More

    ಧರ್ಮವೊಂದೇ ಎಲ್ಲರ ಆಶಾಕಿರಣ – ರಂಭಾಪುರಿ ಶ್ರೀಗಳ ಅಭಿಮತ -ನಾಗರಸನಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜೆ 

    ದಾವಣಗೆರೆ:ಜೀವನದ ಉನ್ನತಿಗೆ ನೀತಿ-ನಿಯಮಗಳು ಮೂಲವಾಗಿವೆ. ಸೂರ್ಯ ಚಂದ್ರರು ಹಗಲು-ರಾತ್ರಿಯಲ್ಲಿ ಬೆಳಕು ನೀಡಬಲ್ಲರು. ಆದರೆ ಸರ್ವ ಕಾಲಕ್ಕೂ ಎಲ್ಲರಿಗೂ ಬೆಳಕು ನೀಡುವ ಧರ್ಮವೊಂದೇ ಆಶಾಕಿರಣ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ನಾಗರಸನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
    ಮಾನವನ ಬದುಕು ಒತ್ತಡಗಳಿಂದ ಕೂಡಿದೆ. ಜಜ್ಜರಿತ ಮನಸ್ಸಿಗೆ ಶಾಂತಿ- ನೆಮ್ಮದಿ ಮರೀಚಿಕೆಯಾಗಿದೆ. ಮನುಷ್ಯರು, ಧರ್ಮ ಕೊಡುವ ಫಲಗಳನ್ನು ಬಯಸುತ್ತಿದ್ದಾರೆಯೇ ಹೊರತಾಗಿ ಆ ಧರ್ಮದ ಪರಿಪಾಲನೆ ಮಾಡುತ್ತಿಲ್ಲ. ಹೀಗಾಗಿ ಜೀವನ ಅಸಮಾಧಾನ-ಅತೃಪ್ತಿಯಿಂದ ಕೂಡಿದೆ ಎಂದು ವಿಷಾದಿಸಿದರು.
    ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ಪ್ರಾಪ್ತವಾಗಲಿದೆ. ಜಗದ್ಗುರು ರೇಣುಕಾಚಾರ್ಯರು ಇಷ್ಟಲಿಂಗದಲ್ಲಿರುವ ಅದ್ಭುತ ಶಕ್ತಿಯನ್ನು ಪ್ರತಿಪಾದಿಸಿದ್ದಾರೆ. ಜನರು ಬೇಡಿದ ಇಷ್ಟಾರ್ಥಗಳನ್ನು ಕೊಡುವ ಶಕ್ತಿ ಇಷ್ಟಲಿಂಗಕ್ಕಿದೆ ಎಂದು ತಿಳಿಸಿದರು.
    ನಾಗರಸನಹಳ್ಳಿ ಗ್ರಾಮದ ಭಕ್ತರು ಒಗ್ಗೂಡಿ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಇಷ್ಟಲಿಂಗ ಪೂಜೆ ಆಯೋಜನೆ ಮಾಡಿರುವುದು ಹರುಷ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ಹರಪನಹಳ್ಳಿಯ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ರಾಮಘಟ್ಟದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ನುಡಿ ನಮನ ಸಲ್ಲಿಸಿದರು. ಬಿಜೆಪಿ ಮುಖಂಡ ಅಜಿತ್‌ಕುಮಾರ್, ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಎಸ್.ಬಿ.ಅಜಯನ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಡಿ.ಆರ್.ಧನಂಜಯ ಸ್ವಾಗತಿಸಿದರು. ಶ್ಯಾಗಲೆ ಕೆ.ಎಂ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ.ರುದ್ರೇಶ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts