More

    ದ್ವಿದಳ ಧಾನ್ಯ ಬೆಳೆದು ಆರೋಗ್ಯ ವೃದ್ಧಿಸಿಕೊಳ್ಳಿ-ಆರ್. ತಿಪ್ಪೇಸ್ವಾಮಿ 

    ದಾವಣಗೆರೆ: ರೈತರು ದ್ವಿದಳ ಧಾನ್ಯ ಬೆಳೆಯಲು ಹೆಚ್ಚು ಆಸಕ್ತಿ ವಹಿಸಿ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹೇಳಿದರು.

    ತಾಲೂಕಿನ ಆವರಗೆರೆ ಗ್ರಾಮದ ರೈತ ರಾಜಣ್ಣ ಅವರ ಹೊಲದಲ್ಲಿ ಶನಿವಾರ, ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
    ಹಿಂದಿನ ಕಾಲದಲ್ಲಿ ತೊಗರಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಇಂದು ರೈತರಲ್ಲಿ ಇದರ ಬಗ್ಗೆ ಉತ್ಸಾಹ ಕಡಿಮೆಯಾಗಿದೆ. ಅವರನ್ನು ಈ ಕಾರ್ಯಕ್ರಮದಡಿ ಪ್ರೇರೇಪಿಸಲಾಗುತ್ತಿದೆ. ಬೇಳೆ ಕಾಳುಗಳ ವಿಸ್ತೀರ್ಣ ಮತ್ತು ಉತ್ಪಾದಕತೆ ಹೆಚ್ಚಿಸಲು ಗಮನ ನೀಡಲಾಗುತ್ತಿದೆ ಎಂದರು.
    ಪೌಷ್ಟಿಕ ಭದ್ರತಾ ಯೋಜನೆಯಡಿ ರೈತ ರಾಜಣ್ಣ ಉತ್ತಮವಾಗಿ ತೊಗರಿ ಬೆಳೆದಿದ್ದಾರೆ. ಇತರೆ ರೈತರು ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು. ಅದರ ಉತ್ಪಾದನೆ ಹೆಚ್ಚಿಸಬೇಕು ಎಂದು ತಿಳಿಸಿದರು.
    ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಮಾತನಾಡಿ ಇಂದು ತೊಗರಿ, ಭತ್ತದ ಬದಲಾಗಿ ಅಡಕೆ ಬೆಳೆ ವಿಸ್ತೀರ್ಣ ಹೆಚ್ಚುತಿರುವುದು ಕಳವಳಕಾರಿ. ಮುಂಬರುವ ದಿನದಲ್ಲಿ ಅಡಕೆ ಬೆಳೆ ಹೆಚ್ಚಿನ ರೋಗ ಭಾದಿಸುವ ಲಕ್ಷಣಗಳಿವೆ ಎಂದರು. ರೈತರು ಆಹಾರದ ಬೆಳೆ ಹಾಗು ತರಕಾರಿಗಳನ್ನು ಹೆಚ್ಚಾಗಿ ಬೆಳೆಯಲು ಗಮನ ಹರಿಸಬೇಕೆಂದರು.
    ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವ ವಿಧಾನ ಕುರಿತು ಸಾವಯವ ಕೃಷಿ ತಜ್ಞ ನಾಗನಗೌಡ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ.ಎನ್.ಲಾವಣ್ಯ, ಸಹಾಯಕ ಕೃಷಿ ಅಧಿಕಾರಿ ವಸಂತಕುಮಾರ್, ಆತ್ಮ ವಿಭಾಗದ ಅಧಿಕಾರಿ ವೆಂಕಟೇಶ್ ಇದ್ದರು. ಕೃಷಿ ಅಧಿಕಾರಿ ಚಂದ್ರಪ್ಪ ಹುಣಸೇಹಳ್ಳಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts