More

    ಧಾರಾಕಾರ ಮಳೆ, ಜಲಾವೃತವಾಯ್ತು ಬೆಳೆ

    ಬೆಳಗಾವಿ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಅಲ್ಲದೆ, ಅಲ್ಲಲ್ಲಿ ರಸ್ತೆ ಕುಸಿತ, ವಿದ್ಯುತ್ ಕಂಬ ಹಾಗೂ ಮರಗಳು ಉರುಳಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿಯೂ ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷಿ ಭೂಮಿಗಳಲ್ಲಿ ನೀರು ನಿಂತಿದೆ. ಕಬ್ಬು, ಮೆಕ್ಕೆಜೋಳ, ವಿವಿಧ ತರಕಾರಿ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ, ಬಳ್ಳಾರಿ ನಾಲಾ ತೀರದಲ್ಲಿರುವ ಕಬ್ಬು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣ ಮುಳುಗಿವೆ.

    ಸೇತುವೆ ಮುಳುಗಡೆ: ಕಳೆದ ನಾಲ್ಕೈದು ದಿನಗಳಿಂದ ಸರಿಯಾಗಿ ಸೂರ್ಯನ ದರ್ಶನವೇ ಆಗಿಲ್ಲ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ಘಟಪ್ರಭಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ 20ಕ್ಕೂ ಹೆಚ್ಚು ಸೇತುವೆಗಳು ಹಾಗೂ 10ಕ್ಕೂ ಹೆಚ್ಚು ಬಾಂದರ್‌ಗಳು ಸಂಪೂರ್ಣ ಮುಳುಗಡೆಯಾಗಿವೆ. ಇದರಿಂದಾಗಿ ನದಿಯ ಎರಡೂ ದಡದಲ್ಲಿರುವ ಗ್ರಾಮಗಳ ನಿವಾಸಿಗಳಿಗೆ ಸಂಪರ್ಕ ಕಡಿತವಾಗಿದ್ದು, ಸಂಚಾರ ಸಮಸ್ಯೆ ಉಂಟಾಗಿದೆ. ಜತೆಗೆ ವಿದ್ಯುತ್ ಸಹ ಇಲ್ಲದಿರುವುದರಿಂದ ಜನರು ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ.

    2,500 ಹೆಕ್ಟೇರ್ ಜಲಾವೃತ: ಬೆಳಗಾವಿ, ಹುಕ್ಕೇರಿ, ಮೂಡಲಗಿ, ಗೋಕಾಕ ಹಾಗೂ ಖಾನಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಬ್ಬು, ಭತ್ತ, ಮೆಕ್ಕೆಜೋಳ, ವಿವಿಧ ತೋಟಗಾರಿಕೆ ಬೆಳಗಳು ಸೇರಿದಂತೆ ಸುಮಾರು 2,500 ಹೆಕ್ಟೇರ್‌ಗೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡಿವೆ. ಕೆಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಮತ್ತೊಂದೆಡೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು, ಸೋಯಾಬೀನ್, ಅವರೆ ಬೆಳಗಳು ಮೊಳಕೆ ಹಂತದಲ್ಲಿದ್ದು, ಮಳೆ ಮುಂದುವರಿದರೆ ಹಾನಿಗೊಳ್ಳಲಿವೆ.

    ಕುಂದಾನಗರಿಯಲ್ಲಿ ಅವಾಂತರ

    ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳು ಮತ್ತು ದಂಡು ಮಂಡಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ದಿನವೂ ಮಳೆ ಸುರಿಯುತ್ತಿರುವುದರಿಂದ ಚರಂಡಿಗಳು ಬ್ಲಾಕ್ ಆಗಿ ರಸ್ತೆಯ ಮೇಲೆ ಮಲೀನ ನೀರು ಹರಿಯುತ್ತಿದೆ. ಮಹಾಂತೇಶ ನಗರದ ಹೆದ್ದಾರಿಯ ಸರ್ವಿಸ್ ರೋಡ್ ಕುಸಿತಗೊಂಡಿದೆ. ಚರಂಡಿಗಳಲ್ಲಿ ಕಸ ತುಂಬಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಒಂದೇ ಸ್ಥಳದಲ್ಲಿ ಸಂಗ್ರಹಗೊಳ್ಳುತ್ತಿವೆ. ಹೀಗಾಗಿ ಸಮೀಪದಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಪಾಲಿಕೆ ಹಾಗೂ ದಂಡು ಮಂಡಳಿ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ನದಿ ದಡದ ಸಮೀಪದಲ್ಲಿ ಜಲಾವೃತಗೊಂಡಿರುವ ಬೆಳೆಗಳ ಹಾನಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಜಿಲ್ಲೆಯಲ್ಲಿ ಕೆಳ ಹಂತದಲ್ಲಿರುವ ಪ್ರಮಾಣದ ಸೇತುವೆಗಳು ಮುಳುಗಡೆಯಾಗಿವೆ. ಆದರೆ, ಯಾವುದೇ ರೀತಿಯ ಅಪಾಯ ಇಲ್ಲ. ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಪ್ರಮಾಣ 3 ಲಕ್ಷ ಕ್ಯೂಸೆಕ್ ಬಂದರೆ ಮಾತ್ರ ಪ್ರವಾಹ ಉದ್ಭವಿಸುತ್ತದೆ. ಸದ್ಯ ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ.
    | ಎಂ.ಜಿ. ಹಿರೇಮಠ. ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts