More

    ನಕಲಿ ಐಟಿ ಅಧಿಕಾರಿ ಅಂದರ್

    ಗದಗ: ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿ ಎಂದು ಹೇಳಿಕೊಂಡು ನಗರದ ಚಿನ್ನಾಭರಣ ಮಳಿಗೆಯಲ್ಲಿ ಲಕ್ಷಾಂತರ ರೂ.ಮೌಲ್ಯದ ಬಂಗಾರ ಖರೀದಿಸಿ ಹಣ ನೀಡದೆ ವಂಚನೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ ಮೂಲದ ಎಂಬಿಎ (ಫೈನಾನ್ಸ್) ಪದವೀಧರ ವಿಶಾಲ ರಾಜಕುಮಾರ ನೀಲಂಗೆ (27) ಎಂಬಾತನನ್ನು ಬಂಧಿಸಲಾಗಿದೆ. ಜುಲೈ 20ರಂದು ನಗರದ ಸ್ಟೇಶನ್ ರಸ್ತೆಯ ಲೀಲಾ ಲೆಹರ್ ಜ್ಯುವೆಲರಿ ಮಳಿಗೆಗೆ ತೆರಳಿದ್ದ ವಿಶಾಲ ನೀಲಂಗೆ ತಾನು ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ 25 ಗ್ರಾಂ ಚೈನ್, 5.61 ಗ್ರಾಂ ಕಪಲ್ ರಿಂಗ್, 4.20 ಕಪಲ್ ರಿಂಗ್ ಸೇರಿದಂತೆ ಒಟ್ಟು 1,89,220 ರೂ. ಮೌಲ್ಯದ 33.880 ಗ್ರಾಂ ಆಭರಣ ಖರೀದಿಸಿದ್ದನು. ಮೊದಲಿಗೆ ಆರ್​ಟಿಜಿಎಸ್ ಮೂಲಕ ಹಣ ಪಾವತಿಸುವುದಾಗಿ ಹೇಳಿದ್ದನು. ಬಳಿಕ ಆರ್​ಟಿಜಿಎಸ್​ನಿಂದ ಪಾವತಿ ಸಾಧ್ಯವಾಗುತ್ತಿಲ್ಲ, ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದನು. ತದನಂತರ ನಿಮ್ಮ ಖಾತೆಗೆ ಹಣ ಸಂದಾಯವಾಗಿದೆ ಎಂದು ಸುಳ್ಳು ದಾಖಲೆ ತೋರಿಸಿ ವಂಚಿಸಿದ್ದ. ಈ ಕುರಿತು ಜುಲೈ 25ರಂದು ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

    ಡಿಎಸ್​ಪಿ ಶಿವಾನಂದ ಪವಾಡಶೆಟ್ಟರ್ ನೇತೃತ್ವದಲ್ಲಿ ಶಹರ ಠಾಣೆ ಸಿಪಿಐ ಜಯಂತ್ ಗೌಳಿ, ಪಿಎಸ್​ಐ ಶರಣಬಸಪ್ಪ ಸಂಗಳದ, ಮಹಿಳಾ ಪಿಎಸ್​ಐ ಬಿ.ಟಿ. ತಳವಾರ, ಸಿಬ್ಬಂದಿ ವೈ.ಬಿ. ಪಾಟೀಲ, ಎಸ್.ಎಸ್. ಮಾವಿನಕಾಯಿ, ಯು.ಎನ್. ಸುಣಗಾರ, ಕೆ.ಡಿ. ಜಮಾದಾರ, ಪಿ.ಎಸ್. ಕಲ್ಲೂರ, ಆರ್.ಎನ್. ಬಾಲರಡ್ಡಿ, ಯು.ಎನ್. ಹೊಸಳ್ಳಿ ಅವರನ್ನೊಳಗೊಂಡು ರಚಿಸಿದ್ದ ವಿಶೇಷ ತಂಡ ವಂಚಕನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಂಚಕನ ಕೃತ್ಯಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಕಾರ್ಯ ಮುಂದುವರಿದಿದೆ ಎಂದರು.

    ವಂಚಕ ವಿಶಾಲ ನೀಲಂಗೆ ಬೆಂಗಳೂರು, ರಾಯಚೂರು ಜಿಲ್ಲೆಯ ದೇವದುರ್ಗ, ಓಡಿಶಾ ರಾಜ್ಯದ ಬ್ರಹ್ಮಪುರ, ಮಹಾರಾಷ್ಟ್ರದ ಲಾತೂರ, ಛತ್ತೀಡಗಡದ ರಾಯಪುರ ಸೇರಿ ದೇಶದ ವಿವಿಧೆಡೆ ಇಂತಹ ವಂಚನೆ ಕೃತ್ಯಗಳನ್ನು ಎಸಗಿರುವ ಬಗ್ಗೆ ಗೊತ್ತಾಗಿದೆ. ಅಲ್ಲದೆ, ಇಂತಹ ಕೃತ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬೆಂಗಳೂರು ಮತ್ತು ಒಡಿಶಾದಲ್ಲಿ ಪೊಲೀಸರ ಕೈಗೆ ಸಿಕ್ಕು ಬಂಧನಕ್ಕೊಳಗಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾನೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಶಹರ ಠಾಣೆ ಸಿಪಿಐ ಜಯಂತ್ ಗೌಳಿ, ಪಿಎಸ್ ಶರಣಬಸಪ್ಪ ಸಂಗಳದ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts