More

    ನದಿ ತೀರಗಳಲ್ಲಿ ಭಕ್ತರ ಪುಣ್ಯ ಸ್ನಾನ

    ಹಾವೇರಿ: ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ಪುಣ್ಯಸ್ಥಳಗಳ ನದಿ ತೀರಗಳಲ್ಲಿ ಹಲವರು ಪುಣ್ಯಸ್ನಾನ ಮಾಡಿ, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರಿಗೆ ಎಳ್ಳುಬೆಲ್ಲ ನೀಡಿ ಸಂಕ್ರಾಂತಿಯ ಶುಭಾಶಯ ಕೋರಿದರು.

    ಹಾವೇರಿ ತಾಲೂಕು ನರಸೀಪುರ, ಚೌಡಯ್ಯದಾನಪುರ, ಕಂಚಾರಗಟ್ಟಿ, ಹಾವನೂರ, ಗಳಗನಾಥ ಬಳಿಯ ತುಂಗಾತೀರದಲ್ಲಿ, ಕರ್ಜಗಿ ಬಳಿಯ ವರದಾ ನದಿಯಲ್ಲಿ, ವರದಾ ಹಾಗೂ ಧರ್ವ ನದಿ ಸಂಗಮದ ಕೂಡಲದಲ್ಲಿ, ಶಿಗ್ಗಾಂವಿ ತಾಲೂಕಿನ ದಕ್ಷಿಣಕಾಶಿ ಗಂಗಿಬಾವಿಯಲ್ಲಿ, ಹಿರೇಕೆರೂರು ತಾಲೂಕಿನ ಮದಗ ಮಾಸೂರು ಕೆರೆಯಲ್ಲಿ, ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ ಸಾವಿರಾರು ಜನರು ಮಕರ ಸಂಕ್ರಮಣದ ಅಂಗವಾಗಿ ಪುಣ್ಯಸ್ನಾನ ಮಾಡಿದರು.

    ಹಾವೇರಿಯ ಪುರಸಿದ್ಧೇಶ್ವರ ದೇಗುದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣ, ನದಿ ತೀರ ಹಾಗೂ ಪ್ರೇಕ್ಷಣೀಯ ಸ್ಥಳದಲ್ಲಿ ಕುಟುಂಬ ಸಮೇತ ಸಹಭೋಜನ ಮಾಡಿ ಸಂಭ್ರಮಿಸಿದರು.

    ವಚನ ರಥೋತ್ಸವ

    ಹಾವೇರಿ: ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 2ನೇ ವರ್ಷದ ವಚನ ಮಹಾರಥೋತ್ಸವವು ಸಾವಿರಾರು ಭಕ್ತರ ಹಷೋದ್ಗಾರಗಳೊಂದಿಗೆ ಬುಧವಾರ ಸಂಭ್ರಮದಿಂದ ನೆರವೇರಿತು.

    ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

    ಚೌಡಯ್ಯನವರ ವಚನಗಳ ಗ್ರಂಥವನ್ನು ಹೊತ್ತ ಆನೆ ಅಂಬಾರಿ ರಥೋತ್ಸವದೊಂದಿಗೆ ಸಾಗಿತು. ವಿವಿಧ ವಾದ್ಯಗಳು ರಥೋತ್ಸವಕ್ಕೆ ಮೆರುಗು ನೀಡಿದವು. ರಥೋತ್ಸವಕ್ಕೆ ಬಂದ ಭಕ್ತರಿಗೆ ಗೋಧಿಹುಗ್ಗಿ, ಕಡಕ್​ರೊಟ್ಟಿ, ಬದನೆಕಾಯಿ ಪಲ್ಲೆ, ಎಳ್ಳು, ಶೇಂಗಾ ಹೋಳಿಗೆ, ಅನ್ನಸಾಂಬಾರ, ಚಿತ್ರಾನ್ನದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts