More

    ನಕಲಿ ಗೊಬ್ಬರ ಜಾಲ ಬಯಲಿಗೆಳೆದ ರೈತರು

    ರೋಣ : ನಕಲಿ (ಡಿಎಪಿ) ರಸಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲದ ಮೂವರನ್ನು ಗೊಬ್ಬರ ಚೀಲ ತುಂಬಿದ್ದ ಲಾರಿ ಸಮೇತ ಚಾಣಾಕ್ಷತನದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಸವಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ರೈತರಿಗೆ ನಕಲಿ ಡಿಎಪಿ ಗೊಬ್ಬರ ಪೂರೈಕೆ ಮಾಡುತ್ತಿದ್ದ ಹಿರಿಯೂರಿನ ಸಿ. ಮಂಜುನಾಥ, ತಿಪ್ಪೇಸ್ವಾಮಿ, ಬಾಳಮೃಗನ್ ಎಂಬುವರನ್ನು 475 ಚೀಲ ಗೊಬ್ಬರ ತುಂಬಿದ್ದ ಲಾರಿ ಸಮೇತ ಪೊಲೀಸರಿಗೆ ಒಪ್ಪಿಸಲಾಗಿದೆ.

    ಆರೋಪಿಗಳು ತಾಲೂಕಿನ ಸವಡಿ, ಚಿಕ್ಕಮಣ್ಣೂರ, ಹಿರೇಮಣ್ಣೂರ ಹಡಗಲಿ, ಮಲ್ಲಾಪೂರ, ಹೊನ್ನಾಪೂರ ಸೇರಿ ಅನೇಕ ಗ್ರಾಮಗಳ ರೈತರಿಗೆ ಪ್ರತಿ ಚೀಲ ಕ್ಕೆ (50 ಕೆಜಿ) 1,380 ರೂ. ನಂತೆ ಒಟ್ಟು 900ಕ್ಕೂ ಹೆಚ್ಚು ಚೀಲ ನಕಲಿ ಗೊಬ್ಬರ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

    ರೈತರಾದ ಶ್ರೀಶೈಲ ಇಟಗಿ ಹಾಗೂ ಆನಂದ ನರೇಗಲ್ ಮಾತನಾಡಿ, ರೈತರಿಗೆ ಡಿಎಪಿ ಎಂದರೆ ಬಂಗಾರವಿದ್ದಂತೆ. ಈ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಸವಡಿ ಗ್ರಾಮಕ್ಕೆ ಹಿರಿಯೂರ ಪಟ್ಟಣದವರು ಎನ್ನಲಾದ ಮಂಜುನಾಥ ಹಾಗೂ ಸ್ವಾಮಿ ಬಂದು ಏಳು ಲಕ್ಷ ರೂ. ಮೌಲ್ಯದ 500 ಚೀಲ ಡಿಎಪಿ ಗೊಬ್ಬರ ಮಾರಾಟ ಮಾಡಿದ್ದರು. ಗೊಬ್ಬರ ಪಡೆದ ರೈತರು ಜಮೀನಿಗೆ ಹಾಕಿದಾಗ ಇದು ನಕಲಿ ಡಿಎಪಿ ಗೊಬ್ಬರ ಎಂಬುದು ತಿಳಿದು ಬಂತು. ಆಗ ನಾವೆಲ್ಲ ಸೇರಿ ಹಿರಿಯೂರಿನ ಮಂಜುನಾಥ ಹಾಗೂ ಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ‘ಇನ್ನೂ 500 ಚೀಲ ಗೊಬ್ಬರ ಬೇಕಿದೆ ಎಂದು ತಿಳಿಸಿದೆವು. ಅದರಂತೆ ಶನಿವಾರ ನಕಲಿ ಗೊಬ್ಬರ ನೀಡಲು ಬಂದಿದ್ದ ವೇಳೆ ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದೆವು ಎಂದು ರೈತರು ತಿಳಿಸಿದರು.

    ಸವಡಿ ಗ್ರಾಮಕ್ಕೆ ಮಾರಾಟ ಮಾಡಲು ತಂದಿದ್ದ ಡಿಎಪಿ ಗೊಬ್ಬರ ನಕಲಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ರೋಣ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ. ಅಲ್ಲದೆ, ರೈತರು ಯಾವುದೇ ಕಾರಣಕ್ಕೆ ಅನಧಿಕೃತ ಮಾರಾಟಗಾರರಿಂದ ರಸಗೊಬ್ಬರ ಖರೀದಿಸಬಾರದು ಹಾಗೂ ಖರೀದಿಸಿದ ರಸಗೊಬ್ಬರದ ರಸೀದಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದ್ದೇವೆ. ಆದರೂ ಕೆಲವೆಡೆ ರೈತರು ಮೋಸ ಹೋಗುತ್ತಿದ್ದಾರೆ.
    | ರವೀಂದ್ರಗೌಡ ಪಾಟೀಲ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

    ಸವಡಿ ಗ್ರಾಮದಲ್ಲಿ ನಕಲಿ ಡಿಎಪಿ ಗೊಬ್ಬರ ಮಾರಾಟ ಮಾಡುತ್ತಿದ್ದ ಕುರಿತು ರೋಣ ಕೃಷಿ ಇಲಾಖೆಯ ಕೃಷಿ ಅಧಿಕಾರಿ ವಿರೂಪಾಕ್ಷ ಶಾಂತಗೇರಿ ಅವರು ನೀಡಿದ ದೂರಿನನ್ವಯ ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹಿರಿಯೂರ ಪಟ್ಟಣದ ನಿವಾಸಿ ಸಿ. ಮಂಜುನಾಥ, ತಿಪ್ಪೇಸ್ವಾಮಿ, ಬಾಳಮೃಗನ್ ಎಂಬುವರನ್ನು ಬಂಧಿಸಲಾಗಿದೆ. ಇವರು ಮಾರಾಟಕ್ಕೆ ತಂದಿದ್ದ (50) ಕೆಜಿ ತೂಕದ 475 ಚೀಲ ಡಿಎಪಿ ನಕಲಿ ಗೊಬ್ಬರ ಸಮೇತ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
    | ಚಂದ್ರಶೇಖರ ಹೆರಕಲ್ ಪಿಎಸ್​ಐ ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts