More

    ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಅದಲು ಬದಲು; ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಯಾರ ಪಾಲು?

    ವಿಜಯವಾಣಿ ಟೀಮ್ ಉತ್ತರ ಕನ್ನಡ: ಕಳೆದ ಒಂದೂವರೆ ವರ್ಷದಿಂದ ನಿಷ್ಕ್ರಿಯವಾಗಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಒಮ್ಮೆಲೇ ಚುರುಕಾಗಿದ್ದಾರೆ. ಇದಕ್ಕೆ ಕಾರಣ, ಬುಧವಾರ ಸರ್ಕಾರ ಪ್ರಕಟಿಸಿದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ. ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ 11ಕ್ಕೆ ಸದ್ಯವೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಭಟ್ಕಳ ತಾಲೂಕಿನ ಜಾಲಿ ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದರೂ ಹಾಲಿ ಆಡಳಿತ ಸಮಿತಿಗೆ ಇನ್ನೂ ಒಂದೂವರೆ ವರ್ಷ ಅಧಿಕಾರವಿರುವುದರಿಂದ ಸದ್ಯ ಹೊಸ ಸಾರಥಿಗಳ ಆಯ್ಕೆ ನಡೆಯುತ್ತಿಲ್ಲ.

    ಮೀಸಲಾತಿಯ ಹೊಸ ಪಟ್ಟಿಯು ಸಿದ್ದಾಪುರ, ಭಟ್ಕಳದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ದಾಂಡೇಲಿಗೆ ಪ್ರಕಟಗೊಂಡ ಉಪಾಧ್ಯಕ್ಷ ಮೀಸಲಾತಿ ಪ್ರಕಾರ ಅಲ್ಲಿ ಯಾವುದೇ ಸದಸ್ಯರಿಲ್ಲ. ಇನ್ನು ಕಳೆದ ಒಂದೂವರೆ ವರ್ಷದಲ್ಲಿ ಯಲ್ಲಾಪುರ ಪಟ್ಟಣ ಪಂಚಾಯಿತಿಯ ರಾಜಕೀಯ ಚಿತ್ರಣವೇ ಬದಲಾಗಿಬಿಟ್ಟಿದೆ. ಕಾರವಾರ, ಅಂಕೋಲಾದಲ್ಲಿ ಅತಂತ್ರ ಸ್ಥಿತಿ ಮುಂದುವರಿದಿದೆ.

    ಮತ್ತೆ ನ್ಯಾಯಾಲಯದ ಮೊರೆ?: ಭಟ್ಕಳ ಪುರಸಭೆಯ ಅಧ್ಯಕ್ಷ ಸ್ಥಾನವು ಹಿಂದುಳಿದ ಬ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಹಾಲಿ ಮೀಸಲಾತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಯೋಚನೆ ಇದ್ದು, ರ್ಚಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಂಜಿಂ ಉಪಾಧ್ಯಕ್ಷ ಇನಾಯತುಲ್ಲಾ ಷಾಬಂದ್ರಿ ತಿಳಿಸಿದ್ದಾರೆ.

    ಭಟ್ಕಳ ಪುರಸಭೆ ರಾಜಕೀಯದಲ್ಲಿ ಮೊದಲಿನಿಂದಲೂ ಇಸ್ಲಾಂ ಸಂಘಟನೆ ತಂಜಿಂ ಪರಮಾಧಿಕಾರ ಸಾಧಿಸಿಕೊಂಡು ಬಂದಿದೆ.

    ಒಟ್ಟು 23 ವಾರ್ಡ್​ಗಳನ್ನು ಹೊಂದಿರುವ ಪುರಸಭೆಯ ಚುನಾವಣೆಯಲ್ಲಿ ತಂಜಿಂ ಬೆಂಬಲಿತ ಪಕ್ಷೇತರರು 11 ಸೇರಿ ಒಟ್ಟು 18 ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 4, ಬಿಜೆಪಿ 1 ಸ್ಥಾನ ಗೆದ್ದುಕೊಂಡಿತ್ತು.

    ಸದ್ಯದ ಮೀಸಲಾತಿಯಂತೆ ಆಯ್ಕೆಯಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಫರ್ನಾಂಡಿಸ್ ಅವಿರೋಧವಾಗಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಏಕೆಂದರೆ, ಆಯ್ಕೆಯಾದವರಲ್ಲಿ ಹಿಂದುಳಿದ ಬ ವರ್ಗ ಮಹಿಳೆ ಇವರೊಬ್ಬರೇ ಆಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ತಂಜಿಂ ಬೆಂಬಲಿತ 9 ಮಹಿಳೆಯರ ನಡುವೆ ಪೈಪೋಟಿ ನಡೆಯಲಿದೆ.

    ಹೆಬ್ಬಾರರ ಜತೆ ಬದಲಾದ ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗಿತ್ತು. ಕಾಂಗ್ರೆಸ್ 14 ಸ್ಥಾನ ಪಡೆದಿತ್ತು. ಆದರೆ, ಒಂದೂವರೆ ವರ್ಷದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿಬಿಟ್ಟಿದೆ. ಕಾಂಗ್ರೆಸ್​ನಿಂದ ಗೆದ್ದ 11 ಸದಸ್ಯರು ಶಿವರಾಮ ಹೆಬ್ಬಾರ ಜತೆ ಬಿಜೆಪಿ ಸೇರಿದ್ದಾರೆ. ಇದರಿಂದ 19 ಸದಸ್ಯ ಬಲದ ಯಲ್ಲಾಪುರದಲ್ಲಿ ಬಿಜೆಪಿಗರ ಸಂಖ್ಯೆ 14 ಸ್ಥಾನಕ್ಕೇರಿದ್ದು, ಅಧಿಕಾರ ಹಿಡಿಯಲು ಕಮಲ ಪಾಳಯ ಸಜ್ಜಾಗಿದೆ. ಜೆಡಿಎಸ್​ನಿಂದ ಆಯ್ಕೆಯಾದ ಒಬ್ಬ ಕಾಂಗ್ರೆಸ್ ಸೇರಿದ್ದು, ಸದ್ಯ ಕಾಂಗ್ರೆಸ್ ಬಲ 4ಕ್ಕೆ ಇಳಿದಿದೆ. ಈಗ ಪ್ರಕಟಗೊಂಡ ಮೀಸಲಾತಿಯಂತೆ ಯಲ್ಲಾಪುರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮೂರನೇ ಬಾರಿ ಆಯ್ಕೆಯಾದ ಪುಷ್ಪಾ ನಾಯ್ಕ ಹಾಗೂ ಸುನಂದಾ ದಾಸ್ ನಡುವೆ ಪೈಪೋಟಿ ಇದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದಿದ್ದು, ಸತೀಶ ನಾಯ್ಕ, ಪರಮೇಶ್ವರ ನಾಯ್ಕ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಸಚಿವ ಶಿವರಾಮ ಹೆಬ್ಬಾರರ ನಿರ್ಣಯವೇ ಅಂತಿಮವಾಗಿದೆ.

    ಕುಮಟಾದಲ್ಲಿ ಭಾರಿ ಪೈಪೋಟಿ: 23 ವಾರ್ಡ್​ಗಳನ್ನು ಹೊಂದಿರುವ ಕುಮಟಾ ಪುರಸಭೆಯಲ್ಲಿ ಬಿಜೆಪಿ 16 ಸ್ಥಾನ ಗೆದ್ದು, ಬಹುಮತ ಪಡೆದಿದೆ. ಕಾಂಗ್ರೆಸ್ 6, ಜೆಡಿಎಸ್ 1 ಸ್ಥಾನಗಳನ್ನು ಹೊಂದಿವೆ. ಸದ್ಯ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಸಂತೋಷ ನಾಯ್ಕ, ಮಹೇಶ ನಾಯ್ಕ, ಶ್ವೇತಾ ಗೌಡ, ಸೂರ್ಯಕಾಂತ ಗೌಡ, ತುಳಸಿ ಗೌಡ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅನಸೂಯಾ ಬಾಳಗಿ, ಸುಮತಿ ಭಟ್ ನಡುವೆ ಪೈಪೋಟಿ ಇದೆ. ಶಾಸಕ ದಿನಕರ ಶೆಟ್ಟಿ ನಿರ್ಣಯದಂತೆ ಆಯ್ಕೆ ನಡೆಯಲಿದೆ.

    ಹೊನ್ನಾವರದಲ್ಲಿ ಅಧ್ಯಕ್ಷರಾರು?: 20 ವಾರ್ಡ್​ಗಳನ್ನು ಹೊಂದಿದ ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 2019ರಲ್ಲಿ ನಡೆದ ಚುನಾವಣೆಯಲ್ಲಿ 12 ಸ್ಥಾನ ಪಡೆದು ಅಧಿಕಾರ ಹಿಡಿಯಲು ಸಜ್ಜಾಗಿದೆ. ಈಗಿನ ಮೀಸಲಾತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸಾಮಾನ್ಯ ಬಂದಿದ್ದು, ಎರಡೂ ಸ್ಥಾನಗಳಿಗೆ ಅರ್ಹರಾದವರೂ ಯಾರೂ ಇಲ್ಲ. ಹೀಗಾಗಿ, ಶಿವರಾಜ ಮೇಸ್ತ, ವಿಜಯ ಕಾಮತ್ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಗಾದಿ ಒಲಿದರೆ, ಇನ್ನೊಬ್ಬರು ಉಪಾಧ್ಯಕ್ಷರಾಗಲಿದ್ದಾರೆ.

    ದಾಂಡೇಲಿಯಲ್ಲಿ ತೀವ್ರ ಪೈಪೋಟಿ: 31 ವಾರ್ಡ್​ಗಳನ್ನು ಹೊಂದಿದ ದಾಂಡೇಲಿ ನಗರಸಭೆಯಲ್ಲಿ 16 ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಬಿಜೆಪಿ 11 ಸ್ಥಾನ ಪಡೆದಿದ್ದು, ನಾಲ್ವರು ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದುಕೊಂಡಿದ್ದರಿಂದ ಭಾರಿ ಪೈಪೋಟಿ ಏರ್ಪಟ್ಟಿದೆ. ಯಾಸ್ಮಿನ್ ಕಿತ್ತೂರು, ಅಫ್ಪಾಕ ಶೇಖ್, ನಂದೀಶ ಮುಂಗರವಾಡಿ, ಆದಂ ದೇಸೂರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು. ಯಾಸ್ಮಿನ್ ಹಾಗೂ ಆದಂ ನಡುವೆ ತೀವ್ರ ಪೈಪೋಟಿ ಇದೆ. ಏನೇ ಇದ್ದರೂ ಶಾಸಕ ಆರ್.ವಿ. ದೇಶಪಾಂಡೆ ತೀರ್ವನದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಎಸ್​ಟಿ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಇಲ್ಲಿ ಯಾವುದೇ ಅಭ್ಯರ್ಥಿ ಇಲ್ಲ. ಇದರಿಂದ ಸ್ಥಾನವನ್ನು ಎಸ್​ಸಿ ಮಹಿಳೆಗೆ ಬದಲಿಸಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕಿದೆ. ಮೀಸಲಾತಿ ಬದಲಾವಣೆಗೆ ಜಿಲ್ಲಾಧಿಕಾರಿ ಅವರಿಗೆ ಅಧಿಕಾರವಿದೆ ಎನ್ನಲಾಗುತ್ತಿದ್ದು, ಬದಲಾವಣೆ ನಂತರವೇ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

    ಸಿದ್ದಾಪುರದಲ್ಲಿ ಅಸಮಾಧಾನ: ಸಿದ್ದಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿದ್ದು, ಸ್ಥಳೀಯ ಪುರುಷ ಅಧ್ಯಕ್ಷ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ‘ಈ ಮೀಸಲಾತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದು ಮೀಸಲಾತಿ ಬದಲಾವಣೆಗೆ ಆಗ್ರಹಿಸಲಿದ್ದೇವೆ’ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಪಪಂ ಸದಸ್ಯ ಕೆ.ಜಿ.ನಾಯ್ಕ ಹಾಣಜಿಬೈಲ್ ತಿಳಿಸಿದ್ದಾರೆ.

    ‘ಈ ಹಿಂದಿನ ಎರಡು ಅವಧಿಗೆ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಮತ್ತೆ ಮಹಿಳೆಯರಿಗೇ ಸ್ಥಾನ ಮೀಸಲಿಡುವುದು ಎಷ್ಟು ಸರಿ? 2018ರಲ್ಲಿ ಪ್ರಕಟಗೊಂಡಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾದರೆ ನಮ್ಮ ಆಕ್ಷೇಪ ಇರಲಿಲ್ಲ’ ಎನ್ನುತ್ತಾರೆ ಸದಸ್ಯ ಮಾರುತಿ ನಾಯ್ಕ.

    ಪಪಂನ ಒಟ್ಟು 15 ಸ್ಥಾನದಲ್ಲಿ ಬಿಜೆಪಿ 14 ಹಾಗೂ ಕಾಂಗ್ರೆಸ್ 1 ಸ್ಥಾನ ಹೊಂದಿದೆ. ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾದರೂ ಮೀಸಲಾತಿ ಗೊಂದಲದಿಂದ ಸದ್ಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆಯೇ ಅನುಮಾನವಾಗಿದೆ.

    ಅಂಕೋಲಾ ಅತಂತ್ರ; ಪಕ್ಷೇತರರಿಗೆ ಬೇಡಿಕೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯಕ್ಕೆ ತೆರೆದುಕೊಂಡಿದ್ದರೂ ಅಂಕೋಲಾ ಪುರಸಭೆಯಲ್ಲಿ ಕೈ -ಕಮಲ ಎರಡೂ ಪಕ್ಷಗಳಿಗೂ ಬಹುಮತದ ಕೊರತೆ ಇದೆ. ಹಾಗಾಗಿ ಪಕ್ಷೇತರರಿಗೆ ಭಾರಿ ಬೇಡಿಕೆ ಬಂದಿದೆ. ಸದ್ಯದ ಮೀಸಲಾತಿಯಿಂದ ರಾಜಕೀಯ ತೀವ್ರ ಕುತೂಹಲದ ಘಟ್ಟ ತಲುಪಿದೆ. ಶಾಸಕಿ ರೂಪಾಲಿ ಹಾಗೂ ಮಾಜಿ ಶಾಸಕ ಸತೀಶ ಸೈಲ್ ನಡುವೆ ಕಸರತ್ತು ನಡೆಯಲಿದ್ದು, ಯಾರು ಗೆಲ್ಲುವರು ಎಂಬುದನ್ನು ಕಾದು ನೋಡಬೇಕಿದೆ.

    ಒಟ್ಟು 23 ವಾರ್ಡ್​ಗಳನ್ನು ಹೊಂದಿರುವ ಅಂಕೋಲಾದಲ್ಲಿ ಕಾಂಗ್ರೆಸ್ 10, ಬಿಜೆಪಿ 8 ಸ್ಥಾನ ಗೆದ್ದುಕೊಂಡಿದೆ. ಐವರು ಪಕ್ಷೇತರರಿದ್ದಾರೆ. ಪಕ್ಷೇತರರನ್ನು ಸೆಳೆಯಲು ಕಾಂಗ್ರೆಸ್ ಸಾಕಷ್ಟು ಕಸರತ್ತು ಮಾಡುತ್ತಿದೆ. ಸಫಲವಾದರೆ ವಿಶ್ವನಾಥ ತುಕ್ಕಪ್ಪ ನಾಯ್ಕ ಅಧ್ಯಕ್ಷ ಸ್ಥಾನವೇರಲು ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಪಕ್ಷೇತರರ ಬೆಂಬಲ ಪಡೆದು, ಶಾಸಕಿ ಹಾಗೂ ಸಂಸದರ ಮತಗಳ ಸಹಾಯ ಪಡೆದು ಅಧಿಕಾರ ಹಿಡಿಯುವ ಯತ್ನ ನಡೆಸಿದೆ. ಬಿಜೆಪಿ ಬಹುಮತ ಗಳಿಸುವಲ್ಲಿ ಯಶಸ್ವಿಯಾದರೆ ಜಯಾ ಬಾಲಕೃಷ್ಣ ನಾಯ್ಕ, ಶಾಂತಲಾ ನಾಡಕರ್ಣಿ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದಾರೆ. ಎರಡೂ ಪಕ್ಷಗಳು ಪಕ್ಷೇತರಿಗೆ ಹಾಗೂ ಅಸಮಾಧಾನ ಶಮನ ಮಾಡಲು ಉಪಾಧ್ಯಕ್ಷ ಸ್ಥಾನ ಮೀಸಲಿಡಲು ತೀರ್ವನಿಸಿವೆ.

    ಶಿರಸಿಯ ಗದ್ದುಗೆ ವೀಣಾಗೆ: 31 ವಾರ್ಡ್​ಗಳನ್ನು ಹೊಂದಿರುವ ಶಿರಸಿ ನಗರಸಭೆಯಲ್ಲಿ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ನಾಲ್ವರು ಪಕ್ಷೇತರರಿದ್ದಾರೆ. ಆದರೆ, ಎಲ್ಲರಿಗಿಂತ ಜಾಸ್ತಿ ಅಂದರೆ 17 ಸದಸ್ಯ ಬಲ ಹೊಂದಿರುವ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಪಕ್ಷದಲ್ಲಿ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ಇದೆ.

    ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದು, ಗಣಪತಿ ನಾಯ್ಕ, ಆನಂದ ಸಾಲೇರ, ರಘು ಶೆಟ್ಟಿ, ನಾಗರಾಜ ನಾಯ್ಕ ಅವರು ಪ್ರಬಲ ಆಕಾಂಕ್ಷಿಗಳು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಮೂರನೇ ಬಾರಿಗೆ ಆಯ್ಕೆಯಾದ ವೀಣಾ ಶೆಟ್ಟಿ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ.

    ಹಳಿಯಾಳದಲ್ಲಿ ರಾಜಕೀಯ ಬಿರುಸು: ಹಳಿಯಾಳ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ ಕಾಂಗ್ರೆಸ್ ಪಡಸಾಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. 23 ಸ್ಥಾನಗಳನ ಪೈಕಿ ಬಿಜೆಪಿ 7, ಜೆಡಿಎಸ್ 1, ಹಾಗೂ ಒಬ್ಬ ಪಕ್ಷೇತರ ಗೆದ್ದಿದ್ದಾರೆ. ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದು, ಅಜರ ಆರ್. ಬಸರಿಕಟ್ಟಿ, ನವೀನ ಕಾಟ್ಕರ, ಫಯಾಜ್ ಶೇಖ್, ನುಸ್ರತಜಹಾ ಬಸಾಪುರ, ದ್ರೌಪದಿ ಅಗಸರ ಆಕಾಂಕ್ಷಿಗಳಾಗಿದ್ದಾರೆ. ಅಜರ್ ಬಗ್ಗೆ ಕೈ ಹೈಕಮಾಂಡ್ ಒಲವಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ದ್ರೌಪದಿ ಅಗಸರ ಅವರ ಹೆಸರು ಕೇಳಿಬರುತ್ತಿದೆ. ಪುರಸಭೆಗೆ ಹೊಸ ಯೋಜನೆಗಳು ಬರುತ್ತಿದ್ದು, ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಕ್ಲೀನ್ ಹ್ಯಾಂಡ್ ಬೇಕು ಎಂಬುದು ಆರ್.ವಿ. ದೇಶಪಾಂಡೆ ಹಾಗೂ ಘೊಟ್ನೇಕರ್ ಅವರ ಅಭಿಮತ.

    ಕಾರವಾರಕ್ಕೆ ಯಾರು ಸರದಾರ?: ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ11 ಸ್ಥಾನ ಪಡೆದುಕೊಳ್ಳುವ ಮೂಲಕ 31 ವಾರ್ಡ್​ಗಳಿರುವ ಕಾರವಾರ ನಗರಸಭೆ ಆಡಳಿತ ಅತಂತ್ರವಾಗಿದೆ. ಜೆಡಿಎಸ್​ನ 4 ಹಾಗೂ 5 ಜನ ಪಕ್ಷೇತರು ಕಿಂಗ್ ಮೇಕರ್​ಗಳಾಗಿದ್ದಾರೆ.

    2018 ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಇದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡಲಿದೆ ಎಂಬುದರ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ಗಾದಿ ನಿಗದಿಯಾಗಲಿದೆ. ಸದ್ಯ ಬಿಜೆಪಿ 11ರ ಜತೆ ಇನ್ನಿಬ್ಬರು ಪಕ್ಷೇತರರನ್ನು ಅಧಿಕೃತವಾಗಿ ಸೇರಿಸಿಕೊಂಡು ಬಲವನ್ನು 13 ಕ್ಕೆ ಏರಿಸಿಕೊಂಡಿದೆ. ಇನ್ನೂ ಮೂವರು ಪಕ್ಷೇತರರನ್ನು ಸೆಳೆದು, ಶಾಸಕ, ಸಂಸದರ ಮತ ಪಡೆದು ಗಾದಿ ಹಿಡಿಯುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಕೂಡ ಜೆಡಿಎಸ್ ಮತ್ತು ಪಕ್ಷೇತರ ಬೆಂಬಲ ಪಡೆದು ಅಧಿಕಾರಕ್ಕಾಗಿ ಪೈಪೋಟಿ ನಡೆಸಿದೆ. ಈ ನಡುವೆ ಅಧ್ಯಕ್ಷ ಸ್ಥಾನ ತಮಗೆ ಬಿಟ್ಟುಕೊಟ್ಟರೆ ಬೆಂಬಲ ನೀಡುವುದಾಗಿ ಜೆಡಿಎಸ್ ಬೇಡಿಕೆ ಇಟ್ಟಿದ್ದರಿಂದ ಪೈಪೋಟಿ ಇನ್ನಷ್ಟು ಹೆಚ್ಚಿದೆ. ಸದ್ಯ ಹಿಂದುಳಿದ ಅ ವರ್ಗಕ್ಕೆ ಅಧ್ಯಕ್ಷ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ಮೂರೂ ಪಕ್ಷಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.

    ಆಕಾಂಕ್ಷಿಗಳ ಪಟ್ಟಿ ಉದ್ದ: ಮುಂಡಗೋಡ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ತೆರೆದುಕೊಂಡಿದೆ. ಒಟ್ಟು 19ವಾರ್ಡ್​ಗಳ ಪಪಂನಲ್ಲಿ ಕಾಂಗ್ರೆಸ್ 9 ಸ್ಥಾನ ಗಳಿಸಿದ್ದರೆ, ಬಿಜೆಪಿ 10 ಸ್ಥಾನ ಪಡೆದು ಅಧಿಕಾರ ಹಿಡಿಯಲು ಅರ್ಹವಾಗಿದೆ. ಶಿವರಾಮ ಹೆಬ್ಬಾರ ಕಾಂಗ್ರೆಸ್​ನಿಂದ ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್​ನಲ್ಲಿರುವ ಹೆಬ್ಬಾರ ಬೆಂಬಲಿತ ಕೆಲ ಸದಸ್ಯರೂ ಬಿಜೆಪಿಗೆ ಬೆಂಬಲ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೇ ತಡೆ ಇಲ್ಲ. ಆದರೆ, ಬಿಜೆಪಿಯಲ್ಲಿರುವ ಪೈಪೋಟಿಯಿಂದ ಅಲ್ಲಿನ ಸದಸ್ಯರು ಬಂಡಾಯವೆದ್ದು, ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಆಶಾಭಾವನೆಯಲ್ಲಿ ಕಾಂಗ್ರೆಸ್ ಇದೆ.

    ಬಿಜೆಪಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಕುಸುಮಾ ಹಾವಣಗಿ, ರೇಣುಕಾ ಹಾವೇರಿ ಮತ್ತು ರಾಜೇಶ್ವರಿ ಅಂಡಗಿ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಚಲವಾದಿ, ಮಂಜುನಾಥ ಹರಮಲಕರ ಮತ್ತು ಶೇಖರ ಲಮಾಣಿ ಆಕಾಂಕ್ಷಿಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts