More

    ನಗರಸಭೆ ಆದಾಯ ಹೆಚ್ಚಿಸಲು ಕ್ರಮ

    ಶಿರಸಿ: ದ್ವೈವಾರ್ಷಿಕವಾಗಿ ನಡೆಯುವ ಇಲ್ಲಿನ ಮಾರಿಕಾಂಬಾ ಜಾತ್ರೆಯಲ್ಲಿ ಕಂದಾಯ ಇಲಾಖೆ ಹಾಗೂ ನಗರಸಭೆಗೆ ಕಡ್ಡಾಯ ಆದಾಯ ತರಲು ಜಿಲ್ಲಾಡಳಿತ ಕ್ರಮ ವಹಿಸಿದೆ. ದೇವಾಲಯ ಜಾತ್ರಾ ಸಮಿತಿಗೆ ತಾತ್ಕಾಲಿಕವಾಗಿ ನೀಡುವ ಜಾಗದಿಂದ ಬರುವ ಬಾಡಿಗೆ ಮೊತ್ತದಲ್ಲಿ ಶೇ. 25ರಷ್ಟನ್ನು ಇವೆರಡೂ ಇಲಾಖೆಗೆ ನೀಡುವಂತೆ ಸಮಿತಿಗೆ ಆದೇಶಿಸಲಾಗಿದೆ.

    ಮಾ. 3ರಿಂದ 11ರವರೆಗೆ ಅದ್ದೂರಿಯಾಗಿ ನಡೆಯುವ ಮಾರಿಜಾತ್ರೆಗೆ ಹೆಚ್ಚುವರಿಯಾಗಿ ನಗರಸಭೆ ಮಾಲೀಕತ್ವದ 4731 ಚದರ ಅಡಿ ಹಾಗೂ ಕಂದಾಯ ಇಲಾಖೆ ಮಾಲೀಕತ್ವದ 8696 ಚದರ ಅಡಿ ಸೇರಿ ಒಟ್ಟು 13427 ಚದರ ಅಡಿ ಜಾಗವನ್ನು ನೆಲಬಾಡಿಗೆ ಆಧಾರದಲ್ಲಿ ತಾತ್ಕಾಲಿಕ ಲೀಜ್ ನೀಡುವಂತೆ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿತ್ತು. ಜತೆಗೆ, ನಗರಸಭೆಯಿಂದಲೂ ಈ ಹಿಂದೆ ಮನವಿ ನೀಡಲಾಗಿತ್ತು. ಇದೀಗ ದೇವಾಲಯ ಸಮಿತಿ ಸಲ್ಲಿಸಿದ ಅರ್ಜಿಗೆ ಜಿಲ್ಲಾಧಿಕಾರಿ ಕೆ. ಹರೀಶಕುಮಾರ ಒಪ್ಪಿಗೆ ಸೂಚಿಸಿದ್ದು, ಲೀಜ್ ಪಡೆದ ಜಾಗದ ಶೇ. 25ರಷ್ಟು ಬಾಡಿಗೆ ಹಣವನ್ನು ನಗರಸಭೆ ಹಾಗೂ ಕಂದಾಯ ಇಲಾಖೆಗೆ ನೀಡಲು ಆದೇಶ ನೀಡಿದ್ದಾರೆ.

    ಜಾತ್ರೆ ದಿನಗಳಲ್ಲಿ ದೇವಾಲಯಕ್ಕೆ ಕನಿಷ್ಠ 4 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ಬರುತ್ತದೆ. ಆದರೆ, ನಿರ್ವಹಣೆಗಾಗಿ ನಗರಸಭೆಯಿಂದ ಸಾಕಷ್ಟು ಹಣ ವೆಚ್ಚವಾಗುತ್ತದೆ. ಈ ಅಂತರ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ನಗರಸಭೆ ಮಾಲೀಕತ್ವದ ಪ್ರತಿ ಚದರ ಅಡಿಗೆ 100 ರೂ ಅಥವಾ ಶೇ. 15ರಷ್ಟು ಹೆಚ್ಚಳ ಇವೆರಡರಲ್ಲಿ ಯಾವುದು ಗರಿಷ್ಠ ಎಂಬುದನ್ನು ನೋಡಿ ಬಾಡಿಗೆ ನಿಗದಿಪಡಿಸಬೇಕು ಎಂದೂ ಅವರು ಆದೇಶದಲ್ಲಿ ಸೂಚಿಸಿದ್ದಾರೆ. ದೇವಿ ಗದ್ದುಗೆ, ಜಾತ್ರೆ ಮಂಟಪ ಹೊರತುಪಡಿಸಿ ಉಳಿದ ಕಡೆಗೆ ಶೇ. 25ರಷ್ಟು ಬಾಡಿಗೆ ಮೊತ್ತ ತುಂಬಲು ನಿಗದಿಪಡಿಸಿ ದೇವಾಲಯದ ಆಡಳಿತ ಮಂಡಳಿಗೆ ಆದೇಶಿಸಿದ್ದಾರೆ. ಕಳೆದ ಹಲವು ಜಾತ್ರೆಗಳಲ್ಲಿ ನಗರಸಭೆ ಹಾಗೂ ಸರ್ಕಾರಿ ಜಾಗವನ್ನು ಲೀಜ್ ಪಡೆಯುತ್ತಿದ್ದ ಮಾರಿಕಾಂಬಾ ದೇವಾಲಯ ಸಮರ್ಪಕವಾಗಿ ಹಣ ಪಾವತಿ ಮಾಡದೆ ಸಾಕಷ್ಟು ಗೊಂದಲ, ವಾದ-ವಿವಾದಗಳು ನಡೆದಿದ್ದವು. ಕಾರಣ ಈ ಬಾರಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಬಾಡಿಗೆ ಮೊತ್ತದ ಶೇ. 5ರಷ್ಟು ಹಣ ಕಡ್ಡಾಯ ಪಾವತಿಗೆ ಖುದ್ದು ಜಿಲ್ಲಾಧಿಕಾರಿಯೇ ಆದೇಶಿಸಿದ್ದಾರೆ.

    ಮಾರಿಜಾತ್ರೆ ಸಂದರ್ಭದಲ್ಲಿ ನಗರಸಭೆಗೆ 50ರಿಂದ 60 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ, ಪ್ರತಿಯಾಗಿ ನಗರಸಭೆಗೆ ಹೆಚ್ಚಿನ ಆದಾಯ ಸಿಗುತ್ತಿಲ್ಲ. ಎಲ್ಲ ಕಾರ್ಯವನ್ನೂ ನಗರಸಭೆ ಮಾಡಬೇಕಿದ್ದು, ಹಣದ ಅವಶ್ಯಕತೆಯೂ ಇರುತ್ತದೆ. ಹಾಗಾಗಿ ಮಾರಿಕಾಂಬಾ ದೇವಾಲಯದ ವತಿಯಿಂದ ನಗರಸಭೆಗೆ ನಿರ್ವಹಣಾ ವೆಚ್ಚ ಹಾಗೂ ಇತರ ಖರ್ಚುಗಳನ್ನು ಸರಿದೂಗಿಸಲು ಹೆಚ್ಚಿನ ಹಣ ನಗರಸಭೆಗೆ ಬರುವಂತಾಗಬೇಕು ಎಂದು ಜಿಲ್ಲಾಧಿಕಾರಿಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಇದೀಗ ಅದಕ್ಕೆ ಪುರಸ್ಕಾರ ಸಿಕ್ಕಿದ್ದು, ಉತ್ತಮ ಬೆಳವಣಿಗೆಯಾಗಿದೆ. ಶ್ರೀಕಾಂತ ತಾರಿಬಾಗಿಲು ನಗರಸಭೆ ಸದಸ್ಯ

    ಜಾತ್ರೆ ನಡೆಯುವ ಸ್ಥಳದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರ ಸುರಕ್ಷಿತ ಸಂಚಾರ ಹಾಗೂ ಪೊಲೀಸ್ ವಾಹನ, ಆಂಬುಲೆನ್ಸ್ ಓಡಾಟಕ್ಕೆ ರಸ್ತೆ ಖುಲ್ಲಾ ಇಡಬೇಕು. ಅಂಗಡಿ ಬಾಡಿಗೆ ನೀಡುವ ಸ್ಥಳದಲ್ಲಿ ಹೊರಗಿನಿಂದ ಬಂದ ಅಂಗಡಿಕಾರರಿಗೆ ದೌರ್ಜನ್ಯವಾಗದಂತೆ ನೋಡಬೇಕು. ಸ್ಥಳದಲ್ಲಿ ಯಾವುದೇ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪೊಲೀಸ್, ಅಗ್ನಿಶಾಮಕ ದಳದ ಅನುಮತಿ, ಮಾರ್ಗದರ್ಶನ ಪಡೆಯಬೇಕು. ಜನರು ಓಡಾಟಕ್ಕೆ ಅನುಕೂಲವಾಗುವ ರೀತಿ ಅಂಗಡಿ ಮುಂಗಟ್ಟು ರಚಿಸಬೇಕು. ಭೂಬಾಡಿಗೆಯನ್ನು ನಗರಸಭೆಗೆ ಮುಂಗಡ ಡಿಡಿ ರೂಪದಲ್ಲಿ ನೀಡಬೇಕು. ಯಾವದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಹಂಗಾಮಿ ಗುತ್ತಿಗೆ ರದ್ದುಪಡಿಸಲಾಗುವುದು. | ಕೆ.ಹರೀಶಕುಮಾರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts