗಿ ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು.
    • ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸಬೇಕು ಎಂಬಿತ್ಯಾದಿ 24 ಹಕ್ಕೊತ್ತಾಯ ಮಂಡಿಸಿ, ತಹಸೀಲ್ದಾರ್ ಎ.ಡಿ. ಅಮರವದಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಸುಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

    ಬೇಡಿಕೆ ಈಡೇರಿಕೆಗಾಗಿ ಸಂಘಟಿತರಾಗಿ

    ಲಕ್ಷ್ಮೇಶ್ವರ: ಸಮೀಪದ ಗೋವನಾಳ ಗ್ರಾಮದಲ್ಲಿ ಬುಧವಾರ ರೈತ ಹುತಾತ್ಮ ದಿನ ಆಚರಿಸಲಾಯಿತು. ಹುತಾತ್ಮ ರೈತರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 28 ವರ್ಷಗಳ ಹಿಂದೆ ಗ್ರಾಮದ ರೈತರಾದ ಫಕೀರಗೌಡ ಮಣಕಟ್ಟಿ, ರಾಮಣ್ಣ ಹುಬ್ಬಳ್ಳಿ ಹಾಗೂ ಉಡಚಪ್ಪ ವಾಲಿಕಾರ ಅವರು ಬೆಂಗಳೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಸ್ಮರಣಾರ್ಥವಾಗಿ ಗ್ರಾಮದ ಅಗಸಿಯಲ್ಲಿ ವೀರಗಲ್ಲು ಸ್ಥಾಪಿಸಿ ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆಯಂದು ಸ್ಮರಿಸಲಾಗುತ್ತಿದೆ.

    ಜಿ.ಪಂ ಸದಸ್ಯ ಎಸ್.ಪಿ. ಬಳಿಗಾರ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ರೈತರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತರಾಗಬೇಕು. ಅನ್ನ ನೀಡುವ ರೈತರ ಉತ್ಪನ್ನಗಳಿಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗಿಲ್ಲ ಮತ್ತು ಅವರು ಬೆಳೆದ ಆಹಾರ ಉತ್ಪನ್ನಗಳಿಗೆ ಕಿಮ್ಮತ್ತು ಇಲ್ಲದಿರುವುದು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರಗಳು ಕೃಷಿಯನ್ನು ಉದ್ಯಮದ ರೀತಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.

    ರೈತ ಮುಖಂಡರಾದ ಜೆ.ಡಿ. ಪಾಟೀಲ, ದಿವಾನಸಾಬ ಮಸೂತಿ, ಭರಮಣ್ಣ ರೊಟ್ಟಿಗವಾಡ, ಅಲ್ಲಿಸಾಬ ಅಗಸಿಮನಿ, ಮಂಜನಗೌಡ ಕೆಂಚನಗೌಡ್ರ, ರಾಮನಗೌಡ ಹುಬ್ಬಳ್ಳಿ, ಈಶ್ವರಪ್ಪ ಸೊರಟೂರ, ನಾಗರಾಜ ದೊಡ್ಡಮನಿ, ಸೋಮನಗೌಡ್ರ ಕೊರಡೂರ, ನಿಂಗನಗೌಡ ಮಣಿಕಟ್ಟಿ, ಚಂದ್ರಗೌಡ ಕರಿಗೌಡ್ರ, ವಸಂತಗೌಡ ಕರಿಗೌಡ್ರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts