More

    ಧರೆಗುರುಳಿದ 20ಕ್ಕೂ ಹೆಚ್ಚು ವಿದ್ಯುತ್ ಕಂಬ

    ಪಾಂಡವಪುರ: ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮಳೆ ರಭಸಕ್ಕೆ ಮನೆಗಳ ಗೋಡೆ, ಛಾವಣಿ ಕುಸಿದಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ.

    ತಾಲೂಕಿನಲ್ಲಿ 50ಕ್ಕೂ ಹೆಚ್ಚು ಮನೆಗಳು, 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ತಾಲೂಕಿನ ತೊಣ್ಣೂರು ಕೆರೆ, ಹಾರೆಗೊಟ್ಟೆ ಕೆರೆ, ಸುಂಕತೊಣ್ಣೂರು, ಅಮೃತಿ, ಹರವು ಗ್ರಾಮದ ಮೊಸಳೆ ಹಳ್ಳ, ಮೇಲುಕೋಟೆ ಸಮೀಪದ ಕೆರೆಕಟ್ಟೆಗಳು, ಹುಣಸೆಕಟ್ಟೆತೋಪು ಕೆರೆ, ಪಟ್ಟಣದ ಹಿರೋಡೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

    ಈ ನಡುವೆ ಕೆರೆ ಕೋಡಿ ಬಿದ್ದು ರೈತರ ಜಮೀನಿಗೆ ನುಗ್ಗಿದೆ. ಬೆಳೆ ನಾಶದ ಜತೆಗೆ ಜಮೀನಿನ ಫಲವತ್ತಾದ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿದೆ. ಭತ್ತ, ಕಬ್ಬು, ಹೂವು, ಟೊಮ್ಯಾಟೊ ಸೇರಿದಂತೆ ಎಲ್ಲ ರೀತಿಯ ಬೆಳೆಗಳು ಮಳೆಯ ರೌದ್ರ ನರ್ತನಕ್ಕೆ ಕೊಚ್ಚಿ ಹೋಗಿದೆ.

    ಕೆರೆತೊಣ್ಣೂರಿಗೆ ಜಲ ದಿಗ್ಬಂಧನ: ಐತಿಹಾಸಿಕ ತೊಣ್ಣೂರು ಕೆರೆ ಕೋಡಿ ಬಿದ್ದು ಒಂದು ಭಾಗವನ್ನು ಆವರಿಸಿದ್ದರೆ, ಗ್ರಾಮದ ಹಾರೆಗೊಟ್ಟೆ ಕೆರೆಯಲ್ಲೂ ನೀರು ಶೇಖರಣೆಯಾಗಿದೆ. ಈ ಕೆರೆ ಕೋಡಿ ಬೀಳಲು ಸಾಧ್ಯವಾಗದ ಕಾರಣ ಪಕ್ಕದಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಜಲಾವೃತಗೊಂಡಿದೆ.

    ಕೆರೆಯ ನೀರನ್ನು ಹೊರ ಹಾಕಲು ಜೆಸಿಬಿ ಮುಖಾಂತರ ಗ್ರಾಮದ ಮುಖ್ಯ ರಸ್ತೆಯನ್ನು ಕೊರೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. ನೀರಿನ ಒಳಹರಿವು ಕೂಡ ಹೆಚ್ಚಾಗಿದ್ದು, ಗ್ರಾಮದ ಸಂಪರ್ಕ ರಸ್ತೆ ಕಡಿತವಾಗಿ ಇಡೀ ಗ್ರಾಮ ಜಲ ದಿಗ್ಬಂಧನಕ್ಕೊಳಗಾಗಿದೆ.

    ಯುವಕರ ಆಕ್ರೋಶ: ಅವೈಜ್ಞಾನಿಕ ಕಾಮಗಾರಿಯಿಂದ ಹರವು ಗ್ರಾಮ ಸಮೀಪದ ಮೊಸಳೆಹಳ್ಳ ತುಂಬಿ ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದೆ. ಗುತ್ತಿಗೆದಾರರು ವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರೆ ನೀರು ರಸ್ತೆಯನ್ನು ವ್ಯಾಪಿಸುತ್ತಿರಲಿಲ್ಲ ಎಂಬ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಾಸಕ, ಅಧಿಕಾರಿಗಳ ವಿರುದ್ಧ ಆಕ್ರೋಶ: ತಾಲೂಕಿನ ತೊಣ್ಣೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಾಗಲೆಲ್ಲ ಲಕ್ಷ್ಮೀಸಾಗರ ಮತ್ತು ತೊಣ್ಣೂರು ಗ್ರಾಮಕ್ಕೆ ತೊಂದರೆ ಎದುರಾಗುತ್ತಲೇ ಇದೆ. ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಅಧಿಕಾರಿಗಳು ಪರಿಶೀಲನೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

    8 ಸಾವಿರ ಕೋಳಿ ಮರಿ ಸಾವು: ತಾಲೂಕಿನ ಚಂದ್ರೆ ಗ್ರಾಮದ ಸ್ವಾಮೀಗೌಡ ಎಂಬುವರ ಕೋಳಿ ಫಾರ್ಮ್‌ಗೆ ಮಳೆ ನೀರು ನುಗ್ಗಿದ ಪರಿಣಾಮ 8 ಸಾವಿರ ಕೋಳಿ ಮರಿಗಳು ಮೃತಪಟ್ಟಿವೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts