More

    ನನಸಾಗದ ಗ್ರಿಡ್ ಸ್ಥಾಪನೆ ಕನಸು

    ಶಿರಸಿ: ಅಸಮರ್ಪಕ ವಿದ್ಯುತ್ ಪೂರೈಕೆ ನಿವಾರಿಸುವ ಉದ್ದೇಶದಿಂದ ತಾಲೂಕಿನ ಹತ್ತರಗಿ ಭಾಗದಲ್ಲಿ ಕೆಪಿಟಿಸಿಎಲ್ ವಿದ್ಯುತ್ ಉಪಕೇಂದ್ರ (ಗ್ರಿಡ್) ಸ್ಥಾಪನೆಗೆ ಮುಂದಾದರೂ ಅರಣ್ಯ ಜಾಗದ ಸಮಸ್ಯೆಯಿಂದ ಇಂದಿಗೂ ಗ್ರಿಡ್ ಕನಸು ನನಸಾಗಿಲ್ಲ. ಹೀಗಾಗಿ ಅಸಮರ್ಪಕ ವಿದ್ಯುತ್ ಪೂರೈಕೆ ನಿರಂತರವಾಗಿದ್ದು, ಜನಸಾಮಾನ್ಯರ ಬವಣೆ ಮುಂದುವರಿದಿದೆ.
    ತಾಲೂಕಿನ ಸಂಪಖಂಡದಲ್ಲಿ 310 ಕಿ.ಮೀ ವಿದ್ಯುತ್ ಮಾರ್ಗ ಇರುವುದರಿಂದ ಪದೇಪದೆ ಟ್ರಿಪ್ ಆಗಿ, ನಿರಂತರ ವಿದ್ಯುತ್ ಪೂರೈಕೆಗೆ ಅಡ್ಡಿಯಾಗುತ್ತಿದೆ. ಸಂಪಖಂಡ, ಬಬ್ಬಿಕೊಡ್ಲು, ಖೂರ್ಸೆ, ಜಾನ್ಮನೆ, ಬಂಡಲ, ರಾಗಿಹೊಸಳ್ಳಿ, ಮಂಜಗುಣಿ, ಸೋಮನಮನೆ, ಹೆಬ್ರೆ, ಕಸಗೆ, ಲಕ್ಕಿಗುಣಿ, ಅಡಕೆಜಡ್ಡಿ, ಕೋಣನಗದ್ದೆ ಸೇರಿದಂತೆ ಸುತ್ತಲಿನ ಹಲವು ಹಳ್ಳಿಗಳ ಜನರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಹೈರಾಣಾಗಿದಾರೆ.
    ದಶಕದ ಸಮಸ್ಯೆ!
    ತೋಟ, ಗದ್ದೆಗಳಿಗೆ ಕೊಳವೆಬಾವಿ, ಕೆರೆ ಅಥವಾ ಹೊಳೆಯ ನೀರನ್ನು ಆಶ್ರಯಿಸಿರುವ ಈ ಭಾಗದ ರೈತಾಪಿ ವರ್ಗ ಕಡಿಮೆ ವೋಲ್ಟೇಜ್ ವಿದ್ಯುತ್​ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಂಜುಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖೂರ್ಸೆ ಸೇರಿದಂತೆ ಕೆಲವೆಡೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೂ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ವಿದ್ಯುತ್ ಮರೀಚಿಕೆಯಂತಾಗುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಹತ್ತರಗಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕುರಿತು 10 ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಇನ್ನೂ ಜಾಗದ ಸಮಸ್ಯೆಯೇ ಬಗೆಹರಿದಿಲ್ಲ!
    ಹೊಸ ಜಾಗದ ಗುರುತು: ಹತ್ತರಗಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ವಣವಾದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ಜಾನ್ಮನೆ ಗ್ರಾಮದ ಸರ್ಕಾರಿ ಬೆಟ್ಟ ಸರ್ವೆ ನಂಬರ್ 119/1ರಲ್ಲಿ 3 ಎಕರೆ ಜಮೀನನ್ನು 110 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ವಿುಸಲು ಮತ್ತು 110 ಕೆ.ವಿ. ಮಾರ್ಗ ನಿರ್ವಿುಸಲು 2009-10ನೇ ಸಾಲಿನಲ್ಲಿ ಕೆಪಿಟಿಸಿಎಲ್ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಆ ಜಾಗದ ಸಮಸ್ಯೆ ಬಗೆಹರಿಯದ ಕಾರಣಕ್ಕೆ ಕೆಪಿಟಿಸಿಎಲ್ ಅಧಿಕಾರಿಗಳು ಪ್ರಸ್ತುತ ಅರಣ್ಯ ಸ.ನಂ.163ರನ್ನು ಗುರುತಿಸಿ 1 ಹೆಕ್ಟೇರ್ ಪ್ರದೇಶವನ್ನು ಮಂಜೂರು ಮಾಡುವಂತೆ ಮತ್ತೆ ಅರಣ್ಯ ಇಲಾಖೆ ಕದ ತಟ್ಟಿದ್ದಾರೆ. ಉದ್ದೇಶಿತ ಜಾಗವು ಅರಣ್ಯ ಪ್ರದೇಶವಾದ ಕಾರಣ ಅರಣ್ಯ ಇಲಾಖೆ ಅನುಮತಿ ಅತ್ಯಗತ್ಯವಾಗಿದೆ. ಆದರೆ, ಇಲಾಖೆ ಈವರೆಗೆ ಕಚೇರಿಗೆ ಬಂದ ಸಾಕಷ್ಟು ಪ್ರಸ್ತಾವಗಳಿಗೆ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕರೆ ಕಾಮಗಾರಿ ಮಂಜೂರಿ ಮಾಡಿಸಲು ಅವಕಾಶವಾಗಲಿದೆ. ಆದರೂ ಇಲಾಖೆ ಅಧಿಕಾರಿಗಳು ಮಾತ್ರ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸಂಪಖಂಡ ಭಾಗದ ನಾಗರಿಕರ ಆರೋಪವಾಗಿದೆ.

    ಮಳೆಗಾಲ ಸೇರಿದಂತೆ ವರ್ಷದ ಬಹುತೇಕ ದಿನಗಳಲ್ಲಿ ವಿದ್ಯುತ್ ಸಮಸ್ಯೆಯಾಗುತ್ತದೆ. ಸಂಪಖಂಡ ಮಾರ್ಗಕ್ಕೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಕ್ಕೆ ಎದುರಾದ ಸಮಸ್ಯೆ ಬಗೆಹರಿಸಿ ಉಪಕೇಂದ್ರ ಸ್ಥಾಪನೆ ಮಾಡಬೇಕು.
    | ರವೀಂದ್ರ ಹೆಗಡೆ, ಸ್ಥಳೀಯ ನಾಗರಿಕ

    ಹತ್ತರಗಿ ಉಪಕೇಂದ್ರ ಸ್ಥಾಪನೆ ಕುರಿತಾಗಿ ದಶಕದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಪದೇಪದೆ ಜಾಗದ ವಿಚಾರಕ್ಕಾಗಿ ಹಿನ್ನಡೆಯಾಗುತ್ತಿದೆ. ಇಂದಿಗೂ ಜಾಗದ ಸಮಸ್ಯೆ ಬಗೆಹರಿದರೆ ಮಾತ್ರ ಅನುಷ್ಠಾನ ಸುಲಭವಾಗಲಿದೆ. ಇದೀಗ ಬೇರೊಂದು ಜಾಗವನ್ನು ಗುರುತಿಸಿ ಅರಣ್ಯ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿದೆ. ಜಾಗ ಹಸ್ತಾಂತರ ಸಂಬಂಧ ಅರಣ್ಯ ಇಲಾಖೆ ತೀರ್ವನಿಸಿ ಕ್ರಮವಹಿಸಬೇಕಿದೆ. ನಂತರವಷ್ಟೇ ಉಪಕೇಂದ್ರ ಮಂಜೂರಾತಿ ಕಾರ್ಯ ಮುಂದುವರಿಯಲಿದೆ.
    | ಎಸ್.ಜಿ. ಹೆಗಡೆ, ಕೆಪಿಟಿಸಿಎಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts