More

    ನದಿಯಲ್ಲಿ ಕೊಚ್ಚಿ ಹೋದ ಯುವ ರೈತ

    ಹಾನಗಲ್ಲ: ನದಿಯ ನಡುಗಡ್ಡೆಯಲ್ಲಿ ಮೇಯುತ್ತಿದ್ದ ಎಮ್ಮೆಗಳನ್ನು ಮರಳಿ ಮನೆಗೆ ಹೊಡೆದುಕೊಂಡು ಬರಲು ತೆರಳಿದ್ದ ರೈತನೊಬ್ಬ ವರದಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ತಾಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

    ಇನಾಂಲಕಮಾಪುರ ಗ್ರಾಮದ ನವವಿವಾಹಿತ ಚಂದ್ರಪ್ಪ ದಳವಾಯಿ (25) ಕೊಚ್ಚಿ ಹೋದ ರೈತ. ಗ್ರಾಮದ ಪಕ್ಕ ಹರಿದಿರುವ ವರದಾ ನದಿ ಮಧ್ಯದ 25 ಎಕರೆ ಪ್ರದೇಶದ ನಡುಗಡ್ಡೆಯಲ್ಲಿ ತನ್ನ ಎಮ್ಮೆಗಳನ್ನು 3 ದಿನದ ಹಿಂದೆ ಮೇಯಲು ಚಂದ್ರಪ್ಪ ಬಿಟ್ಟಿದ್ದ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಎಮ್ಮೆಗಳನ್ನು ಮರಳಿ ಮನೆಗೆ ಹೊಡೆದುಕೊಂಡು ಬರಲು ನದಿ ದಾಟುತ್ತಿದ್ದಾಗ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ಶೋಧಕ್ಕೆ ಸೂಚಿಸಿದ್ದಾರೆ.

    ಯುವಕನ ಶೋಧಕ್ಕಾಗಿ ಹಾನಗಲ್ಲ ಹಾಗೂ ಹಾವೇರಿಯಿಂದ ಅಗ್ನಿಶಾಮಕ ದಳದ ನುರಿತ ಮುಳುಗು ತಜ್ಞರು ಆಗಮಿಸಿದ್ದು ನದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೆಚ್ಚಿನ ಕಾರ್ಯಾಚರಣೆಗೆ ಹರಿಹರದಿಂದ ಮುಳುಗು ತಜ್ಞರ 8 ಜನರ ತಂಡ ಆಗಮಿಸಿದೆ.

    ಚಂದ್ರಪ್ಪ ಕಳೆದ ಮೇನಲ್ಲಿ ಮದುವೆಯಾಗಿದ್ದ. ಆತನ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಚಂದ್ರಪ್ಪನ ಮಾಹಿತಿ ನೀಡುವಂತೆ ಪರಿತಪಿಸುತ್ತಿದ್ದಾರೆ. ಸವಣೂರ ಎಸಿ ಅನ್ನಪೂರ್ಣ ಮುದುಕಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠ ಕೆ.ಜಿ. ದೇವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಂದ್ರಪ್ಪನ ಕುಟುಂಬದ ಸದಸ್ಯರಿಗೆ ಸಾಂತ್ವನ, ಧೈರ್ಯ ಹೇಳಿದ್ದಾರೆ.

    ನದಿ ತೀರಕ್ಕೆ ತೆರಳದಂತೆ ತಹಸೀಲ್ದಾರ್ ಸೂಚನೆ

    ತಾಲೂಕಿನಾದ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದು, ಧರ್ವ, ವರದಾ ನದಿಗಳು ತುಂಬಿ ಪ್ರವಾಹದ ಮಟ್ಟ ತಲುಪಿವೆ. ನೀರಿನ ಪ್ರವಾಹ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ನದಿಯಂಚಿನ ಗ್ರಾಮಗಳ ಜನರು ಮೀನು ಹಿಡಿಯುವುದು, ಬಟ್ಟೆ ತೊಳೆಯುವುದು, ಜಾನುವಾರುಗಳ ಮೈ ತೊಳೆಯಲು-ನೀರು ಕುಡಿಸಲು ಸೇರಿದಂತೆ ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಕಟ್ಟೆಚ್ಚರ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts