More

    ಧೊಂಡಿಯ ವಾಘ ಪ್ರಥಮ ಸ್ವಾತಂತ್ರೃ ಹೋರಾಟಗಾರ

    ಹಾಸನ: ಬ್ರಿಟಿಷರ ವಿರುದ್ದ ಸಿಡಿದೆದ್ದು, ಹೋರಾಡಿದ ಧೊಂಡಿಯ ವಾಘ ಕರ್ನಾಟಕದ ಪ್ರಥಮ ಸ್ವಾತಂತ್ರೃ ಹೋರಾಟಗಾರನಾಗಿದ್ದು, ಸುಳ್ಳು ಇತಿಹಾಸಗಾರರ ಪುಟದಲ್ಲಿ ಕಳೆದು ಹೋಗಿದ್ದಾನೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಕ.ವೆಂ. ನಾಗರಾಜು ಹೇಳಿದರು.


    ನಗರದ ಸಂಸ್ಕೃತ ಭವನದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ‘ಹೊಯ್ಸಳ ಚಕ್ರವರ್ತಿ ಮುಮ್ಮುಡಿ ವೀರಬಲ್ಲಾಳ ಮತ್ತು ಧೊಂಡಿಯ ವಾಘ ವೀರಯೋಧ ದ್ವಯರ ಸ್ವತಂತ್ರ ಪೂರ್ವದ ಬಲಿದಾನ’ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಧೊಂಡಿಯ ನಿಜವಾದ ಕರುನಾಡಿನ ಹುಲಿಯಾಗಿದ್ದು, ಕರ್ನಾಟಕದಾದ್ಯಂತ ಬ್ರಿಟಿಷರ ವಿರುದ್ಧ ಸ್ಥಳೀಯ ರಾಜರನ್ನು ಸಂಘಟಿತ ಹೋರಾಟಕ್ಕೆ ಪ್ರೇರಿಪಿಸಿದ ಮೊದಲ ರಾಜನಾಗಿದ್ದಾನೆ. ಹೈದರಾಲಿ ಮತ್ತು ಟಿಪ್ಪು ಬ್ರಿಟಿಷರ ವಿರುದ್ಧ ನಡೆಸಿದ ಯುದ್ಧಗಳಲ್ಲಿಯೂ ಹೋರಾಡಿದ್ದಾನೆ. ಇದೇ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪುವಿನ ಸಹಾಯ ಕೇಳಲು ಹೋದ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಸಹಾಯ ಮಾಡುವುದಾಗಿ ಹಾಕಿದ ಷರತ್ತಿಗೆ ಧೊಂಡಿಯ ಒಪ್ಪಲಿಲ್ಲ. ಅವನ ಶಕ್ತಿ-ಸಾಮರ್ಥ್ಯ ತಿಳಿದಿದ್ದ ಟಿಪ್ಪು ಈತ ಮುಂದೊಂದು ದಿನ ತನ್ನ ವಿರುದ್ಧವೇ ತಿರುಗಿ ಬೀಳಬಹುದೆಂಬ ಅನುಮಾನದಿಂದ ಮೋಸದಿಂದ ಸೆರೆಮನೆಯಲ್ಲಿ ಬಂಧಿಸಿ ಬಲವಂತವಾಗಿ ಮತಾಂತರಗೊಳಿಸಿದ. ಆದರೆ, ಇದನ್ನು ಮುಸ್ಲಿಂ ಇತಿಹಾಸಕಾರರು ಟಿಪ್ಪುವಿಗೆ ಶರಣಾಗತನಾಗಿ ಮತಾಂತರಗೊಂಡು ಹೆಸರನ್ನು ಬದಲಾಯಿಸಿಕೊಂಡಿದ್ದಾನೆ ಎಂಬುದಾಗಿ ತಪ್ಪಾಗಿ ಚಿತ್ರಿಸಿದ್ದಾರೆ ಎಂದು ವಿವರ ನೀಡಿದರು.


    ಅತ್ಯಂತ ಬಲಿಷ್ಟ ಯೋಧನಾಗಿದ್ದ ಧೊಂಡಿಯ ಬ್ರಿಟಿಷರನ್ನು ಅದೆಷ್ಟು ಕಾಡಿಸಿದ್ದನೆಂದರೆ, ಧೊಂಡಿಯ ವಾಘನ ವಿರುದ್ಧದ ಜಯವನ್ನು ಈಸ್ಟ್ ಇಂಡಿಯಾ ಕಂಪನಿ ಒಂದು ಅದ್ಭುತ ವಿಜಯ ಮತ್ತು ಅತ್ಯುನ್ನತವಾದ ರಾಜಕೀಯ ಮಹತ್ವ ಪಡೆದ ಸಂಗತಿಯೆಂದು ದಾಖಲಿಸಿದೆ. ಆದರೆ, ಇತಿಹಾಸದಲ್ಲಿ ಸತ್ಯಗಳನ್ನು ಮುಚ್ಚಿಟ್ಟು ಸುಳ್ಳುಗಳನ್ನು ವಿಜೃಂಭಿಸಲಾಗಿದೆ ಎಂದು ಆರೋಪಿಸಿದರು.


    ಭಾರತಾಂಬೆ ಮತ್ತು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇತಿಹಾಸ ತಜ್ಞ ಡಾ.ಎಸ್. ರಮೇಶ್ ಅವರು, ಟಿಪ್ಪುವನ್ನು ಮೈಸೂರು ಹುಲಿಯೆಂದು ತಪ್ಪಾಗಿ ಕರೆಯಲಾಗುತ್ತಿದೆ. ಆದರೆ, ನಿಜವಾದ ಹುಲಿಯನ್ನು ಕೊಂದವನು ಹೊಯ್ಸಳರ ಸಳ. ಕರ್ನಾಟಕದಲ್ಲಿ ದೇಶಕ್ಕಾಗಿ ತನ್ನ ಸ್ವಂತ ಮಕ್ಕಳನ್ನು ಒತ್ತೆ ಇಟ್ಟು ಹೋರಾಡಿದ ಮೊದಲ ದೊರೆ ಮುಮ್ಮುಡಿ ವೀರಬಲ್ಲಾಳ. ತನ್ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಿದ ಅತ್ಯಂತ ಬಲಿಷ್ಠ ರಾಜನಾಗಿದ್ದನು. ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಮತ್ತು ದಂಡನಾಯಕ ಮಲ್ಲಿಕಾಫರ್ ಹೊಯ್ಸಳ ರಾಜ್ಯದ ಮೇಲೆ ದಾಳಿ ನಡೆಸಿದ್ದರ ಬಗ್ಗೆ ಹಾಸನ ಮತ್ತು ಬೇಲೂರಿನಲ್ಲಿ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದರು.


    ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಅಧ್ಯಕ್ಷ ಜಿ.ಕೆ. ಮಂಜುನಾಥ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ಆದರೆ, ಬ್ರಿಟಿಷರು ಸಾಕಷ್ಟು ದಾಖಲೆಗಳನ್ನು ಕೊಂಡೊಯ್ದಿದ್ದರಿಂದ ಹಲವಾರು ಸತ್ಯಗಳು ಮರೆಮಾಚಿವೆ. ಇಂತಹ ದಾಖಲೆಗಳನ್ನು ವಾಪಸ್ ತರಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾದರೆ ಇನ್ನು ಹೆಚ್ಚಿನ ಅಗೋಚರ ವಿಷಯಗಳು ಇತಿಹಾಸದ ಪುಟಗಳಲ್ಲಿ ತೆರೆದುಕೊಳ್ಳಲಿವೆ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts