More

    ನಗರಸಭೆ ಕಟ್ಟಡದಲ್ಲಿ ಕುಡುಕರ ಕಾರುಬಾರು!

    ರಾಣೆಬೆನ್ನೂರ : ಇಲ್ಲಿಯ ನೆಹರು ಮಾರುಕಟ್ಟೆಯ ನಗರಸಭೆ ವಾಣಿಜ್ಯ ಮಳಿಗೆಗಳ ಕಟ್ಟಡದಲ್ಲಿ ಮದ್ಯ ಸೇವನೆ ಮಾಡುವವರ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಸ್ಥರು ಬೇಸತ್ತು ಹೋಗಿದ್ದಾರೆ.

    ನಗರಸಭೆ ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ವ್ಯಾಪಾರಸ್ಥರು, ಹೆಚ್ಚಾಗಿ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಮಳಿಗೆಗಳನ್ನು ಗೋದಾಮು ಮಾಡಿಕೊಂಡಿದ್ದಾರೆ. ಹೀಗಾಗಿ, ಜನಸಂದಣಿ ಹೆಚ್ಚಾಗಿ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮದ್ಯ ವ್ಯಸನಿಗಳು ಮಳಿಗೆಗಳ ಕಟ್ಟೆಗಳ ಮೇಲೆ ಕುಳಿತು ಹಗಲು-ರಾತ್ರಿ ಎನ್ನದೇ ಮದ್ಯ ಸೇವನೆ ಮಾಡುತ್ತಿದ್ದಾರೆ. ಮಳಿಗೆಗಳ ಕಟ್ಟೆಗಳನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ.

    ಈ ಭಾಗದಲ್ಲಿ ಎರಡು ಪಾರ್ಸಲ್ ನೀಡುವ ಮದ್ಯದ ಅಂಗಡಿಗಳಿವೆ. ಹೀಗಾಗಿ, ಇಲ್ಲಿ ಮದ್ಯ ಖರೀದಿಸುವ ಮದ್ಯ ವ್ಯಸನಿಗಳು ಪಕ್ಕದ ಮಳಿಗೆಗಳ ಎದುರು ಕುಳಿತು ಸೇವನೆ ಮಾಡುತ್ತಿದ್ದಾರೆ. ಇವರ ಹಾವಳಿಯಿಂದಾಗಿ ಮಾರುಕಟ್ಟೆಗೆ ಬರುವ ಜನತೆ ಈ ಮಾರ್ಗವಾಗಿ ಓಡಾಡುವುದನ್ನೇ ಬಿಟ್ಟಿದ್ದಾರೆ.

    ಮದ್ಯ ಸೇವಿಸಿ ಪಾಕೀಟ್​ಗಳನ್ನು ರಸ್ತೆಯಲ್ಲೇ ಎಸೆದು ಹೋಗುತ್ತಿದ್ದಾರೆ. ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವ ಕಾರಣ ಸಂಪೂರ್ಣ ಮಾರುಕಟ್ಟೆ ಗಬ್ಬು ನಾರುತ್ತಿದೆ. ಹೀಗಾಗಿ, ಜನತೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ.

    ನಿತ್ಯವೂ ಮಾರುಕಟ್ಟೆ ಸ್ವಚ್ಛಗೊಳಿಸುವ ನಗರಸಭೆ ಸಿಬ್ಬಂದಿಯೂ ಇತ್ತ ಕಡೆ ತಿರುಗಿ ನೋಡುತ್ತಿಲ್ಲ. ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ, ಮಾರುಕಟ್ಟೆಯ ರಸ್ತೆ ಬದಿ ಎಲ್ಲಿ ನೋಡಿದರೂ ಮದ್ಯದ ಪಾಕೀಟ್​ಗಳು ಬಿದ್ದಿರುತ್ತವೆ. ಸ್ವಚ್ಛತೆ ಮಾಡುವಂತೆ ನಗರಸಭೆ ಸಿಬ್ಬಂದಿಗೆ ತಿಳಿಸಿದರೂ ಯಾರೊಬ್ಬರೂ ಬರುವುದಿಲ್ಲ ಎಂಬುದು ಇಲ್ಲಿಯ ವ್ಯಾಪಾರಸ್ಥರ ಆರೋಪವಾಗಿದೆ.

    ನೆಹರು ಮಾರುಕಟ್ಟೆ ನಗರಸಭೆ ಮಳಿಗೆ ಎದುರು ಮದ್ಯ ಸೇವಿಸುತ್ತಿರುವವರ ಕುರಿತು ಪೊಲೀಸರಿಗೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸ್ವಚ್ಛತೆ ಕಾಪಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ನಿತ್ಯವೂ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts