More

    ನಂದಿತು ಹೋರಾಟದ ದೀಪ

    ಕಲಬುರಗಿ: ಹುಟ್ಟು ಹೋರಾಟಗಾರ ಎಂದೇ ಹೆಸರುವಾಸಿಯಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿಪಿಎಂ ಪಕ್ಷದ ಹಿರಿಯ ಮುಖಂಡ ಮಾರುತಿ ಮಾನ್ಪಡೆ (65) ಮಂಗಳವಾರ ನಿಧನರಾದರು. ಇದರೊಂದಿಗೆ ಹೋರಾಟದ ದೀಪವೊಂದು ನಂದಿದಂತಾಗಿದೆ.
    ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ತಮ್ಮ ತತ್ವ ಸಿದ್ಧಾಂತಗಳಿಗೆ ಬದ್ದರಾಗಿದ್ದ ಮಾನ್ಪಡೆ ನಾಡಿನಲ್ಲಿ ಕೆಂಪು ಭಾವುಟದ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದರು. ಈಚೆಗೆ ಅವರಿಗೆ ನ್ಯೂಮೋನಿಯಾ ಮತ್ತು ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರದ ಸೋಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಕರೊನಾ ಪಾಸಿಟಿವ್ದಿಂದ ನೆಗೆಟಿವ್ ಸಹ ಬಂದಿತ್ತು. ಅದರೆ, ನ್ಯೂಮೊನಿಯಾ ಆಗಿದ್ದರಿಂದ ಚಿಕಿತ್ಸೆ ಮುಂದುವರೆದಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಗ್ಗೆ ಸೋಲ್ಲಾಪುರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
    ಮೂಲತಃ ಅಂಬಲಗಾದವರಾಗಿದ್ದ ಅವರು ಜೂನ್1, 1956ರಂದು ಜನಿಸಿದ್ದರು. 1997ರಲ್ಲಿ ಕಲಬುರಗಿ ಜಿಪಂ ಸದಸ್ಯರಾಗಿ ಕಮಲಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ವೇಳೆಯಲ್ಲಿ ರೈತರಿಗೆ ಜನರಿಗೆ ಅನುವು ಮಾಡಿಕೊಡುವ ಮೂಲಕ ತಮ್ಮದೆ ಆದ ಚಾಪು ಮೂಡಿಸಿದ್ದರು. ಕಮಲಾಪುರ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಮತ್ತು ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ವಿಧಾನ ಸಭೆ ಚುನಾವಣಗೆ ಸ್ಪರ್ಧಿಸಿದ್ದರು. ಒಂದು ಸಲ ಕೇವಲ 2 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಅಲ್ಲದೆ ಬೀದರ್ ಲೋಕಸಭಾ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಜಿಪಂ ಚುನಾವಣೆಗೆ ಸ್ಪರ್ಧಿಸುವ ಮುನ್ನ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ರಾಜೀನಾಮೆ ನೀಡಿ ಚುನಾವಣಗೆ ಸ್ಪರ್ಧಿಸಿದ್ದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರ ಈಚೆಗೆ ತಿದ್ದುಪಡಿ ಮಾಡಿದ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್ , ಕಾರ್ಮಿಕರ ಕಾಯ್ದೆಯ ತಿದ್ದುಪಡಿ ವಿರೋಧಿಸಿ ಕರೆ ನೀಡಿದ್ದ ಭಾರತ ಬಂದ್ ಮತ್ತು ಈಚೆಗೆ ಎಲ್ಲ ರೈತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಕಾಲಕ್ಕೆ ಹೋರಾಟದ ಮುಂಚೂಣಿಯಲ್ಲಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ನಡೆದ ರೈತರ ರ್ಯಾಲಿಯಲ್ಲಿಯೂ ಮಾರುತಿ ಮಾನ್ಪಡೆ ಭಾಗಿಯಾಗಿದ್ದರು. ಸಿಎಎ ವಿರೋಧಿಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
    ಕಳೆದ ನಾಲ್ಕು ದಶಕಗಳ ಕಾಲದಿಂದಲೂ ರೈತರ, ಕಾಮರ್ಿಕರ ಪರ ಹೋರಾಟ ಮಾಡಿಕೊಂಡಿದ್ದರು. ಕೆಂಬಾವುಟವನ್ನು ಹಿಡಿದುಕೊಂಡು ಹೋರಾಟದಲ್ಲಿಯೇ ತೊಡಗಿಸಿಕೊಂಡಿದ್ದರು. ಹೀಗಾಗಿ ಮಾನ್ಪಡೆ ಅಂದರೆ ಹೋರಾಟ, ಹೋರಾಟ ಅಂದ್ರೆ ಮಾನ್ಪಡೆ ಎಂಬಂತೆ ಆಗಿತ್ತು. ಹೀಗಾಗಿ ಅವರು ನಾಡು ಕಂಡ ಅಪರೂಪದ ಹೋರಾಟಗಾರರಲ್ಲಿ ಒಬ್ಬರು.
    ಕಮ್ಯೂನಿಷ್ಟ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ಮಾನ್ಪಡೆ ಎಂದಿಗೂ ತಮ್ಮ ನಿಲುವು ಮತ್ತು ತತ್ವ ಸಿದ್ದಾಂತದಲ್ಲಿ ರಾಜೀ ಮಾಡಿಕೊಳ್ಳಲಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ನಕಲಿ ಬೀಜ,ಗೊಬ್ಬರ ವಿರುದ್ಧ ಹೋರಾಟ ನಡೆಸಿದ್ದರ ಫಲವಾಗಿ 2002 ರಲ್ಲಿ ನಕಲಿ ಗೊಬ್ಬರ ಜಾಲ ಬೆಳಕಿಗೆ ಬಂದಿತ್ತು. ರೈತರಿಗೆ ಉಚಿವ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಕಲಬುರಗಿಯ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದಾಗ ಲಾಠಿ ಚಾಜರ್್ ಆಗಿ, ಗಾಳಿಯಲ್ಲಿ ಗುಂಡು ಹಾರಿಸಿದರು ಧ್ವನಿ ಅಡಗಿರಲಿಲ್ಲ. ಕರೊನಾ ಹಾವಳಿಯಲ್ಲಿಯೂ ಹೋರಾಟ ಮುಂದುವರೆಸಿದ್ದರು. ಅನ್ಯಾಯ ಕಂಡಲ್ಲಿ ಧ್ವನಿ ಎತ್ತುವ ಮೂಲಕ ನ್ಯಾಯ ದೊರಕಿಸಿಕೊಡಲು ತಮ್ಮದೆ ಆದ ಪ್ರಯತ್ನ ಮಾಡುತ್ತಿದ್ದರು. ಈಗ ಮಾನ್ಪಡೆ ನೆನಪು ಮಾತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts