More

    ನಮ್ಹುಡುಗಿ ಶ್ಯಾನೆ ಟಾಪಾಗವ್ಳೆ..! -ಜಾಂಬವಂತನಿಗೆ ಕೊನೆಗೂ ಸಿಕ್ಕ ಸಂಗಾತಿ

    ಡಿ.ಎಂ.ಮಹೇಶ್, ದಾವಣಗೆರೆ: ಮೊದಲ ಪ್ರೇಯಸಿ ಮೃತಪಟ್ಟಾಗಿನಿಂದ ಹುಡುಗ ಮಂಕಾಗಿದ್ದ. ಊಟ-ನಿದ್ರೆ ಚೆನ್ನಾಗಿ ಮಾಡುತ್ತಿದ್ದರೂ ಚಟುವಟಿಕೆಗಳಿಲ್ಲದೆ ಸದಾ ಮೂಲೆಯಲ್ಲಿ ಸಪ್ಪು ಮೋರೆ ಹಾಕಿ ಕೂತಿರುತ್ತಿದ್ದ. ಪಕ್ಕದ ಮನೆ ಹುಡುಗಿ ಬಂದಾಗಿನಿಂದ ಚಡಪಡಿಕೆ ಹೆಚ್ಚಿದೆ. ಕುಂತಲ್ಲಿ ಕೂರುತ್ತಿಲ್ಲ. ನಿಂತಲ್ಲಿ ನಿಲ್ಲುತ್ತಲೂ ಇಲ್ಲ. ಕಿಟಕಿಯಲ್ಲಿ ಇಣುಕಿ ಕಣ್ಣಲ್ಲೇ ಅನುರಾಗ ತೋರುತ್ತಿದ್ದಾನೆ!
    ಅರೆ! ಯಾರಿದು ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡದೇ ಇರದು. ಇದು ವ್ಯಕ್ತಿಯ ಕಥೆಯಲ್ಲ. ಮೂಕಪ್ರಾಣಿಯ ಪ್ರೇಮಕಥನವಿದು. ಭೀಮ ಹೆಸರಿನ ಜಾಂಬವಂತ, ಪಾರ್ವತಿ ಎಂಬ ಹೆಣ್ಣು ಕರಡಿಯ ಪ್ರೇಮದ ಬಲೆಗೆ ಬಿದ್ದಿದೆ. ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯವೇ ಇವರಿಬ್ಬರ ಪ್ರೇಮಾಂಕುರಕ್ಕೆ ಮುನ್ನುಡಿಯಾಗಿದೆ!
    ಗಂಡು ಕರಡಿಗೆ ಈಗ ಎಂಟು ವರ್ಷ. ಅರಣ್ಯಾಧಿಕಾರಿಗಳೇ ಹೇಳುವಂತೆ ಹರಪನಹಳ್ಳಿ ಬಳಿ ಕಾರ್ಯಾಚರಣೆ ವೇಳೆ ಸಿಕ್ಕ ಗಂಡು ಕರಡಿ ಮರಿ (ಭೀಮ) ಐದು ವರ್ಷದಿಂದ ಝೂನಲ್ಲೇ ಬೆಳೆದು ದೊಡ್ಡದಾಗಿದೆ. ಅದರೊಂದಿಗೆ ಉತ್ತಮ ಒಡನಾಟವಿದ್ದ ಹೆಣ್ಣು (ಲಕ್ಷ್ಮೀ)ಕರಡಿ 3-4 ವರ್ಷದ ಹಿಂದೆ ಅನಾರೋಗ್ಯದ ಕಾರಣಕ್ಕೆ ಮೃತಪಟ್ಟಿತ್ತು. ನಂತರದಲ್ಲಿ ಭೀಮ ಒಂಟಿಯಾಗಿದ್ದ.
    ದಾವಣಗೆರೆ-ಚಿತ್ರದುರ್ಗ ಗಡಿ ಭಾಗದ ಕೊಟ್ಟಿಗನಹಾಳ್ ಸಮೀಪ ಮೂರು ತಿಂಗಳ ಹಿಂದಷ್ಟೆ ನಡೆದ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಸುಮಾರು ಮೂರು ವರ್ಷದ ಹೆಣ್ಣು ಕರಡಿ(ಪಾರ್ವತಿ) ಜತೆಗೆ ಭೀಮನನ್ನು ಅಕ್ಕಪಕ್ಕದ ಕೇಜ್ (ಕರಡಿ ಮನೆ)ಗಳಲ್ಲಿ ಇರಿಸಲಾಗಿದೆ. ಎರಡೂ ಮನೆಗಳ ಮಧ್ಯೆಯ ಕಿಟಕಿಯಲ್ಲಿ ಪರಸ್ಪರ ಮುಖ ನೋಡಿ ಮಾತಾಡಿಕೊಳ್ಳುತ್ತಿವೆ!
    ಎರಡೂ ಕರಡಿಗಳಿಗೂ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಂತು ಹುಳ ಔಷಧ, ಪೌಷ್ಟಿಕಾಂಶದ ಮದ್ದನ್ನು ಆಹಾರದ ಜತೆ ಸೇರಿಸಿ ನೀಡಲಾಗುತ್ತದೆ. ಎರಡೂ ಕೂಡ ಉತ್ತಮ ಬೆಳವಣಿಗೆ ಕಂಡಿವೆ. ಆರಂಭದಲ್ಲಿ ಮನುಷ್ಯರನ್ನೂ ಕಂಡರೂ ಆಗದೆ ಅರಚುತ್ತಿದ್ದ ಪಾರ್ವತಿ ಇದೀಗ ಸುಧಾರಣೆ ಕಂಡಿದ್ದಾಳೆ. ಹೀಗಾಗಿ ಭೀಮನ ಜತೆ ಒಂದೇ ಕೇಜ್‌ನಲ್ಲಿ ಇರಿಸಬಹುದು ಎಂದು ಆನಗೋಡು ಪಶು ವೈದ್ಯಾಧಿಕಾರಿ ಡಾ.ಮಂಜುನಾಥ ಆಚಾರ್ ಕೂಡ ಸಲಹೆ ನೀಡಿದ್ದಾರೆ.
    ಕರಡಿ ಸೌಮ್ಯ ಸ್ವಭಾವದ ಪ್ರಾಣಿ. ಭೀಮನಿಗೆ ಸದ್ಯಕ್ಕೆ ನಿತ್ಯ ರಾಗಿ ಗಂಜಿ, ಬ್ರೆಡ್ -ಹಾಲು, ನಿತ್ಯ 2ರಿಂದ 3 ಕಿಲೋ ಹಣ್ಣು, ತರಕಾರಿಗಳನ್ನು ನೀಡಲಾಗುತ್ತಿದೆ. ಇತರೆ ಪ್ರಾಣಿಗಳಂತೆ ಕರಡಿಯನ್ನು ದಾನಿಗಳು ದತ್ತು ಪಡೆಯಬಹುದು. ವರ್ಷಕ್ಕೆ 50 ಸಾವಿರ ರೂ. ನೀಡಿ ದತ್ತು ಸ್ವೀಕಾರ ಪಡೆದಲ್ಲಿ ಕರಡಿ ಸಲಹುವುದು ಸುಲಭವಾಗಲಿದೆ. ದಾನಿಗಳು ಇದಕ್ಕೆ ಮುಂದಾಗಬೇಕೆಂಬುದು ಪ್ರಭಾರ ವಲಯ ಅರಣ್ಯಾಧಿಕಾರಿ ದಿನೇಶ್ ಅವರ ಮನವಿ.
    ಬಹು ವರ್ಷದಿಂದ ಭೀಮನಿಗೆ ಜೋಡಿ ಸಿಕ್ಕಿರಲಿಲ್ಲ. ವನ್ಯಜೀವಿ ರಕ್ಷಣಾ ಕಾಯ್ದೆ ಪ್ರಕಾರ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಯಾವುದೇ ವನ್ಯಜೀವಿಯನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇರಿಸಲು, ಸಾರ್ವಜನಿಕವಾಗಿ ಪ್ರದರ್ಶನಕ್ಕಿರಿಸಲು ಮೇಲಧಿಕಾರಿಗಳ ಪರವಾನಗಿ ಅತ್ಯಗತ್ಯ. ಈಗಾಗಲೆ ಸರ್ಕಾರದ ವನ್ಯಜೀವಿ ಪರಿಪಾಲಕರು ಇದಕ್ಕೆ ಮುದ್ರೆ ಒತ್ತಿದ್ದಾರೆ.
    ಹೀಗಾಗಿ ಭೀಮ-ಪಾರ್ವತಿ ಒಂದೆಡೆ ಸೇರಿಸಲು ಅಧಿಕಾರಿಗಳು ತುದಿಗಾಲಲ್ಲಿದ್ದಾರೆ. ‘ನಮ್ಹುಡುಗಿ ಶ್ಯಾನೆ ಟಾಪಗವ್ಳೆ’ ಎಂದು ಭೀಮ ಅಂದುಕೊಂಡರೆ, ‘ಅಣ್ಣಂಗೆ ಲವ್ವಾಗಿದೆ..’ ಎಂಬುದಾಗಿ ಸಂಗ್ರಹಾಲಯದ ಇತರೆ ಪ್ರಾಣಿಗಳೂ ಮನದೊಳಗೆ ಹಾಡುಲಿಯುತ್ತಿವೆ!

    * ಕೋಟ್
    ಕರ್ನಾಟಕ ಸರ್ಕಾರದ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ, ಪಶುವೈದ್ಯಾಧಿಕಾರಿಗಳ ಅಂತಿಮ ಸಲಹೆ ಪಡೆದು ಗಂಡು ಕರಡಿ(ಭೀಮ)ನಿಗೆ ಪೂರಕವಾಗಿ ಹೆಣ್ಣು (ಪಾರ್ವತಿ) ಕರಡಿಯನ್ನು ಜತೆಗೆ ಸೇರಿಸಲು ಹಾಗೂ ಇವನ್ನು ಸಾರ್ವಜನಿಕ ವೀಕ್ಷಣೆಗೆ ಇರಿಸಲು ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
    ಎನ್.ಜಗನ್ನಾಥ್
    ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ಅರಣ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts