More

    ನಕಲಿ ಚಿನ್ನ ಮಾರಾಟಗಾರರ ಬಂಧನ

    ಹುಬ್ಬಳ್ಳಿ: ಕಡಿಮೆ ಬೆಲೆಗೆ ಹಳೆಯ ಚಿನ್ನ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 1.10 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಯುವಕರನ್ನು ಘಟನೆ ನಡೆದ 12 ಗಂಟೆಯೊಳಗೆ ಬಂಧಿಸುವಲ್ಲಿ ಅಶೋಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗದ ಗೌತಮನಗರ ನಿವಾಸಿ ಅಜಯ ಲೋಕಪ್ಪ (26) ಹಾಗೂ ವಿಜಯ ಶಾಕಿಂದರ್ (36) ಬಂಧಿತ ಆರೋಪಿಗಳು. ಅವರಿಂದ 1.10 ಲಕ್ಷ ರೂ., 1 ಬೈಕ್ ಹಾಗೂ 2 ಮೊಬೈಲ್​ಫೋನ್ ವಶಪಡಿಸಿಕೊಳ್ಳಲಾಗಿದೆ. ವಿಠ್ಠಲ ವೆಂಕಪ್ಪ ಗಲವಿ ವಂಚನೆಗೀಡಾದವರು.

    ತಮ್ಮ ಬಳಿ ಹಳೆಯ ಬಂಗಾರದ ಸರಗಳಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ವಿಠ್ಠಲ ಅವರಿಗೆ ಕೆಲ ಚಿನ್ನದ ಮಾದರಿ ನೀಡಿ ನಂಬಿಸಿದ್ದರು. ಚಿನ್ನದ ಗುಂಡಿನ ಸರ ಕೊಡುವುದಾಗಿ ಮಾ. 9ರಂದು ರಾತ್ರಿ ಇಲ್ಲಿನ ಗುರುಕುಲ ಬಳಿ ಕರೆಸಿಕೊಂಡಿದ್ದರು. ಆ ವೇಳೆ ಸರ ತೋರಿಸಿದಂತೆ ನಾಟಕವಾಡಿ ವಿಠ್ಠಲ ಅವರ ಬಳಿ ಇದ್ದ 1.10 ರೂ. ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದರು. ಈ ಕುರಿತು ವಿಠ್ಠಲ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಕೂಡಲೆ ಕಾರ್ಯಪ್ರವೃತ್ತರಾದ ಇನ್ಸ್​ಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಪಿಎಸ್​ಐ ಶ್ರೀದೇವಿ ಜಿ.ಎಸ್., ಎಎಸ್​ಐ ಆರ್.ಎಸ್. ಮರಿಗೌಡರ, ಸಿಬ್ಬಂದಿ ಸುರೇಶ ಬೂದಣ್ಣವರ, ಅಭಯ ಕಟ್ನಳ್ಳಿ, ಗಿರೀಶ ಕುಲಿಗೋಡ, ಡಿ.ಎಸ್. ಪಾಟೀಲ, ಮೈಲಾರಿ ಹಂಚಿನಾಳ, ಮಂಜುಳಾ ರಾಮಣ್ಣವರ, ಸುಧಾಕರ ನೇಸೂರ ತಂಡದಲ್ಲಿದ್ದರು.

    ದಾರಿ ತಪ್ಪಿದ್ದ ವಂಚಕರು : ಆರೋಪಿಗಳಿಬ್ಬರೂ ರಾತ್ರಿ ಹಣ ಕಿತ್ತುಕೊಂಡು ಬೈಕ್ ಏರಿ ಶಿವಳ್ಳಿ ರಸ್ತೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಪೊಲೀಸರು ಹಿಂಬಾಲಿಸುತ್ತಿರುವ ಕುರಿತು ಸಂಶಯಗೊಂಡ ಆರೋಪಿಗಳು ಮುಂದೆ ದಾರಿ ಕಾಣದೇ ಜಮೀನೊಂದರಲ್ಲಿ ರಾತ್ರಿ ಕಳೆದಿದ್ದರು. ಮಂಗಳವಾರ ಬೆಳಗ್ಗೆ ರಸ್ತೆಗಿಳಿಯುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts