More

    ಧಾರವಾಡದಲ್ಲಿ ಶೀಘ್ರವೇ ಕೇಂದ್ರ ಸ್ಥಾಪನೆ

    ಹುಬ್ಬಳ್ಳಿ: ನಗರದ ಕ್ಲಬ್ ರಸ್ತೆಯ ಆಧಾರ್ ಸೇವಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಧಾರವಾಡದ ಎಸ್ಪಿ ಕಚೇರಿ ಬಳಿಯೂ ಒಂದು ಆಧಾರ್ ಸೇವಾ ಕೇಂದ್ರವನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.

    ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಕಾರ್ಡ್ ಮಾಡಿಸುವುದಕ್ಕಾಗಿ ಬಂದಿದ್ದ ಸಾರ್ವಜನಿಕರು ಹಾಗೂ ಕೇಂದ್ರದ ಉದ್ಯೋಗಿಗಳೊಂದಿಗೆ ಮಾತನಾಡಿದರು.

    ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಆಧಾರ್ ಕಾರ್ಡ್ ಪಡೆಯುವುದಕ್ಕಾಗಿ ಜನ ರಾತ್ರಿ ಹಾಗೂ ಬೆಳಗಿನಜಾವದಿಂದ ಸರದಿಯಲ್ಲಿ ನಿಲ್ಲುತ್ತಿದ್ದರು. ಜನರ ಸಮಸ್ಯೆ ಪರಿಹರಿಸುವುದಕ್ಕಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ ಅವರೊಂದಿಗೆ ರ್ಚಚಿಸಿ ಹುಬ್ಬಳ್ಳಿಯಲ್ಲಿ ಸೇವಾ ಕೇಂದ್ರ ಪ್ರಾರಂಭಿಸಿದ್ದಾಗಿ ತಿಳಿಸಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳು ಆಧಾರ್ ಕಾರ್ಡ್​ನೊಂದಿಗೆ ಲಿಂಕ್ ಆಗಿವೆ. ಹೀಗಾಗಿ ತಿದ್ದುಪಡಿಗೆ ಗೆಜೆಟೆಡ್ ಅಧಿಕಾರಿಯ ಸಹಿ ಅಗತ್ಯ ಎಂದರು.

    ಆಧಾರ್ ಕಾರ್ಡ್​ನಿಂದಾಗಿ 4 ವರ್ಷಗಳಲ್ಲಿ ವಿವಿಧ ಯೋಜನೆಗಳಿಂದ ಕೇಂದ್ರ ಸರ್ಕಾರಕ್ಕೆ 1.25 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಇದಕ್ಕೂ ಮೊದಲು ಈ ಹಣ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಉಳಿತಾಯವಾಗಿರುವ ಹಣವನ್ನು ಜನರ ಕಲ್ಯಾಣಕ್ಕಾಗಿ ಉಪಯೋಗಿಸಲಾಗುವುದು ಎಂದರು.

    ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ವಿಷಯ ಗಮನಕ್ಕೆ ಬಂದಿದೆ. ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಪಾಲಿಕೆ ಮಾಜಿ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿ ಹು-ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ ಮತ್ತಿತರರಿದ್ದರು.

    ವೃದ್ಧೆಗೆ ಧೈರ್ಯ ತುಂಬಿದ ಜೋಶಿ

    ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದ ವೃದ್ಧೆಯೊಬ್ಬರು ತಮ್ಮ ಕೈಬೆರಳ ರೇಖೆ ಮಾಸಿದ್ದರಿಂದ ಸಮಸ್ಯೆಯಾಗುತ್ತಿದೆ. ತಿದ್ದುಪಡಿ ಆಧಾರ್ ಕಾರ್ಡ್ ಪಡೆಯುವುದು ಕಷ್ಟವಾಗಿದೆ. ಹೊಸ ಆಧಾರ್ ಕಾರ್ಡ್ ಸಿಗದಿದ್ದರೆ ಪ್ರಾಣ ಬಿಡುತ್ತೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಎದುರು ಅಹವಾಲು ತೋಡಿಕೊಂಡರು.

    ಅಜ್ಜಿಯ ಎಲ್ಲ ಬೆರಳುಗಳನ್ನು ಪರಿಶೀಲಿಸಿ, ಆಧಾರ್ ಕಾರ್ಡ್​ನಲ್ಲಿ ತಿದ್ದುಪಡಿ ಮಾಡುವಂತೆ ಸೇವಾ ಕೇಂದ್ರದ ಸಿಬ್ಬಂದಿಗೆ ಸೂಚಿಸಿದ ಸಚಿವ ಜೋಶಿ, ಯಾವುದೇ ಕಾರಣಕ್ಕೂ ನಿಮ್ಮ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ

    ಧಾರವಾಡ: ಭಾರತ ಸರ್ಕಾರದ ಸ್ಕಾಲರ್​ಶಿಪ್ ಪಡೆದು ದೇಶ ದ್ರೋಹದ ಘೊಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ಘೊಷಣೆ ಕೂಗಿದರೆ ಏನೂ ಆಗುವುದಿಲ್ಲ ಎಂಬ ಮನೋಭಾವ ಕೆಲವರಲ್ಲಿದೆ. ಆದರೆ, ದೇಶದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಬಿಎಸ್​ವೈ ಸರ್ಕಾರ ಇದೆ ಎಂಬುದು ಅವರಿಗೆ ಗೊತ್ತಿಲ್ಲ ಎಂಬಂತೆ ಕಾಣುತ್ತದೆ. ಅಂತಹವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ ಸಂದರ್ಭದಲ್ಲಿ ಪಾಕ್ ಪರ ಕೆಲ ಶಕ್ತಿಗಳು ಸಹ ತೊಡಗಿದ್ದವು. ಪ್ರಜಾಪ್ರಭುತ್ವದ ಅಡಿ ಹೋರಾಟ ನಡೆಸಲು ಯಾವುದೇ ವಿರೋಧ ಇಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡದೆ ಶಾಂತಿ ರೀತಿಯಿಂದ ಯಾವುದೇ ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಅಭ್ಯಂತರ ಇಲ್ಲ. ಆದರೆ, ಹಾನಿ ಮಾಡಿ ಹೋರಾಟ ನಡೆಸಿದರೆ ಸೂಕ್ತ ಕ್ರಮವಾಗಲಿದೆ ಎಂದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ನ ಕೆಲ ನಾಯಕರು ದೇಶದ ವಿರುದ್ಧ ಘೊಷಣೆ ಕೂಗಿದವರಿಗೆ ಬೆಂಬಲ ನೀಡುವುದರಿಂದ, ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಕೆಲವರಿಗೆ ಬಂದಿದೆ. ಆದರೆ ಈಗಿನ ಸರ್ಕಾರ ಇಂತಹವರನ್ನು ಬಿಡುವುದಿಲ್ಲ ಎಂದರು.

    ಒದ್ದು ಒಳಗೆ ಹಾಕಿ

    ಧಾರವಾಡ: ದೇಶದ್ರೋಹ ಕೆಲಸದಲ್ಲಿ ತೊಡಗಿರುವವರು ಯಾವುದೇ ಪಕ್ಷದ ಹಿನ್ನೆಲೆ ಹೊಂದಿರಲಿ. ಮೊದಲು ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶದಿಂದ ಹೇಳಿದರು.

    ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ಕೆಲಸ ಮಾಡುವವರ ಹಿಂದೆ ರಾಜಕೀಯ ಬೆಂಬಲ ಇದೆ ಎಂದು ಸಬೂಬು ಹೇಳುತ್ತಾರೆ. ಆದರೆ, ಆ ರೀತಿ ಕೆಲಸ ಮಾಡುವವರ ಹಿನ್ನೆಲೆ ಏನೇ ಇರಲಿ, ದೇಶದ್ರೋಹದ ವಿಚಾರ ಬಂದಾಗ ಮೊದಲು ದೇಶ ನೋಡಬೇಕು. ಅಂತಹವರನ್ನು ಒದ್ದು ಒಳಗೆ ಹಾಕಿ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

    ರಾಜ್ಯದಲ್ಲಿ ಸರ್ಕಾರದ ಬಗ್ಗೆ ಭಯವೇ ಇಲ್ಲದಂತಾಗಿದೆ. ನಮ್ಮ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಬದಲು ಒಂದು ಪಕ್ಷದ ಸರ್ಕಾರ ಇದೆ ಎನಿಸುತ್ತಿದೆ. ಹೀಗಾಗಿ ಏನು ಬೇಕಾದರೂ ಮಾಡಿದರೂ ನಡೆಯುತ್ತದೆ ಎಂಬ ಮನಸ್ಥಿತಿ ಬಂದಿದೆ. ಇದು ಹೋಗಬೇಕು. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

    ನಕಲಿ ಗಾಂಧಿ ಕುಟುಂಬದ ಚೇಲಾಗಳು

    ನಕಲಿ ಗಾಂಧಿ ಕುಟುಂಬದ ಚೇಲಾಗಳಿಗೆ ನರೇಂದ್ರ ಮೋದಿ ಪ್ರಧಾನಿಯಾಗಿರುವುದನ್ನು ಸಹಿಸಲಾಗುತ್ತಿಲ್ಲ. ಇದೇ ಕಾರಣಕ್ಕಾಗಿ ಬೀದರ್ ಜಿಲ್ಲೆಯ ಶಾಲೆಯಲ್ಲಿ ಪ್ರಧಾನಿ ವಿರುದ್ಧ ಪ್ರದರ್ಶಿಸಿದ್ದ ನಾಟಕವನ್ನು ಕಾಂಗ್ರೆಸ್​ನವರು ಬೆಂಬಲಿಸುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.

    ಬೀದರ್ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ಪ್ರಧಾನಿ, ರಾಷ್ಟ್ರಪತಿ ವಿರುದ್ಧ ಮಾತನಾಡಿದವರನ್ನು ಸುಮ್ಮನೆ ಬಿಡಬೇಕೆ ಎಂದು ಪ್ರಶ್ನಿಸಿದರು.

    ಮುಖ್ಯ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ದೇಶದ ಗೌರವಕ್ಕೆ ಧಕ್ಕೆ ತರುವಂತಿದೆ. ಇದು ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts