More

    ಧಾರವಾಡ ಪಾಲಿಕೆ ಸಭಾಭವನ ನವೀಕರಣ ಆರಂಭ

    ಧಾರವಾಡ: ಮಹಾನಗರ ಪಾಲಿಕೆಯ ಧಾರವಾಡ ಕಚೇರಿಗೂ ಕೇಂದ್ರ ಸ್ಥಾನ ನೀಡಲು ನಿರ್ಧರಿಸಿದ ಬೆನ್ನಲ್ಲೇ ಕಚೇರಿ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಇಂತಹ ಕಾಮಗಾರಿಗಳ ಮೂಲಕ ಹು-ಧಾ ಅಭಿವೃದ್ಧಿಯಲ್ಲಿ ತಾರತಮ್ಯ ಇಲ್ಲ ಎಂಬುದನ್ನು ಜನರಿಗೆ ತೋರಿಸುವ ಪ್ರಯತ್ನ ನಡೆದಿದೆ.

    ಚುನಾವಣೆಗೂ ಪೂರ್ವ ಹುಬ್ಬಳ್ಳಿ-ಧಾರವಾಡದಲ್ಲಿ 67 ವಾರ್ಡ್​ಗಳಿದ್ದವು. ಅದಕ್ಕೆ ತಕ್ಕಂತೆ ಸಭಾಭವನ ನಿರ್ಮಾಣ ಮಾಡಲಾಗಿತ್ತು. 2021ರ ಆಗಸ್ಟ್​ನ ಚುನಾವಣೆಗೂ ಪೂರ್ವ ವಾರ್ಡ್ ವಿಂಗಡಣೆ ಮಾಡಿ ವಾರ್ಡ್ ಸಂಖ್ಯೆ 82ಕ್ಕೆ ಏರಿಸಲಾಗಿದೆ. ಆದರೆ, ಪಾಲಿಕೆ ಕಚೇರಿಯಲ್ಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸಭಾಭವನ ಇಲ್ಲದ ಕಾರಣ ನವೀಕರಣ ಕಾರ್ಯ ಆರಂಭಿಸಲಾಗಿದೆ.

    ಈ ಮೊದಲು ಧಾರವಾಡದಲ್ಲಿ ಪಾಲಿಕೆ ಸಾಮಾನ್ಯ ಸಭೆ ನಡೆಸುತ್ತಿರಲಿಲ್ಲ. ಪೂರ್ಣಾ ಪಾಟೀಲ ಮೇಯರ್ ಆದ (2011-12ರಲ್ಲಿ) ಸಂದರ್ಭದಲ್ಲಿ ನಗರದಲ್ಲೂ ಸಾಮಾನ್ಯ ಸಭೆ ನಡೆಸುವ ಉದ್ದೇಶದಿಂದ ಅಂದಿನ ಪಾಲಿಕೆ ಸದಸ್ಯರ ಸಂಖ್ಯೆಗೆ (67) ಅನುಗುಣವಾಗಿ ಸುವರ್ಣ ಮಹೋತ್ಸವ ಸಭಾಭವನ ನಿರ್ವಿುಸಿ, ಸಾಮಾನ್ಯ ಸಭೆಗಳನ್ನು ನಡೆಸಲು ಮುನ್ನುಡಿ ಬರೆದಿದ್ದರು.

    ಮೊದಲಿದ್ದ ಸಭಾಭವನದಲ್ಲಿ ಅಂದಾಜು 95 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದ್ಯ ವಾರ್ಡ್ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ ಎಲ್ಲರಿಗೂ ಅನುಕೂಲವಾಗುವಂತೆ ನವೀಕರಣ ಕಾರ್ಯ ನಡೆಸಿ 130 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಭಾಭವನ ನವೀಕರಣ ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ಅಂದಾಜು ವೆಚ್ಚ 46 ಲಕ್ಷ ರೂ. ಇತ್ತು. ನಂತರದಲ್ಲಿ ಇನ್ನೂ ಕೆಲ ಕಾಮಗಾರಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರಿಂದ ಅಂತಿಮ ಅಂದಾಜು ವೆಚ್ಚ 70 ಲಕ್ಷ ರೂ. ತಲುಪಿದೆ.

    ಸಭಾಭವನಕ್ಕೆ ಹೊಂದಿಕೊಂಡಿದ್ದ ಮೇಯರ್ ಕಚೇರಿಯನ್ನೂ ಸಭಾಭವನಕ್ಕೆ ಸೇರ್ಪಡೆ ಮಾಡಿದ್ದಲ್ಲದೆ, ಸಭೆಗಳಿಗೆ ಮೇಯರ್ ಆಸೀನರಾಗುವ ಸ್ಥಳವನ್ನೂ ಬದಲಾಯಿಸಲಾಗಿದೆ. ಮೇಯರ್ ಕಚೇರಿಯನ್ನು ಹಳೇ ರೆಕಾರ್ಡ್ ರೂಂಗೆ ಸ್ಥಳಾಂತರ ಮಾಡಿದ್ದು, ಆ ಕೊಠಡಿ ನವೀಕರಣ ಕಾರ್ಯವೂ ನಡೆದಿದೆ.

    ಕಾಮಗಾರಿಗಳು ಆರಂಭವಾಗಿ ಈಗಾಗಲೇ 15 ದಿನಗಳು ಕಳೆದಿದ್ದು, ಇನ್ನು ಕೆಲ ದಿನಗಳಲ್ಲೇ ಪೂರ್ಣಗೊಳ್ಳಲಿವೆ. ಆ. 29ರಂದು ನಡೆಯಲಿರುವ ಸಾಮಾನ್ಯ ಸಭೆಯನ್ನು ಧಾರವಾಡದಲ್ಲೇ ನಡೆಸುವ ಚಿಂತನೆ ನಡೆದಿದ್ದು, ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಚನೆ ಇದೆ.

    ಪಾಲಿಕೆ ಸದಸ್ಯರ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಧಾರವಾಡ ಕಚೇರಿಯ ಸಭಾಭವನ ನವೀಕರಣ ಕಾರ್ಯ ಆರಂಭಿಸಲಾಗಿದೆ. ಸಾಮಾನ್ಯ ಸಭೆ, ಇತರ ಸಭೆಗಳನ್ನು ನಡೆಸಿದಾಗ ಎಲ್ಲ ಸದಸ್ಯರು, ಅಧಿಕಾರಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಸಿದ್ಧಗೊಳಿಸಲಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.

    ಈರೇಶ ಅಂಚಟಗೇರಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts