More

    ನಗರಸಭೆ ಎದುರು ಸದಸ್ಯರ ಧರಣಿ

    ರಾಣೆಬೆನ್ನೂರ: ನಗರದಲ್ಲಿ ನಡೆಯುತ್ತಿರುವ 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಗರಸಭೆ ಎದುರು ಕಾಂಗ್ರೆಸ್ ಸದಸ್ಯರು ಶುಕ್ರವಾರ ಧರಣಿ ನಡೆಸಿದರು.

    ಕಾಮಗಾರಿ ಕಳಪೆಯಾಗಿರುವ ಕುರಿತು ಜಿಲ್ಲಾಡಳಿತಕ್ಕೆ ಹಾಗೂ ಶಾಸಕರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಅಮೃತ ಸಿಟಿ ಯೋಜನೆಯಡಿ 118 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಯೋಜನೆಯ ಪ್ರಕಾರ, ಮೂರು ಅಡಿ ಆಳ ಮತ್ತು 3 ಅಡಿ ಅಗಲದಲ್ಲಿ ಪೈಪ್​ಲೈನ್ ಅಳವಡಿಸಬೇಕು. ಆದರೆ, ಚರಂಡಿಗಳ ನಡುವೆ ಮತ್ತು ನೆಲದಲ್ಲಿ ಕಾಣುವಂತೆ ಪೈಪ್​ಲೈನ್ ಅಳವಡಿಸಲಾಗುತ್ತಿದೆ. ನಗರದಲ್ಲಿ 160 ಕಿ.ಮೀ. ರಸ್ತೆ ಅಗೆಯಲಾಗಿದೆ. ಇವುಗಳ ದುರಸ್ತಿ ಕಾರ್ಯವೂ ಕಳಪೆಯಾಗಿದೆ ಎಂದು ಆರೋಪಿಸಿದರು.

    ಕಾಮಗಾರಿ ಕಳಪೆ ಎಂದು ಎರಡು ತಿಂಗಳ ಹಿಂದೆ ನಗರಸಭೆಯ ಎಲ್ಲ ಸದಸ್ಯರು ಸಹಿ ಮಾಡಿದ್ದು, ನಗರಸಭೆ ಆಯುಕ್ತರಿಗೆ, ಕರ್ನಾಟಕ ನಗರ ಮೂಲಸೌಕರ್ಯ ಹಣಕಾಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ, ಜಿಲ್ಲಾಧಿಕಾರಿಗೆ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವ ಅಧಿಕಾರಿಗಳೂ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆದ್ದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಬೇಕು. ಕಳಪೆಯಾಗಿರುವ ಕಾಮಗಾರಿಯನ್ನು ಪುನಃ ಮಾಡಲು ಆದೇಶಿಸಬೇಕು. ಅಲ್ಲಿಯವರೆಗೆ ಧರಣಿ ಹಿಂಪಡೆಯುವುದಿಲ್ಲ. ನಿತ್ಯವೂ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಧರಣಿ ಮುಂದುವರಿಯಲಿದೆ. ಜಿಲ್ಲಾಧಿಕಾರಿ ಸ್ಪಂದಿಸದಿದ್ದರೆ, ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

    ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ಶೇಖಪ್ಪ ಹೊಸಗೌಡರ, ಜಯಶ್ರೀ ಪೀಸೆ, ಚಂಪಾ ರಮೇಶ ಬಿಸಲಹಳ್ಳಿ, ನೀಲಮ್ಮ ಮಾಕನೂರು, ನೂರಲ್ಲಾ ಖಾಜಿ, ಮೆಹಬೂಬ್ ಮುಲ್ಲಾ, ಸುಮಾ ರವಿ ಹುಚ್ಚಗೊಂಡರ, ಸುವರ್ಣ ಗಿರೀಶ ಸುಳ್ಳಿಕೇರಿಮಠ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts